ರಾಯಚೂರು | ಅಮಿತ್ ಶಾ ವಿರುದ್ಧ ಜನತಾರಂಗದಿಂದ ಪ್ರತಿಭಟನೆ
ರಾಯಚೂರು : ಸಂಘ ಪರಿವಾರ ನೇತೃತ್ವದ ಕಾರ್ಪೊರೇಟ್ ಏಜೆಂಟ್ ಕೇಂದ್ರ ಸರ್ಕಾರ ದೇಶದ ಜನತೆಯ ಹಿತಾಸಕ್ತಿಯ ವಿರುದ್ಧವಾಗಿ ಅಧಿಕಾರ ಚಲಾಯಿಸುತ್ತಿದೆ ಎಂದು ಆರೋಪಿಸಿ ‘ಮನುವಾದಿ ಫ್ಯಾಸಿಸ್ಟ್ ವಿರೋಧಿ ಜನತಾ ರಂಗ ರಾಯಚೂರು’ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ವೃತ್ತದಲ್ಲಿ ಟೆಂಟ್ ಹಾಕಿ ಕೇಂದ್ರ ಸರ್ಕಾರ ಹಾಗೂ ಗೃಹಮಂತ್ರಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸಂವಿಧಾನವನ್ನು ಧಿಕ್ಕರಿಸಿ ಕಾರ್ಪೋರೆಟ್, ಮನುವಾದಿ ಏರುತ್ತಿದೆ. ಪ್ರಜಾಪ್ರಭುತ್ವ, ಜಾತ್ಯತೀತ ಗಣತಂತ್ರ ವ್ಯವಸ್ಥೆಗೆ ಸವಾಲಾಕುತ್ತಿದೆ. ಬಹುರಾಷ್ಟ್ರೀಯ, ಬಹು ಧರ್ಮಿಯ, ಬಹು ಜನಾಂಗೀಯ, ಬಹು ಸಂಸ್ಕೃತಿಯ ಇಂಡಿಯಾವನ್ನು ಬ್ರಾಹ್ಮಣವಾದಿ-ಬಂಡವಾಳವಾದಿ ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಮಿತ್ ಶಾ ಗೇಲಿ ಮಾಡಿದ್ದು, ಇಡೀ ದೇಶಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಚುನಾವಣೆ ಆಯೋಗ, ಸಿಬಿಐ, ಇತರೆ ಸಂಸ್ಥೆಗಳನ್ನು ಬಳಸಿ ವಿರೋಧ ಪಕ್ಷಗಳ ನಾಯಕರಿಗೆ ಬಗ್ಗು ಬಡಿಯಲಾಗುತ್ತಿದೆ. ಒಂದು ದೇಶ ಒಂದು ಚುನಾವಣೆ, ಜಿಎಸ್ ಟಿ, ಹೊಸ ಸಾರಿಗೆ ನೀತಿ, ಸಿಆರ್ ಪಿಯ ಬದಲಾವಣೆಯ ಮೂಲಕ ಗಣತಂತ್ರದ ಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜನತಾರಂಗದ ಮುಖಂಡರಾದ ಎಂ ಆರ್ ಬೇರಿ, ಎಂ.ಗಂಗಾಧರ, ಜಿ.ಅಮರೇಶ, ಜಾನ್ ವೆಸ್ಲಿ, ಆಂಜನೇಯ ಕುರುಬದೊಡ್ಡಿ, ಖಾಜಾಅಸ್ಲಂ ಅಹ್ಮದ್, ವಿಜಯರಾಣಿ, ಶಿವಕುಮಾರ ಮ್ಯಾಗಳಮನಿ, ಮಾರೆಪ್ಪ ಹರವಿ, ಹೇಮರಾಜ್ ಅಸ್ಕಿಹಾಳ, ವಿಶ್ವನಾಥ ಪಟ್ಟಿ, ಶ್ರೀನಿವಾಸ ಕೊಪ್ಪರ, ಫೈಜುದ್ದೀನ್, ಜಮಾಲ್, ಮಲ್ಲಯ್ಯಕಟ್ಟಿಮನಿ, ಉಪಸ್ಥಿತರಿದ್ದರು.