ರಾಯಚೂರು | ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ನ.26ಕ್ಕೆ ರೈತ ಸಂಘದಿಂದ ಹೋರಾಟ : ಚಾಮರಸ ಮಾಲಿಪಾಟೀಲ್
ರಾಯಚೂರು : ಕೇಂದ್ರ ಸರಕಾರದ ರೈತ ವಿರೋಧಿ ಖಂಡಿಸಿ, ಸ್ವಾಮಿನಾಥನ್ ವರದಿಯ ಶಿಫಾರಸುಗಳ ಜಾರಿಗೆ ಒತ್ತಾಯಿಸಿ ನ.26ರಂದು ರಾಯಚೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಜ್ಯ ಘಟಕದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಬೆಟ್ಟದೂರು ತಿಳಿಸಿದ್ದಾರೆ.
ಮಾನ್ವಿ ಪಟ್ಟಣದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ರೈತರ ಹೋರಾಟಕ್ಕೆ ನಾಲ್ಕು ವರ್ಷಗಳು ಕಳೆದರೂ ರೈತರ ನ್ಯಾಯ ಯುತವಾದ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.
ರಾಜ್ಯದ ಎಲ್ಲ ರೈತಪರ, ದಲಿತಪರ, ಕಾರ್ಮಿಕಪರ ಸಂಘಟನೆಗಳು ಹಾಗೂ ಪ್ರಗತಿಪರರು ಒಳಗೊಂಡಂತೆ ರಾಜ್ಯದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾವನ್ನು ಸ್ಥಾಪಿಸಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ ತಾಲ್ಲೂಕು ಅಧ್ಯಕ್ಷ ಅಶೋಕ ನಿಲೋಗಲ್, ಪದಾಧಿಕಾರಿಗಳಾದ ಲಿಂಗಾರೆಡ್ಡಿ ಪಾಟೀಲ್, ಬಸವರಾಜ ಮಾಲಿಪಾಟೀಲ್. ಗೌರಪ್ಪಲಕ್ಕಂದಿನ್ನಿ, ವೆಂಕಟೇಶ ನಾಯಕ, ಜಿ.ಕೃಷ್ಣಮೂರ್ತಿ, ವೀರೇಶ ನಾಯಕ ಉಪಸ್ಥಿತರಿದ್ದರು.