ರಾಯಚೂರು | ರಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಮೃತ್ಯು
ರಾಯಚೂರು : ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಭಾನುವಾರ ಸರಸ್ವತಿ (24) ಬಾಣಂತಿಯು ಮೃತಪಟ್ಟಿದ್ದು, ನವಜಾತ ಶಿಶುವಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸರಸ್ವತಿ (24) ಮೃತ ಬಾಣಂತಿ ಎಂದು ತಿಳಿದುಬಂದಿದೆ. ಮೃತ ಬಾಣಂತಿಯನ್ನು ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದವರು ಎಂದು ಹೇಳಲಾಗಿದೆ.
ಜ.2 ರಂದು ರಿಮ್ಸ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆಯಾಗಿತ್ತು. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಜ.5ರಂದು ಸಾವನ್ನಪ್ಪಿದ್ದಾರೆ. ಸದ್ಯ ವೆಂಟಿಲೇಟರ್‌ನಲ್ಲಿ ಶಿಶುವಿಗೆ ಚಿಕಿತ್ಸೆ ಮುಂದುವರಿದಿದೆ.
ಈ ಕುರಿತು ರಿಮ್ಸ್ ನಿರ್ದೇಶಕ ಡಾ.ರಮೇಶ ಬಿ.ಎಚ್ ಪ್ರತಿಕ್ರಿಯಿಸಿ, ಹೆರಿಗೆಯಾಗಿ 4 ದಿನಗಳ ಬಳಿಕ ಬಾಣಂತಿ ಸರಸ್ವತಿ ಮೃತಪಟ್ಟಿದ್ದಾರೆ. ಸರಸ್ವತಿಗೆ ಹೃದಯ ಸಂಬಂಧಿ ಕಾಯಿಲೆ, ರಕ್ತದಲ್ಲಿ ಇನ್ಫೆಕ್ಷನ್ ಹಾಗೂ ಅಧಿಕ ರಕ್ತದೊತ್ತಡದಿಂದ ಮೃತಪಟ್ಟಿದ್ದಾರೆ. ವಿವಿಧ ವಿಭಾಗದ 6 ಜನರ ವೈದ್ಯರ ತಂಡ ನಿರಂತರವಾಗಿ ಆಕೆಯನ್ನು ಬದುಕಿಸಲು ಪ್ರಯತ್ನ ಮಾಡಿದರೂ ಉಳಿಸಲು ಸಾಧ್ಯವಾಗಿಲ್ಲ. ಜಿಲ್ಲೆಯ ವಿವಿಧ ಹಳ್ಳಿಗಳಿಂದ ಬಾಣಂತಿಯರು, ಗರ್ಭಿಣಿಯರು ತುರ್ತು ಸಂದರ್ಭದಲ್ಲಿ ರೆಫರ್ ಆಗುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಚಿಕಿತ್ಸೆ ಪಡೆದು ಕೈಮಿರಿದ ಬಳಿಕ ರಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಿರುವ ಕಾರಣ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬಾಣಂತಿಯರ ಆರೋಗ್ಯದ ಬಗ್ಗೆ ತೀವ್ರ ಕಾಳಜಿಯಿಂದ ವೈದ್ಯರ ತಂಡ ಕೆಲಸ ಮಾಡುತ್ತಿದ್ದಾರೆ. ಕೊನೆಗಳಿಗೆಯಲ್ಲಿ ಇಲ್ಲಿಗೆ ದಾಖಲಾಗುತ್ತಿರುವ ಕಾರಣ ಸಾವಾಗುತ್ತಿದೆ ಎಂದು ಹೇಳಿದರು.
ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಮೃತಪಟ್ಟ ಬಾಣಂತಿಯರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು,ಇದರಲ್ಲಿ ರಿಮ್ಸ್ ಆಸ್ಪತ್ರೆಯಲ್ಲಿ 5 ಬಾಣಂತಿಯರು ಮೃತಪಟ್ಟಿದ್ದಾರೆ.