ರಾಯಚೂರು | ಬಾಲ ಕಾರ್ಮಿಕ ಪದ್ಧತಿ ಆರೋಪ : 36 ಮಕ್ಕಳ ರಕ್ಷಣೆ

Update: 2025-01-06 13:55 GMT

ರಾಯಚೂರು : ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಲು ಕರೆದುಕೊಂಡು ಹೋಗುತ್ತಿದ್ದ 6 ವಾಹನಗಳನ್ನು ತಡೆದು 36 ಮಕ್ಕಳನ್ನು ರಕ್ಷಣೆ ಮಾಡಿ ಪುನಃ ಶಾಲೆಗೆ ಸೇರಿಸಲಾಯಿತು.

ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಸೋಮವಾರದಂದು ಹಠಾತ್ ದಾಳಿ ನಡೆಸಿ 36 ಮಕ್ಕಳನ್ನು ರಕ್ಷಿಸಲಾಗಿದೆ.

ದೇವದುರ್ಗ ಕಾರ್ಮಿಕ ನಿರೀಕ್ಷಕ ಮಲ್ಲಪ್ಪ, ದೇವದುರ್ಗ ಟ್ರಾಫಿಕ್ ಪಿ.ಎಸ್.ಐ, ನಾರಾಯಣ, ಎ.ಎಸ್.ಐ ಗೋಪಾಲ, ಶಿಕ್ಷಣ ಇಲಾಖೆಯ ಇ.ಸಿ.ಓ ರಾಜನಗೌಡ, ಮಹಾದೇವಪ್ಪ, ಬಿ.ಆರ್.ಪಿಗಳಾದ ಶರಣಪ್ಪ, ಸುರೇಶ, ಟಿ.ಎ.ಮನೋಹರ ಶಾಸ್ತ್ರಿ ಹಾಗೂ ಸಿ.ಆರ್.ಪಿಗಳಾದ ಮಹಾದೇವಪ್ಪ, ಬಾಬು ಹಡಗಲಿ, ಬಸವರಾಜ್, ವೀರಭದ್ರಯ್ಯ, ವೆಂಕಟಾಂಜನೇಯ, ಅಂಬಣ್ಣ ಮದಾಳೆ ಸೇರಿದಂತೆ ಇನ್ನಿತರರು ಒಳಗೊಂಡ ಅಧಿಕಾರಿಗಳ ತಂಡ ಜಿಲ್ಲೆಯ ದೇವದುರ್ಗದ ಹೊರವಲಯದ ಸಿರವಾರ ಕ್ರಾಸ್ ಹಾಗೂ ಕೊಪ್ಪರ ಕ್ರಾಸ್ ಇತರೆ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿ ವಾಹನ ಚಾಲಕರ ಹಾಗೂ ಮಾಲಕರ ವಿರುದ್ದ ದೂರು ದಾಖಲಿಸಿದ್ದಾರೆ.

ಈ ವೇಳೆ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ನಿರ್ದೇಶಕ ಮಂಜುನಾಥ ರೆಡ್ಡಿ ಮಾತನಾಡಿ, 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಾಲಕಾರ್ಮಿಕ ಪದ್ದತಿ ಶಿಕ್ಷಾರ್ಹ ಅಪರಾಧವಾಗಿದೆ. 14 ವರ್ಷ ಮೇಲ್ಪಟ್ಟು 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ವೃತ್ತಿ ಮತ್ತು ಪ್ರಕ್ರಿಯೆಗಳಲ್ಲಿ ನಿಷೇಧಿಸಲಾಗಿದ್ದು, ಒಂದು ವೇಳೆ ಕೆಲಸಕ್ಕೆ ನೇಮಿಸಿಕೊಂಡಲ್ಲಿ ತಪ್ಪಿತಸ್ಥ ಮಾಲಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News