ಈ ಸರಕಾರವನ್ನು ಸರಕಾರ ಎಂದು ಕರೆಯಲು ಆಗುವುದಿಲ್ಲ : ಎಚ್.ಡಿ.ದೇವೇಗೌಡ ವಾಗ್ದಾಳಿ
ಚನ್ನಪಟ್ಟಣ : ರೈತರ ಬಗ್ಗೆ ನಿರ್ಲಕ್ಷ್ಯತೆ ಇರುವ ಸರಕಾರವನ್ನು ಎಂದೂ ನೋಡಿಲ್ಲ. ಸರಕಾರದ ನೀತಿಗಳನ್ನು ಜನರು ಪ್ರಶ್ನಿಸಬೇಕಾಗಿದೆ. ಈ ಕಾಂಗ್ರೆಸ್ ಸರಕಾರವನ್ನು ಸರಕಾರ ಎಂದು ಕರೆಯಲು ಆಗುವುದಿಲ್ಲ. ನಾವು ಜನರಿಗೆ ಸೇವೆ ಮಾಡುವ ಸರಕಾರವನ್ನು ಆಯ್ಕೆ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಚನ್ನಪಟ್ಟಣ ತಾಲೂಕಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, 1957ರಲ್ಲಿ ನಾನು ಕಾಂಗ್ರೆಸ್ ವಿರುದ್ಧ ಹೋರಾಟ ಪ್ರಾರಂಭಿಸಿದ್ದೆ. ಜನರ ಬೆಂಬಲದಿಂದ ನಾನು ವರದೇಗೌಡರನ್ನು ವಿಧಾನಸೌಧಕ್ಕೆ ಕರೆದೊಯ್ದೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಬಡವರಿಗೆ ಐದು ಲಕ್ಷ ಮನೆಗಳನ್ನು ನಿರ್ಮಿಸುವ ಯೋಜನೆ ರೂಪಿಸಿದ್ದೆ ಎಂದರು.
ಹಿಂದೂ ಮತ್ತು ಮುಸ್ಲಿಮ್ ನಾವೆಲ್ಲರೂ ಒಂದೇ. ನಾವು ಶಾಂತಿಯಾಗಿ ಬದುಕಬೇಕು. ಮುಸ್ಲಿಮ್ ಮಕ್ಕಳಿಗಾಗಿ ಶಾಲೆಗಳ ಸ್ಥಾಪನೆ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಗಳನ್ನು ನಾನು ಅಧಿಕಾರದಲ್ಲಿದ್ದಾಗ ಕೈಗೊಂಡಿದ್ದೆ ಎಂದು ದೇವೇಗೌಡ ತಿಳಿಸಿದರು.
‘ಚನ್ನಪಟ್ಟಣದ ಜನ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸುವ ಶಪಥ ಮಾಡಬೇಕು, ನೀವು ಆ ಕೆಲಸ ಮಾಡಿದರೆ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಿ ಅಂತ ನಾನು ಪ್ರಧಾನಿ ಮೋದಿಯರವರನ್ನು ಕೇಳುವುದು ಸಾಧ್ಯವಾಗುತ್ತದೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬರಬೇಕೆಂದರೆ ಅದು ಮೋದಿಯವರ ಆಶೀರ್ವಾದಿಂದ ಮಾತ್ರ ಸಾಧ್ಯ ಅನ್ನುವುದನ್ನು ಜನರು ಅರ್ಥಮಾಡಿಕೊಳ್ಳಬೇಕು’
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ