ಡಿಕೆಶಿ ಅವರನ್ನು ಬಿಟ್ಟು ರಹಸ್ಯ ಸಭೆಯನ್ನು ಮಾಡಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

Update: 2025-01-06 13:29 GMT

ಸತೀಶ್ ಜಾರಕಿಹೊಳಿ

ರಾಯಚೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಅವಶ್ಯಕತೆ ಇಲ್ಲ. 2028ಕ್ಕೆ ನಾನೇ ಸಿಎಂ ಅಭ್ಯರ್ಥಿ, ಭವಿಷ್ಯದಲ್ಲಿ ಏನಾಗುತ್ತೋ ನೋಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸಚಿವ ಎನ್.ಎಸ್.ಬೋಸರಾಜು ಅವರ ನಿವಾಸದಲ್ಲಿ ಉಪಹಾರ ಸೇವಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ಅವರನ್ನು ಬಿಟ್ಟು ರಹಸ್ಯ ಸಭೆಯನ್ನು ಮಾಡಿಲ್ಲ. ಅದು ರಹಸ್ಯ ಸಭೆಯಲ್ಲ, ಎಲ್ಲರೂ ಕೂಡಿಯೇ ಸಭೆ ಮಾಡಿದ್ದು, ಅದು ಊಟದ ಸಭೆಯಾಗಿತ್ತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಠಿಯಂತಹ ಚರ್ಚೆಗಳನ್ನು ನಡೆಸಿಲ್ಲ, ಸಚಿವ ಸಂಪುಟದ ವಿಸ್ತರಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 60% ಸರ್ಕಾರವಿದೆ ಎಂದು ಆರೋಪಿಸುವ ಬಿಜೆಪಿಗರು ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಗತ್ಯ ದಾಖಲೆಗಳೊಂದಿಗೆ ಸಾಬೀತು ಪಡಿಸಬೇಕು ಎಂದು ಸವಾಲೆಸೆದರು.

ಸಾರಿಗೆ ಬಸ್ ದರ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯವರು ಕೇಂದ್ರದ ಜಿಎಸ್ಟಿ ಹೇರಿಕೆ ಬಗ್ಗೆಯೂ ಮಾತನಾಡಬೇಕು. ಕೇಂದ್ರ ಹಣಕಾಸು ಸಚಿವರು ಹಳೆಯ ಗಾಡಿಗಳಿಗೆ ಶೇ.18 ರಷ್ಟು ಜಿಎಸ್ಟಿ ಹಾಕಿದ್ದಾರೆ. ಸಕ್ಕರೆ, ಕಾರು ಸೇರಿ ಇತರೆ ವಸ್ತುಗಳಿಗೆ ಶೇ.12 ರಷ್ಟು ಜಿಎಸ್ಟಿ ಹೇರಿದ್ದಾರೆ, ಇದರ ವಿರುದ್ಧ ಬಿಜೆಪಿಗರು ಮಾತನಾಡುವುದಿಲ್ಲ, ಬರೀ ಬಸ್ ದರದ ಕುರಿತು ವಿರೋಧ ವ್ಯಕ್ತಪಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಹಣಕಾಸಿನ ಸಮತೋಲನೆಯಿಲ್ಲದೇ ಕೆಲಸ ಮಾಡಿದ್ದರಿಂದ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್ಗಳಿಗೆ ಹಣ ಬಿಡುಗಡೆಯಾಗಿಲ್ಲ. ಈ ಹಿಂದೆ ಆಡಳಿತ ನಡೆಸಿದ ಸರ್ಕಾರದ ಅಸಮತೋಲನ ಬಜೆಟ್ ಅಡಿಯಲ್ಲಿ ಕೆಲಸ ಮಾಡಿದ್ದರಿಂದ ಇದೀಗ ಆ ಕಾಮಗಾರಿಗಳಿಗೆ ದುಡ್ಡು ಕೊಡಬೇಕಾಗಿದ್ದು, ಹೆಚ್ಚುವರಿ ಹಣವನ್ನು ಹೊಂದಿಸಲಾಗುತಿದೆ. ಸಾವಿರ ಕೋಟಿ ರೂ. ಬಜೆಟ್ ಇದೆ ಎಂದರೆ, ಆ ಮೊತ್ತದಲ್ಲಿಯೇ ಕೆಲಸ ಆಗಿದ್ದರೆ ಹಣ ಬಿಡುಗಡೆ ಮಾಡಬಹುದು. ಆದರೆ ಸಾವಿರ ಕೋಟಿ ಬಜೆಟ್ ಇಟ್ಟು, 3 ಸಾವಿರ ಕೋಟಿ ರೂ. ಕೆಲಸ ಮಾಡಲಾಗಿದೆ. ಆರ್ಥಿಕ ನೆರವಿಲ್ಲದೇ ಕೆಲಸಗಳನ್ನು ಮಾಡಿದ್ದರಿಂದ ಬಿಲ್ ಕೊಡಲು ತಡವಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ಬಂದ ನಂತರ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜು, ಸಂಸದ ಕುಮಾರ ನಾಯಕ, ಮುಖಂಡ ಮುಹಮ್ಮದ್ ಶಾಲಂ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News