ರಾಯಚೂರು | ಸಾವರ್ಕರ್ ಭಾವಚಿತ್ರದೊಂದಿಗೆ ಅಂಬೇಡ್ಕರ್ ಚಿತ್ರ ಬಳಕೆ; ಪ್ರಮೋದ್ ಮುತಾಲಿಕ್ ವಿರುದ್ಧ ಕ್ರಮಕ್ಕೆ ಆಗ್ರಹ

Update: 2024-11-17 14:01 GMT

ರಾಯಚೂರು : ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಶ್ರೀರಾಮಸೇನೆ ಲಿಂಗಸೂಗೂರು ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ವಿ.ಡಿ.ಸಾವರ್ಕರ್ ಅವರ ಫೋಟೋ ಪಕ್ಕದಲ್ಲಿ ಇರಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ವಿ.ಡಿ ಸಾವರ್ಕರ್ ಅವರ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿರುವ ಮುತಾಲಿಕ್ ಅವರ ಸಂಘಟನೆಯು ದಲಿತರಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ವಿರೋಧಿಸಿ, ಜಾತಿ, ವರ್ಣ ವ್ಯವಸ್ಥೆಯನ್ನು ಎತ್ತಿಹಿಡಿಯುತ್ತದೆ. ದಲಿತರು, ಹಿಂದುಳಿದವರು ಮತ್ತು ಮುಸ್ಲಿಮರಿಂದ ವಿಭಜಿಸುವ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಕಮ್ಯುನಿಸ್ಟ್ ಚಿಂತನೆಗಳಿಂದ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಸಾವರ್ಕರ್ ಅವರ ಫೋಟೋದೊಂದಿಗೆ ಅಂಬೇಡ್ಕರ್ ಅವರ ಫೋಟೋ ಹಾಕಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಪ್ರಗತಿಪರ ಚಿಂತಕರು ಖಂಡಿಸಿದ್ದಾರೆ.

ಇನ್ನೂ ಈ ಕುರಿತು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಪತ್ರಿಕಾ ಹೇಳಿಕೆ ನೀಡಿ, ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಶುಕ್ರವಾರ ಶ್ರೀರಾಮಸೇನೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವೇದಿಕೆ ಕಾರ್ಯಕ್ರಮದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಮುಸ್ಲಿಮರು, ಕ್ರಿಶ್ಚಿಯನ್ನರು, ಕಮ್ಯುನಿಸ್ಟರು ಮತ್ತು ಬಹುಜನ ಭಾರತವನ್ನು ಗುರಿಯಾಗಿಸಿಕೊಂಡು ಮುತಾಲಿಕ್ ಹೇಳಿಕೆಗಳು ಕೋಮುವಾದಕ್ಕೆ ಪೋಷಿಸುವ ಮತ್ತು ಅಸಾಂವಿಧಾನಿಕವಾಗಿದೆ ಎಂದು ತಿಳಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ಅವರ ಪರಂಪರೆ, ದಲಿತರ ಅಸ್ಮಿತೆ ನೀಲಿ ಬಣ್ಣವನ್ನು ಶ್ರೀರಾಮಸೇನೆಯ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಚಡ್ಡಿಗಳಿಗೆ ಬಳಸಿ ಅವಮಾನಿಸಿದ ಪ್ರಮೋದ್ ಮುತಾಲಿಕ್ ಮತ್ತು ಕಾರ್ಯಕ್ರಮ ಆಯೋಜಕ ವಿರುದ್ಧ ಹಟ್ಟಿ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮನವಿ ಮಾಡಿದರು.

ಮುತಾಲಿಕ್ ಅವರ ರಾಷ್ಟ್ರವಿರೋಧಿ ಹೇಳಿಕೆಯನ್ನು ವಿರೋಧಿಸಲು ಸಮಾನ ಮನಸ್ಕರು ಹಾಗೂ ಪ್ರಗತಿಪರ ಚಿಂತಕರು, ಗಣಿ ಕಾರ್ಮಿಕರೊಂದಿಗೆ ಡಿಸೆಂಬರ್ 6 ರಂದು ಹಟ್ಟಿ ಚಿನ್ನದ ಗಣಿಯಲ್ಲಿ ಬಾಬಾ ಸಾಹೇಬ ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಆಚರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News