ಶಾಸಕಿ ಕರೆಮ್ಮ ನಾಯಕ ಮೇಲೆ ಪೊಲೀಸ್ ಕ್ವಾಟರ್ಸ್ ಜಾಗವನ್ನು ಒತ್ತುವರಿ ಮಾಡಿದ ಅರೊಪ; ದೂರು
ರಾಯಚೂರು: ಜಿಲ್ಲೆಯ ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ಜಿ ನಾಯಕ ಅವರು ತಮ್ಮ ನಿವಾಸ ಪಕ್ಕದಲ್ಲಿ ಪೊಲೀಸ್ ಕ್ವಾಟ್ರಸ್ ಜಾಗವನ್ನು ಒತ್ತುವರಿ ಮಾಡಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸುರೇಶ್ ನಾಯಕ ಎಸ್ ಪಿ ಗೆ ದೂರು ಸಲ್ಲಿಸಿದ್ದಾರೆ.
ಶಾಸಕಿ ಕರೆಮ್ಮ ಜಿ. ನಾಯಕ್ ಅವರು ಸರ್ವೆ ನಂಬರ್ 506 ರ ಕೃಷಿ ಭೂಮಿಯಲ್ಲಿ ಸುಮಾರು 10 ಗುಂಟೆಯಷ್ಟು ಜಾಗವನ್ನು ಮನೆ ಕಟ್ಟಿಸಲು ಖರೀದಿ ಮಾಡಿ ಮನೆ ಕಟ್ಟಿಸುವಾಗ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸುಮಾರು 10 ಫೀಟ್ ಜಾಗವನ್ನು ಅಕ್ರಮಿಸಿಕೊಂಡಿದ್ದಾರೆ ಎಂದು ಎಸ್ ಪಿ ಎಂ.ಪುಟ್ಟಮಾದಯ್ಯನವರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.
ಶಾಸಕಿ ಕರೆಮ್ಮ ಜಿ ನಾಯಕ ಅವರು ತಮ್ಮ ಮನೆಗೆ ರಸ್ತೆ ನಿರ್ಮಿಸಿಕೊಳ್ಳಲು ಪೊಲೀಸ್ ಇಲಾಖೆ ಕ್ವಾಟರ್ಸ್ ವ್ಯಾಪ್ತಿಗೆ ಅಳವಡಿಸಿದ ತಂತಿ ಬೇಲಿಯನ್ನು ಕಿತ್ತು ಬಿಸಾಕಿ ,ತಮ್ಮ ಮನೆಗೆ ಹೋಗಲು ರಸ್ತೆ ಮಾರ್ಗ ನಿರ್ಮಾಣ ಮಾಡಿದ್ದಾರೆ ಎಂದು ಆಗ್ರಹಿಸಿದರು.
ಅಕ್ರಮಿಸಿಕೊಂಡ ಜಾಗದ ಮೌಲ್ಯ ಈಗ ಸುಮಾರು 5 ಕೋಟಿಗೂ ಅಧಿಕವಾಗಿದೆ. ಶಾಸಕಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಗಂಡ ಗೋಪಾಲಕೃಷ್ಣ, ಮಗ ಸಂತೋಷ, ಸಹೋದರ ತಿಮ್ಮರೆಡ್ಡಿ ಅವರೊಂದಿಗೆ ಸೇರಿಕೊಂಡು ಸುಮಾರು 20 ಅಡಿಯಷ್ಟು ಅಗಲವಾಗಿ ಜೆಸಿಬಿ ಮುಖಾಂತರ ಅತಿಕ್ರಮ ಪ್ರವೇಶ ಮಾಡಿ ತಂತಿ ಬೇಲಿಯನ್ನು ತೆಗಿಸಿ ಹಾಕಿಸಿರುತ್ತಾರೆ ಮತ್ತು ಸರಕಾರಕ್ಕೆ 20 ಲಕ್ಷದಷ್ಟು ನಷ್ಟ ಉಂಟುಮಾಡಿರುತ್ತಾರೆ ಎಂದು ಹೇಳಿದರು.
ಪೋಲಿಸ್ ಇಲಾಖೆಯ ಜಾಗವನ್ನು ವಾಪಸ್ಸು ಪಡೆದು ಒತ್ತುವರಿ ಮಾಡಿಕೊಂಡ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ತಿಳಿಸಿದರು.