ರಾಯಚೂರು | ಜಿಲ್ಲಾಡಳಿತದಿಂದ ಡಾ.ಬಾಬು ಜಗಜೀವನ ರಾಮ್ ಜಯಂತಿ ಆಚರಣೆ

ರಾಯಚೂರು : ಹಸಿರು ಕ್ರಾಂತಿ ಹರಿಕಾರ, ರಾಷ್ಟ್ರನಾಯಕ, ಭಾರತದ ಮಾಜಿ ಉಪ ಪ್ರಧಾನಮಂತ್ರಿಗಳಾದ ಡಾ.ಬಾಬು ಜಗಜೀವನ ರಾಮ್ ಅವರ ಆದರ್ಶ, ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ಯುವಪೀಳಿಗೆಗೆ ಪರಿಚಯಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ ಅವರು ಹೇಳಿದರು.
ಎ.5ರ ಶನಿವಾರ ದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಡಾ.ಬಾಬು ಜಗಜೀವನ ರಾಮ್ ಅವರ 118ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶೋಷಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾನ್ ನಾಯಕರಾದ ಡಾ.ಬಾಬುಜಗಜೀವನರಾಮ್ ಅವರು ಶೋಷಿತರ ಆಶಾಕಿರಣರಾಗಿದ್ದಾರೆ ಎಂದರು.
ನಾಲ್ಕು ದಶಕಗಳ ಕಾಲ ಸಂಸತ್ ಸದಸ್ಯರಾಗಿ ಅಪರಿಮಿತವಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರದ ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಆಹಾರ ಕೊರತೆ ಎದುರಾದಾಗ ಸುಧಾರಿತ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅಳವಡಿಸಿಕೊಂಡು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಹಸಿರುಕ್ರಾಂತಿಯ ಹರಿಕಾರ ಎಂದೇ ಖ್ಯಾತಿಯಾಗಿದ್ದಾರೆ ಎಂದರು.
ರಾಯಚೂರು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರರಾಗಿದ್ದ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ವಿಚಾರಧಾರೆಗಳು, ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮುಂದಿನ 10 ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಜೋಡಿಸಿದ್ದಲ್ಲಿ ಮಾತ್ರ ರಾಯಚೂರು ಜಿಲ್ಲೆಯನ್ನು ಮೈಸೂರು ಜಿಲ್ಲೆಯ ರೀತಿಯಲ್ಲಿ ಬದಲಾವಣೆ ಮಾಡಲು ಸಾಧ್ಯ ಎಂದರು.
ಈ ವೇಳೆ ಉಪನ್ಯಾಸಕರಾಗಿ ಮೈಸೂರು ವಿಶ್ವವಿದ್ಯಾಲಯದ ಡಾ.ಬಾಬು ಜಗಜೀವನ ರಾಮ್ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿಗಳಾದ ಡಾ.ಶ್ರೀನಿವಾಸ ಮೂರ್ತಿ ಎಂ. ಮಾತನಾಡಿರು.
ವಿವಿಧ ಗಣ್ಯರಿಂದ ಮಾಲಾರ್ಪಣೆ :
ಹಸಿರು ಕ್ರಾಂತಿ ಹರಿಕಾರ, ಭಾರತದ ಮಾಜಿ ಉಪಪ್ರಧಾನಮಂತ್ರಿಗಳಾದ ಡಾ.ಬಾಬು ಜಗಜೀವನರಾಂ ಅವರ 118ನೇ ಜಯಂತಿ ಅಂಗವಾಗಿ ನಗರದ ರೈಲ್ವೇ ನಿಲ್ದಾಣ ಹತ್ತಿರವಿರುವ ಡಾ.ಬಾಬು ಜಗಜೀವನ ರಾಮ್ ಅವರ ಪುತ್ಥಳಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್.ಭೋಸರಾಜು ಸೇರಿದಂತೆ ವಿವಿಧ ಗಣ್ಯರಿಂದ ಮಾಲಾರ್ಪಣೆ ಮಾಡಿದರು.
ಈ ವೇಳೆ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ್, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಯ ಮುಖಂಡರು ಇದ್ದರು.
ವಿದ್ಯಾರ್ಥಿಗಳಿಗೆ ಸನ್ಮಾನ :
ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಸೀತಮ್ಮ , ಚೈತ್ರ ಜ ಹಾಗೂ ಪೂಜಾ ವಿದ್ಯಾರ್ಥಿನಿಯರಿಗೆ ವಿವಿಧ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದಪ್ಪ, ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಗುರುಸಿದ್ದಯ್ಯಸ್ವಾಮಿ ಹಿರೇಮಠ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶ ನಾಯಕ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಂದ್ರ ಜಲ್ದಾರ್ ಸೇರಿದಂತೆ ಇತರರು ಇದ್ದರು.
