ರಾಯಚೂರು: ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

Update: 2024-11-10 07:47 GMT

ರಾಯಚೂರು: ನಗರದ ಈದ್ಗಾ ಮೈದಾನದ ಬಳಿಯ ಟಿಪ್ಪು ಸುಲ್ತಾನ್ ವೃತ್ತದಲ್ಲಿ ರವಿವಾರ ಟಿಪ್ಪು ಸುಲ್ತಾನ್ ಅವರ 275ನೇ ಜಯಂತಿ ಕಾರ್ಯಕ್ರಮ ನಡೆಯಿತು.

ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿದರು. ಪರಸ್ಪರ ಸಿಹಿ ಹಂಚಿದರು.

ಕಾಂಗ್ರೆಸ್ ಮುಖಂಡ ಮುಹಮ್ಮದ್ ಶಾಲಂ ಮಾತನಾಡಿ, ಟಿಪ್ಪು ಸುಲ್ತಾನ್ ಕೇವಲ ಒಂದು ಧರ್ಮಕ್ಕೆ ಸೀಮಿತರಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬ್ರಿಟಿಷರನ್ನು ನಡುಗಿಸಿದ್ದರು. ಅವರ ವಿಚಾರಗಳನ್ನು ಸಮಾಜದಲ್ಲಿ ಪ್ರಚಾರಪಡಿಸಬೇಕಿದೆ ಎಂದು ಹೇಳಿದರು.

ಇನ್ನೋರ್ವ ಕಾಂಗ್ರೆಸ್ ಮುಖಂಡ ನರಸಿಂಹಲು ಮಾಡಗಿರಿ ಮಾತನಾಡಿ, ಟಿಪ್ಪು ಸುಲ್ತಾನ್ ಜಾತ್ಯತೀತ ವ್ಯಕ್ತಿ, ಸ್ವಾತಂತ್ರ್ಯಕ್ಕೆ ಹೋರಾಡಿ ಮೈಸೂರಿನ ಹುಲಿ ಎಂದು ಖ್ಯಾತಿ ಪಡೆದಿದ್ದಾರೆ. ಅವರನ್ನು ಒಂದು ಧರ್ಮದ ಆಧಾರದ ಮೇಲೆ ನೋಡಿ ತಾರತಮ್ಯ ಮಾಡಬಾರದು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ವ್ಯಕ್ತಿತ್ವ, ಅವರ ತ್ಯಾಗ ಬಲಿದಾನ ವನ್ನು ಸ್ಮರಿಸಬೇಕಿದೆ. ನಗರದ ಟಿಪ್ಪು ಸುಲ್ತಾನ್ ವೃತ್ತ ಅಭಿವೃದ್ಧಿಗೊಳಿಸಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಅಂಬೇಡ್ಕರ್ ಸೇನೆಯ ಮುಖಂಡ ವಿಶ್ವನಾಥ ಪಟ್ಟಿ ಮಾತನಾಡಿ, ಟಿಪ್ಪು ಸುಲ್ತಾನ್ ತಮ್ಮ ಮಕ್ಕಳನ್ನು ಒತ್ತೆ ಇಟ್ಟು ದೇಶಕ್ಕಾಗಿ ಮಡಿದಿದ್ದಾನೆ. ಆತ ಧೈರ್ಯ, ಸಾಹಸ ಅನೇಕರಿಗೆ ಮಾದರಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿದೆ. ಬ್ರಿಟಿಷರರಿಗೆ ಸಿಂಹ ಸ್ವಪ್ನವಾಗಿದ್ದರು. ಮುಂದಿನ ಜಯಂತಿಯ ವೇಳೆ ರಾಜ್ಯ ಸರಕಾರ ಟಿಪ್ಪು ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.

ನಗರಸಭೆಯ ಉಪಾಧ್ಯಕ್ಷ ಸಾಜಿದ್ ಸಮೀರ್, ಮುಖಂಡರಾದ ಡಾ.ರಝಾಕ್ ಉಸ್ತಾದ್, ಬಶೀರುದ್ದೀನ್, ಅಬ್ದುಲ್ ಹೈ ಫೇರೋಝ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಫರೀದ್ ಖಾನ್, ಜಾವೀದ್ ವಕೀಲ್, ತೌಸೀಫ್ ಅಹ್ಮದ್, ಮುಹಮ್ಮದ್ ಶಫಿ, ನಝೀರ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News