ಸಿಂಧನೂರು ಬೀದಿ ಬದಿಯ ಹೋರಾಟಗಾರರಿಂದ ತಾತ್ಕಾಲಿಕ ಹೋರಾಟ ಸ್ಥಗಿತ
ರಾಯಚೂರು: ಸಿಂಧನೂರು ನಗರದ ತಹಶೀಲ್ದಾರರ ಕಚೇರಿ ಮುಂದೆ ಕಳೆದ 6 ದಿನಗಳಿಂದ ನಡೆಯುತ್ತಿರುವ ಬೀದಿ ಬದಿಯ ಹೋರಾಟ ಸಮಿತಿಯ ನೇತೃತ್ವದ ಅನಿರ್ಧಿಷ್ಠಾವಧಿ ಧರಣಿ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಬಂದು ಚರ್ಚಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ ಕಾರಣ ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿ 12 ದಿನಗಳ ಗಡುವು ನೀಡಿ ತಾತ್ಕಾಲಿಕವಾಗಿ ಧರಣಿ ಹಿಂದಕ್ಕೆ ಪಡೆದುಕೊಂಡಿತು.
ಸಿಂಧನೂರು ನಗರದಲ್ಲಿ 600 ಜನ ಬೀದಿಬದಿ ವ್ಯಾಪಾರಸ್ಥರನ್ನು ನಗರಸಭೆಯಿಂದ ಗುರುತಿಸಿ ಪಟ್ಟಿ ಮಾಡಲಾಗಿದೆ. ದೇವರಾಜ ಅರಸು ತರಕಾರಿ ಮಾರುಕಟ್ಟೆ, ಕನಕದಾಸ ವೃತ್ತದ ಬಳಿಯ ಉಪ ಮಾರುಕಟ್ಟೆ, ಅಪ್ನಾ ಮಂಡಿಯಲ್ಲಿ ಹಣ್ಣು, ತರಕಾರಿ, ಕಾಯಿಪಲ್ಲೆ, ದಿನಸಿ ಪದಾರ್ಥಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ನನ್ನ ಅಧಿಕಾರದ ಅವಧಿಯಲ್ಲಿ ಯಾವ ವ್ಯಾಪಾರಸ್ಥರಿಗೂ ತೊಂದರೆ ಕೊಟ್ಟಿಲ್ಲ ಎಂದ ಶಾಸಕ ಹಂಪನಗೌಡ ಬಾದರ್ಲಿ ಕೆಲ ಶರಣರು ಕೋರ್ಟ್‍ನಲ್ಲಿ ಕೇಸ್ ಹಾಕಿದ್ದಕ್ಕೆ ಈ ದುರ್ಘಟನೆ ನಡೆದಿದೆ ಎಂದು ಹೇಳಿದರು.
ಒಂದು ವಾರದಲ್ಲಿ ಆಹಾರ ಇಲಾಖೆಯ ಗೋದಾಮು ತೆರವುಗೊಳಿಸಿ, ಜಾಗ ಸ್ವಚ್ಛಗೊಳಿಸಲಾಗುವುದು. ಜೊತೆಗೆ ಉಪ ರಸ್ತೆಗಳು ಹಾಗೂ ಪ್ರತಿಯೊಂದು ವಾರ್ಡ್‍ನಲ್ಲೂ ಜನಸಂದಣಿ ಇರುವ ಕಡೆ ಖಾಲಿ ಜಾಗ ಗುರುತಿಸಿ 10 ರಿಂದ 15 ತಳ್ಳುವ ಬಂಡಿಗಳಿಗೆ ತರಕಾರಿ, ಹಣ್ಣು, ಕಾಯಿಪಲ್ಲೆ, ದಿನಸಿ ಪದಾರ್ಥಗಳ ಮಾರಾಟ ಮಾಡುವುದಕ್ಕೂ ನಗರಸಭೆಯಿಂದ ವ್ಯವಸ್ಥೆ ಮಾಡಲಾಗುವುದು.
ಇದಕ್ಕೆ ಅಡ್ಡಿಪಡಿಸದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೆಲ ನಿರಾಶ್ರಿತರಿಗೆ ಏಳುರಾಗಿ ಕ್ಯಾಂಪಿನಲ್ಲಿ ನಿವಾಸ ನೀಡಲು ನಗರಸಭೆ ಪೌರಾಯುಕ್ತರಿಗೆ ತಿಳಿಸಲಾಗಿದೆ. ನಗರಸಭೆಯಲ್ಲಿ ಹೆಸರು ನೋಂದಾಯಿಸಿ ವ್ಯಾಪಾರಸ್ಥರು ಸೂಚಿಸಿರುವ ಸ್ಥಳಗಳಲ್ಲಿ ವ್ಯಾಪಾರ ಮಾಡಬೇಕು’ ಎಂದು ಮನವಿ ಮಾಡಿದರು.
ಇದೇ ವೇಳೆ ಶಾಸಕರಿಗೆ ಹೋರಾಟಗಾರರು ಮನವಿ ಪತ್ರ ಸಲ್ಲಿಸಿದರು. 12 ದಿನಗಳ ವರೆಗೆ ಕಾದು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಪುನಃ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಿತಿ ಸಂಚಾಲಕ ಚಂದ್ರಶೇಖರ ಗೊರಬಾಳ, ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿ ಮುಖಂಡರಾದ ಡಿ.ಎಚ್.ಪೂಜಾರ, ಟಿ.ಹುಸೇನ್‍ಸಾಬ್, ಬಾಷುಮಿಯಾ, ಬಸವಂತರಾಯಗೌಡ ಕಲ್ಲೂರು, ನಾಗರಾಜ ಪೂಜಾರ, ಬಸವರಾಜ ಬಾದರ್ಲಿ, ಮಂಜುನಾಥ್, ಶಂಕರ್ ಗುರಿಕಾರ, ಖಾಸಿಂಸಾಬ್ ,ಅಮೀನಸಾ ಬ್ ನದಾಫ್, ರಹೀಮ್‍ಸಾಬ್, ಚಾಂದ್‍ಪಾಷಾ, ಡಾ.ವಸೀಮ್ ಅಹ್ಮದ್, ಅಬ್ದುಲ್ ಸಮ್ಮದ್ ಚೌದ್ರಿ ವ್ಯಾಪಾರಸ್ಥರು ಇದ್ದರು.