ರಾಯಚೂರು | ಯರಗೇರಾ ಉರೂಸ್ ನಲ್ಲಿ ಪೊಲೀಸರ ಸೋಗಿನಲ್ಲಿ ಬಂದು ಸರಕಳ್ಳತನ
ರಾಯಚೂರು : ಪೊಲೀಸರ ವೇಷದಲ್ಲಿ ಬಂದು ಸರಗಳ್ಳರಿಂದ ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸುವ ನೆಪದಲ್ಲಿ 3 ಲಕ್ಷ ರೂ. ಮೌಲ್ಯದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ರಾಯಚೂರು ನಗರ ಹೊರವಲಯದ ನಲ್ಲಗುಂಡಾ ಕ್ರಾಸ್ನಲ್ಲಿ ನಡೆದಿದೆ.
ನಗರದ ಮಡ್ಡಿಪೇಟೆ ನಿವಾಸಿಗಳಾದ ವೈ.ಮಲ್ಲೇಶ ಹಾಗೂ ಸರೋಜಮ್ಮ ದಂಪತಿ ಕಳ್ಳರ ಸರ ಕಳ್ಳತನಕ್ಕೆ ಗುರಿಯಾದವರು ಎಂದು ತಿಳಿದುಬಂದಿದೆ.
ತಾಲೂಕಿನ ಯರಗೇರಾ ಉರೂಸ್ ಗೆ ತೆರಳಿ ಮನೆಗೆ ಹೊರಟಿದ್ದ ದಂಪತಿಯನ್ನು ತಡೆದ ಪೊಲೀಸರ ಸೋಗಿನಲ್ಲಿ ಆಗಮಿಸಿದ ಸರಗಳ್ಳರು ದಂಪತಿಗಳಿಗೆ ಸರಗಳ್ಳರಿಂದ ಎಚ್ಚರಿಕೆ ವಹಿಸುವಂತೆ ತಿಳಿವಳಿಕೆ ನೀಡಿದಂತೆ ನಟಿಸಿ ಸುಮಾರು 3 ಲಕ್ಷ ರೂ. ಮೌಲ್ಯದ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಚಿನ್ನಾಭರಣಗಳನ್ನು ಕಾಗದದಲ್ಲಿ ಕಟ್ಟಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದರಿಂದ ಆತಂಕಗೊಂಡ ಸರೋಜಮ್ಮ ಅವರು ತನ್ನ ಕೊರಳಲ್ಲಿದ್ದ ಚಿನ್ನದ ಸರ ತೆಗೆಯುವಷ್ಟರಲ್ಲಿ ಅದನ್ನು ಕಟ್ಟಿಕೊಡುವುದಾಗಿ ಲೂಟಿಕೋರರು ಕಸಿದುಕೊಂಡಿದ್ದಾರೆ. ಇದೇ ಅವಧಿಯಲ್ಲಿ ಅವರ ಕಣ್ಣುತಪ್ಪಿಸಿ ಕಾಗದದಲ್ಲಿ ಕಲ್ಲಿನ ಹರಳುಗಳನ್ನು ಇಟ್ಟು ಅವರಿಗೆ ಕೊಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ.
ಕಳ್ಳರ ಚಲನವಲನ, ಹಾವಭಾವದಿಂದ ಸಂಶಯಗೊಂಡ ಸರೋಜಮ್ಮ ಅವರು ಕಾಗದದ ಪುಡಿ ಬಿಚ್ಚಿ ನೋಡಿದಾಗ ಕಲ್ಲುಗಳ ಹರಳು ಇರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಲೂಟಿಕೋರರು ಅಷ್ಟರಲ್ಲಿ ತಮ್ಮ ಕರಾಮತ್ತು ಪ್ರದರ್ಶಿಸಿ ಸ್ಥಳದಿಂದ ಪರಾರಿಯಾಗಿದ್ದರು.
ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.