ಮುಖ್ಯಮಂತ್ರಿ ಅವರ ರಾಜೀನಾಮೆ ಕೇಳುವ ಬಿಜೆಪಿ ನಾಯಕರಿಗೆ ನೈತಿಕತೆಯಿಲ್ಲ : ಸಚಿವ ಬೋಸರಾಜು
ರಾಯಚೂರು : ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣವನ್ನಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಖ್ಯಮಂತ್ರಿಯವರ ರಾಜೀನಾಮೆ ಕೇಳುವುದರಲ್ಲಿ ಅರ್ಥವಿಲ್ಲ. ರಾಜೀನಾಮೆ ಕೇಳುವುದೆ ಅವರ ಚಾಳಿಯಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ವ್ಯಂಗ್ಯವಾಡಿದರು.
ಸೋಮವಾರ ತಮಗೆ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆಂದು ಇದುವರೆಗೆ 56 ಬಾರಿ ಹೇಳಿಕೆ ನೀಡಿದ್ದಾರೆ. ಇದರಲ್ಲಿ ಏನಾದರೂ ಅರ್ಥವಿದೆಯೇ ಎಂದು ಪ್ರಶ್ನಿಸಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನ ಗೆದ್ದಿದೆ. ಕನಕಪುರದಲ್ಲಿ ನಾವು ಕೇಂದ್ರ ಸಚಿವರ ಮಗನನ್ನು ಸೋಲಿಸಿದ್ದೇವೆ. ವಿರೋಧ ಪಕ್ಷದ ನಾಯಕರು ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಬೇಕೇ ಹೊರತು ರಾಜಕೀಯವಾಗಿ ನಮ್ಮ ನಾಯಕರನ್ನು ಟೀಕೆ ಮಾಡುವುದನ್ನು ನಿಲ್ಲಿಸಲಿ.
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಜೆಪಿಯ ಆರ್.ಅಶೋಕ್, ಯಡಿಯೂರಪ್ಪ ವಿರುದ್ಧ ಪ್ರಕರಣಗಳಿವೆ. ಅಶ್ವಥ್ ನಾರಾಯಣ, ಸುಧಾಕರ್, ಶ್ರೀರಾಮುಲು, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಮೇಲೆ ಪ್ರಕರಣಗಳಿವೆ. ಅವರೆಲ್ಲರೂ ರಾಜೀನಾಮೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.