ರಾಯಚೂರು ಮಹಾನಗರಪಾಲಿಕೆ ಸಭೆ; ಸದಸ್ಯರ ಬಹಿಷ್ಕಾರ
ರಾಯಚೂರು: ಹೊಸದಾಗಿ ಘೋಷಣೆಯಾಗಿರುವ ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತಾ ಸಭೆಯು ಗೊಂದಲದ ಗೂಡಾಗಿದ ಘಟನೆ ನಡೆಯಿತು.
ರಾಯಚೂರು ಮಹಾನಗರ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷೆ ನರಸಮ್ಮ ಮಾಡಗಿರಿ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಗೆ ಹಾಜರಾಗಿದ್ದ ಆಡಳಿತರೂಢ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಅನಧಿಕೃತವಾಗಿ ಸಭೆ ನಡೆಸಲಾಗುತ್ತಿದೆ, ಪೌರಾಯುಕ್ತರಿಲ್ಲದೇ ಸಭೆ ನಡೆಸುವುದು ಸಮಂಜಸವಲ್ಲ, ತಮಗೆ ಅಗತ್ಯವಾದ ವಿಷಯಗಳನ್ನು ಮುಂದಿಟ್ಟುಕೊಂಡು ಸಭೆ ಮಾಡುತ್ತಿರುವುದು ಸರಿಯಲ್ಲ, ಅಧಿಕಾರಿ, ಸಿಬ್ಬಂದಿ ಸದಸ್ಯರ ಮಾತುಗಳಿಗೆ ಬೆಲೆನೇ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆ ಬಹಿಷ್ಕರಿಸಿ ಹೊರನಡೆದರು.
ನಗರದ 35 ವಾರ್ಡ್ ಗಳಲ್ಲಿ ಘನ್ಯಾಜ್ಯ ವಿಲೇವಾರಿ, ಚರಂಡಿ ಸ್ವಚ್ಛತೆ ಹಾಗೂ ರಸ್ತೆಗಳ ಸ್ವಚ್ಛತೆಗಾಗಿ ರಚಿಸಿದ್ದ ತಂಡವನ್ನು ರದ್ದುಪಡಿಸಿ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದು, ಸಭೆಗೆ ಯಾಕೆ ಪೌರಾಯುಕ್ತರು ಬಂದಿಲ್ಲ, ಉಳಿದ ಇಲಾಖೆ ಅಧಿಕಾರಿ, ಸಿಬ್ಬಂದಿ ಸಹ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸದಸ್ಯರು ಆರೋಪಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಸಾಜಿದ್ ಸಮೀರ್, ಹಿರಿಯ ಸದಸ್ಯರಾದ ಜಯಣ್ಣ, ಎನ್.ಶ್ರೀನಿವಾಸರೆಡ್ಡಿ, ಜಿಂದಪ್ಪ, ನರಸರೆಡ್ಡಿ, ಶಶಿರಾಜ ಸೇರಿ ಉಪಸ್ಥಿತರಿದ್ದರು.