ರಾಯಚೂರು | ಬೀದಿ ಬದಿ ವ್ಯಾಪಾರಸ್ಥರು, ಮುಖಂಡರ ಸಭೆ
ರಾಯಚೂರು : ನ್ಯಾಯಾಲಯದ ಆದೇಶ ಹಿನ್ನಲೆಯಲ್ಲಿ ರಸ್ತೆ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ನಿರ್ದೇಶನ ನೀಡಿದ್ದು, ಈಗಾಗಲೇ ತೆರವುಗೊಳಿಸಿದ ಪ್ರಮುಖ ರಸ್ತೆಗಳಲ್ಲಿ ಯಾವುದೇ ರೀತಿಯ ವ್ಯಾಪಾರ ವಹಿವಾಟಿಗೆ ಅವಕಾಶ ಕೊಡುವುದಿಲ್ಲ ಎಂದು ಸಿಂಧನೂರು ತಹಶೀಲ್ದಾರ ಅರುಣ್ ಹೆಚ್.ದೇಸಾಯಿ ತಿಳಿಸಿದರು.
ರಸ್ತೆ ಒತ್ತುವರಿ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಹಿನ್ನಲೆಯಲ್ಲಿ ಶನಿವಾರ ಸಿಂಧನೂರಿನ ತಹಶೀಲ್ದಾರ ಕಚೇರಿಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು, ಮುಖಂಡರ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಹಣ್ಣು ಮತ್ತು ತರಕಾರಿ, ಮೆಕ್ಯಾನಿಕ್ ಅಂಗಡಿಗಳನ್ನು ನಡೆಸಲು ಜಾಗದ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು. ನಗರಸಭೆಯಿಂದ ಈಗಾಗಲೇ ನಗರದ ದೇವರಾಜು ಅರಸು ಮಾರುಕಟ್ಟೆಯಲ್ಲಿ ತರಕಾರಿ ಮತ್ತು ತಳ್ಳುಬಂಡಿ ಹಣ್ಣು ವ್ಯಾಪಾರಿಗಳಿಗೆ ಜಾಗದ ವ್ಯವಸ್ಥೆ ಮಾಡಲಾಗಿದೆ ಎಂದು ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದರು.
ಗಂಗಾವತಿ ರಸ್ತೆಯಲ್ಲಿರುವ ಸಹಕಾರಿ ಇಲಾಖೆಯ ಜಾಗ, ಎಪಿಎಂಸಿಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಆವರಣದಲ್ಲಿ ಹಾಗೂ ಪ್ರಮುಖ ಬೀದಿಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಮುಖಂಡರು, ವ್ಯಾಪಾರಸ್ಥರು ಪಟ್ಟು ಹಿಡಿದರು. ಇದಕ್ಕೆ ಒಪ್ಪದ ತಾಲ್ಲೂಕು ಆಡಳಿತ ಜಿಲ್ಲಾಧಿಕಾರಿಗಳು ಸೂಕ್ತ ನಿರ್ದೇಶನ ನೀಡಿದ್ದು, ಈಗಾಗಲೇ ತೆರವುಗೊಳಿಸಿದ ಪ್ರಮುಖ ರಸ್ತೆಗಳಲ್ಲಿ ಯಾವುದೇ ರೀತಿಯ ವ್ಯಾಪಾರ ವಹಿವಾಟಿಗೆ ಅವಕಾಶ ಕೊಡುವುದಿಲ್ಲ. ಒಂದು ವಾರದಲ್ಲಿ ಸೂಕ್ತ ಜಾಗ ಗುರುತಿಸಿ ಬಾಡಿಗೆ ರೂಪದಲ್ಲಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಹಶೀಲ್ದಾರ್ ಅರುಣ್ ಹೆಚ್.ದೇಸಾಯಿ ತಿಳಿಸಿದರು.
ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆಡಳಿತ ನಡೆಸಿದ ಸಭೆ ಅಪೂರ್ಣ ಹಂತ ತಲುಪಿತು. ಸೂಕ್ತ ಜಾಗ ಒದಗಿಸುವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ವ್ಯಾಪಾರಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಬೀದಿ ಬದಿ ವ್ಯಾಪಾರಸ್ಥರು ಇದ್ದರು.