ರಾಯಚೂರು | ಸಂತ್ರಸ್ತರಿಗೆ ಮನೆ ಹಂಚಿಕೆ ಮಾಡಲು ಆಗ್ರಹ

Update: 2025-01-04 13:52 GMT

ರಾಯಚೂರು : ನಗರದ ವಾರ್ಡ್ ನಂಬರ್ 24ರ ವ್ಯಾಪ್ತಿಯ ಗದ್ವಾಲ್ ರಸ್ತೆ, ಸರ್ತಿಗೇರಿ, ಮಡ್ಡಿಪೇಟೆಯಲ್ಲಿ ರಸ್ತೆ ಅಗಲೀಕರಣದ ವೇಳೆ ಮನೆಗಳು ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ರಾಯಚೂರು ನಗರದಲ್ಲಿ ಏಪ್ರಿಲ್ 2011ರಲ್ಲಿ ಜಿಲ್ಲಾಧಿಕಾರಿ ಅನುಬ್ ಕುಮಾರ್ ಅವಧಿಯಲ್ಲಿ ನಗರದ ಗದ್ವಾಲ್ ರಸ್ತೆಯ ಸರ್ತಿಗೇರಿ ಮಡ್ಡಿಪೇಟೆ, ವಾರ್ಡ್ ನಂ. 24ರಲ್ಲಿ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ (ಛಲವಾದಿ ಜನಾಂಗ) 36 ಕುಟುಂಬಗಳ ಮನೆಗಳು ಕಳೆದುಕೊಂಡಿದ್ದಾರೆ. ಆ ಸಮಯದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನಿನಲ್ಲಿ ಸಂತ್ರಸ್ತರಿಗೆ ಉಚಿತ ನಿವೇಶನ ಕಲ್ಪಿಸಿಕೊಡಲಾಗುವುದು ಎಂದು ಆಶ್ವಾಸನೆ ನೀಡಿ, ಮನೆಗಳನ್ನು ಖಾಲಿ ಮಾಡಿಸಿ ರಸ್ತೆ ಅಗಲೀಕರಣ ಮಾಡಿರುತ್ತಾರೆ. ಆದರೆ, ಇದುವರೆಗೆ ಸದರಿ ಬಡ ಕುಟುಂಬಗಳಿಗೆ ಯಾವುದೇ ನಿವೇಶನ ವಸತಿ ಹಂಚಿಕೆ ಮಾಡದೇ ಅನ್ಯಾಯವೆಸಗಿದ್ದಾರೆ. ಸದರಿ ಕುಟುಂಬಗಳು ಬೀದಿಗೆ ಬಂದಿದ್ದು, ಮನೆಗಳಿಲ್ಲದೇ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ನಗರದ ಸರ್ವೆ ನಂ. 22/1 ರಲ್ಲಿ ಖಾಲಿ ಇರುವ 2 ಎಕರೆಯಷ್ಟು ಜಮೀನಿನಲ್ಲಿ ಸಂತ್ರಸ್ತ 36 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂತ್ರಸ್ತ ಕುಟುಂಬದವರಿಂದ ತಮ್ಮ ಕಚೇರಿ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಕೊಂಡಪ್ಪ ಕೆ., ತಿಕ್ಕಣ್ಣ ನಾಗರಾಜ್, ವೀರೇಶ ಜಲಗಾರ, ಮಹೇಶ, ರಘುನಾಥ, ತಾಯರೆಡ್ಡಿ ಸೇರಿ ಅನೇಕರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News