ಜೆಡಿಎಸ್ ರಾಜ್ಯಾಧ್ಯಕ್ಷನಾಗುವ ಬಯಕೆ ನನ್ನಲಿಲ್ಲ: ನಿಖಿಲ್ ಕುಮಾರಸ್ವಾಮಿ
ರಾಯಚೂರು : ನಾನು ಜೆಡಿಎಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಇತರ ಯಾವುದೇ ಹುದ್ದೆಗಾಗಿ ಹಪಾಹಪಿಸುತ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಬೇಕೆನ್ನುವ ಬಯಕೆ ನನಗಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಅವರಿಂದು ಸಿಂಧನೂರು ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯಾಧ್ಯಕ್ಷ ಬದಲಾವಣೆ ಪಕ್ಷದ ವೇದಿಕೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿ, ಪಕ್ಷದ ಅಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಒಂದು ವೇಳೆ ಬದಲಾವಣೆ ಮಾಡುವಂತಿದ್ದರೆ ಪಕ್ಷದಲ್ಲಿ ಹಿರಿಯರು, ಅನುಭವಿಗಳು ಇದ್ದಾರೆ. ಅವರಿಗೆ ಆದ್ಯತೆ ನೀಡಲಾಗುತ್ತದೆ. ಈಗ ಈ ವಿಷಯ ಅಪ್ರಸ್ತುತ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಜೆಡಿಎಸ್ ಎನ್‌ಡಿಎ ಅಂಗವಾಗಿರುವದರಿಂದ ಮುಂಬರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಹೊಂದಾಣಿಕೆಯೊಂದಿಗೆ ಸ್ಪರ್ಧಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿರುವ ಗೊಂದಲಗಳನ್ನು ರಾಜ್ಯ ನಾಯಕರು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ತಿರಸ್ಕಾರ ಮಾಡುವ ಕಾಲ ದೂರವಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟ ಆಡಳಿತ ನಡೆಸುತ್ತಿದ್ದು, ಮುಡಾ ಹಗರಣ, ಭೋವಿ ನಿಗಮ, ವಾಲ್ಮೀಕಿ ಅಭಿವೃದ್ದಿ ನಿಗಮ ಭ್ರಷ್ಟಾಚಾರ, ಹಾಲಿನ ದರ, ಬಸ್ ದರ ಏರಿಕೆ ಖಂಡಿಸಿ ಬಿಜೆಪಿಯೊಂದಿಗೆ ಜೊತೆಗೂಡಿ ರಾಜ್ಯದ ಜನತೆಯ ಪರ ಧ್ವನಿ ಎತ್ತುವ ಕೆಲಸ ಜೆಡಿಎಸ್ ಮಾಡುತ್ತಿದೆ. ಕಾಂಗ್ರೆಸ್ ಆಡಳಿತ ವಿರುದ್ದ ಜನತೆ ಬೇಸತ್ತಿದ್ದಾರೆ ಎಂದು ಆರೋಪಿಸಿದರು.
ಯುವ ಘಟಕದ ರಾಜ್ಯಾಧ್ಯಕ್ಷನಾಗಿ ರಾಜ್ಯಾದಾದ್ಯಂತ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದೇನೆ. ಈಗಾಗಲೇ ಏಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ರಾಯಚೂರಿಗೂ ಬರಬೇಕಿತ್ತು. ಆದರೆ ಉಪಚುನಾವಣೆ ಹಿನ್ನಲೆಯಲ್ಲಿ ಸಾಧ್ಯವಾಗಿರಲಿಲ್ಲ. ಮೈಸೂರು ಪ್ರಾಂತ್ಯದ ಜೆಡಿಎಸ್‌ಗೆ ರಾಜಕೀಯ ಶಕ್ತಿ ತುಂಬಿದೆ. ಈ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಒಲವಿದೆ. ಮುಂದಿನ ದಿನಗಳಲ್ಲಿ ಹಿರಿಯರ ಅನುಭವನಗಳನ್ನು ಪಡೆದು ಪಕ್ಷ ಸಂಘಟನೆಗೆ ದುಡಿಯುವೆ ಎಂದರು.
ಚೆನ್ನಪಟ್ಟಣ ಉಪಚುನಾವಣೆಯಲ್ಲಿ ನನ್ನ ಸೋಲಿಗೆ ನಾನಾ ಕಾರಣಗಳಿವೆ. ಮೂರು ದಿನ ಮುಂಚೆ ಗೃಹಲಕ್ಷ್ಮೀ ಯೋಜನೆಯ ಮೂರು ತಿಂಗಳ ಹಣ ಚುನಾವಣೆ ಎರಡು ದಿನಗಳು ಇರುವ ಮುನ್ನ ಮಹಿಳೆಯರ ಖಾತೆಗೆ ಹಾಕಿದರು. ರಾಜ್ಯ ಸರಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ಮತ ಪಡೆದುಕೊಂಡಿರುವುದು ನಾಚಿಕೆಗೇಡು. ಜೆಡಿಎಸ್ ಬಲಿಷ್ಠವಾಗಿದ್ದಾಗ ಮನೆಯವರು ನಿಂತುಕೊಂಡು ಚುನಾವಣೆ ಎದುರಿಸುತ್ತಾರೆ. ಸೋಲಿನ ಭೀತಿಯಿದ್ದರೆ ಕಾರ್ಯಕರ್ತರನ್ನು ಬಲಿ ಕೊಡುತ್ತಾರೆ ಎನ್ನುವ ವಿರೋಧಿಗಳ ಆರೋಪ ಸುಳ್ಳಾಗಿಸಲು ನಾನು ಸ್ಪರ್ಧೆ ಮಾಡಬೇಕಾಯಿತು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ ನಾಡಗೌಡ, ದೇವದುರ್ಗಾ ಶಾಸಕಿ ಜಿ.ಕರೆಮ್ಮ ನಾಯಕ, ಮಾನ್ವಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ರಾಯಚೂರು ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಕೊಪ್ಪಳ ಜಿಲ್ಲಾಧ್ಯಕ್ಷ ಸಿ.ವಿ.ಚಂದ್ರಶೇಖರ, ಮುಖಂಡರಾದ ಮಹಾಂತೇಶ ಪಾಟೀಲ್ ಅತ್ತನೂರು, ಶಿವಶಂಕರ ವಕೀಲ, ಬಸವರಾಜ ನಾಡಗೌಡ, ಚಂದ್ರಭೂಪಾಲ ನಾಡಗೌಡ ಸೇರಿದಂತೆ ಅನೇಕರು ಇದ್ದರು.