ರಾಯಚೂರು | ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ವಾಪಸ್ ಪಡೆಯಬೇಕು : ಮುಜಾಹಿದ್ ಮರ್ಚೆಡ್

ರಾಯಚೂರು : "ವಕ್ಫ್ (ತಿದ್ದುಪಡಿ) ಮಸೂದೆಯು ಭಾರತೀಯ ಸಂವಿಧಾನದ ಮೂಲ ತತ್ವಗಳಾದ ಜಾತ್ಯತೀತತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆಗೆ ಗಂಭೀರ ಧಕ್ಕೆ ತರುವ ಒಂದು ಅಪಾಯಕಾರಿ ಪ್ರಯತ್ನವಾಗಿದೆ ಎಂದು ದೇವಸೂಗೂರು ಅಲ್ಪ ಸಂಖ್ಯಾತರ ಬ್ಲಾಕ್ ಕಾಂಗ್ರೆಸ್ ಸಮೀತಿ ಕಾರ್ಯದರ್ಶಿಯಾದ ಮುಜಾಹಿದ್ ಮರ್ಚೆಡ್ ತೀವ್ರ ಆಕ್ರೊಶ ವ್ಯಕ್ತಪಡಿಸಿದರು.
ಈ ಮಸೂದೆಯು ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಗಳ ಮೇಲೆ ಅನಗತ್ಯವಾಗಿ ಸರ್ಕಾರಿ ಹಸ್ತಕ್ಷೇಪವನ್ನು ತರುತ್ತದೆ, ಇದು ಸಂವಿಧಾನದ ಅನುಚ್ಛೇದ 25 ಮತ್ತು 26ರಲ್ಲಿ ಖಾತರಿಪಡಿಸಲಾದ ಧಾರ್ಮಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಉಲ್ಲಂಘಿಸುತ್ತದೆ. ಒಂದು ಸಮುದಾಯವನ್ನು ಮಾತ್ರ ಗುರಿಯಾಗಿಸುವ ಈ ಕ್ರಮವು ಅನುಚ್ಛೇದ 14 ಮತ್ತು 15ರಲ್ಲಿ ಒದಗಿಸಲಾದ ಸಮಾನತೆಯ ಹಕ್ಕನ್ನು ಕಸಿದುಕೊಳ್ಳುತ್ತದೆ. ಜೊತೆಗೆ, ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳುವ ಮೂಲಕ ಒಕ್ಕೂಟ ವ್ಯವಸ್ಥೆಗೆ ತೊಡಕು ತರುತ್ತದೆ ಎಂದು ಹೇಳಿದರು.
ಈ ತಿದ್ದುಪಡಿಯು ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಸಂವಿಧಾನದ ಸಮಗ್ರತೆಯನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ ಎಂದು ನಾವು ದೃಢವಾಗಿ ನಂಬುತ್ತೇವೆ. ಆದ್ದರಿಂದ, ಸರ್ಕಾರವು ಈ ಮಸೂದೆಯನ್ನು ಹಿಂಪಡೆದು, ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಎಲ್ಲಾ ಸಮುದಾಯಗಳ ಹಕ್ಕುಗಳನ್ನು ಗೌರವಿಸುವಂತೆ ನಾನು ಒತ್ತಾಯಿಸುತ್ತೇನೆ ಇಲ್ಲವಾದಲ್ಲಿ ಭವಿಷ್ಯದಲ್ಲಿ ಇದರ ಪರಿಣಾಮ ಬಿಜೆಪಿ. ಮತ್ತು ಅದರ ಮಿತ್ರ ಪಕ್ಷಗಳು ಅನುಭವಿಸಬೇಕಾಗುತ್ತದೆ. ಇದು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಅಲ್ಲ ಇದು ಎಕ್ ಕಾ ಸಾಥ್ ಎಕ್ ಕಾ ವಿನಾಶ್ ಎಂಬಂದಂತಿದೆ ಈ ವಕ್ಫ್ ತಿದ್ದುಪಡಿ ಮಸೂದೆ ಎಂದು ದೇವಸೂಗೂರು ಅಲ್ಪ ಸಂಖ್ಯಾತರ ಬ್ಲಾಕ್ ಕಾಂಗ್ರೆಸ್ ಸಮೀತಿ ಕಾರ್ಯದರ್ಶಿಯಾದ ಮುಜಾಹಿದ್ ತಕ್ಷಣ ತಿದ್ದುಪಡಿಯನ್ನು ವಾಪಸ್ ಪಡೆಯಲು ಒತ್ತಾಯಿಸಿದರು.