ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಲು ಯೋಗೇಶ್ವರ್ ದಡ್ಡರೇ? : ಡಿ.ಕೆ.ಶಿವಕುಮಾರ್
ಚನ್ನಪಟ್ಟಣ : ಐದು ಬಾರಿ ಶಾಸಕರಾಗಿ, ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷ ಸೇರಲು ಸಿ.ಪಿ.ಯೋಗೇಶ್ವರ್ ದಡ್ಡರೇ? ಈ ಕ್ಷೇತ್ರದ ಜನರ ಋಣ ತೀರಿಸಬೇಕು ಎಂದರೆ ಕಾಂಗ್ರೆಸ್ ಸರಕಾರದ ಜತೆ ಕೈಜೋಡಿಸಬೇಕು. ಆಗ ಮಾತ್ರ ಜನರ ಬದುಕು ಬದಲಾವಣೆ ಮಾಡಲು ಸಾಧ್ಯ ಎಂಬುದನ್ನು ಅವರು ಅರಿತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಚಕ್ಕೆರೆ, ಹೊನ್ನನಾಯಕನಹಳ್ಳಿ ಸೇರಿದಂತೆ ಇನ್ನಿತರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಾನು ಕೆಲವು ಬಾರಿ ಯೋಗೇಶ್ವರ್ ಅವರನ್ನು ಬೈದಿದ್ದೇನೆ, ತಿಳುವಳಿಕೆ ಹೇಳಿದ್ದೇನೆ. ಆದರೂ ಇದು ನಮ್ಮ ಕ್ಷೇತ್ರ, ನಮ್ಮ ಜನ ಇದ್ದಾರೆ. ನನ್ನ ಹೆಣ ದೊಡ್ಡ ಆಲಹಳ್ಳಿಯಲ್ಲಿ, ಯೋಗೇಶ್ವರ್ ಅವರ ಹೆಣ ಚಕ್ಕೆರೆಯಲ್ಲಿ ಹಾಕಲಾಗುವುದು. ಹಾಸನಕ್ಕೆ ಹೋಗುವುದಿಲ್ಲ. ನಮ್ಮ ಪಲ್ಲಕ್ಕಿ ಹಾಗೂ ಚಟ್ಟ ಹೊರುವುದು ಇಲ್ಲೇ ಎಂದು ಅವರು ಭಾವುಕವಾಗಿ ನುಡಿದರು.
ನಾನು ಇಂಧನ ಸಚಿವನಾಗಿದ್ದಾಗ 10 ಕಡೆಗಳಲ್ಲಿ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಿದ್ದೇನೆ. ಪ್ರತಿ ಹಳ್ಳಿಯಲ್ಲಿ ಪ್ರತಿ ಇಬ್ಬರು ರೈತರಿಗೆ ಎಚ್ವಿಡಿ ಯೋಜನೆಯಡಿ ಟ್ರಾನ್ಸ್ ಫಾರ್ಮರ್ಸ್ ಅಳವಡಿಸಿಕೊಟ್ಟಿದ್ದೇನೆ. ಕುಮಾರಸ್ವಾಮಿ ಕ್ಷೇತ್ರದಲ್ಲಿ ಯಾರಿಗಾದರೂ ಒಬ್ಬರಿಗೆ ನಿವೇಶನ ಹಂಚಿದ್ದಾರಾ? ನಾವು ನಿವೇಶನ ನೀಡಲು ಬಂದಾಗ, ಜಿಲ್ಲಾಧಿಕಾರಿಗೆ ಕರೆ ಮಾಡಿ ನನ್ನ ಅವಧಿಯಲ್ಲಿ ಈ ಕೆಲಸ ಮಾಡಲು ಆಗಿಲ್ಲ, ಈಗ ಯಾಕೆ ಮಾಡುತ್ತಿದ್ದೀರಾ ಎಂದು ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ಮಹಿಳೆಯರದ್ದು ಹೆಂಗರುಳು, ಅವರಿಗೆ ಸಹಾಯ ಮಾಡಿದರೆ ಅವರು ಋಣ ತೀರಿಸುತ್ತಾರೆ. ಹೀಗಾಗಿ ಅವರಿಗೆ ಹೆಚ್ಚು ಕಾರ್ಯಕ್ರಮ ನೀಡಿದ್ದೇವೆ. ಶಕ್ತಿ ಯೋಜನೆ ನೀಡಿದ್ದು, ನೀವು ಯಾವುದೇ ಪುಣ್ಯಕ್ಷೇತ್ರಕ್ಕೆ ಉಚಿತವಾಗಿ ಹೋಗಬಹುದು ಎಂದು. ಈ ಯೋಜನೆಯಿಂದ ನಮ್ಮ ದೇವಾಲಯಗಳ ಹುಂಡಿಯಲ್ಲಿ ಹಣ ಹೆಚ್ಚಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಎಂದು ಶಿವಕುಮಾರ್ ಗಮನ ಸೆಳೆದರು.
ನಿಖಿಲ್ ಕುಮಾರಸ್ವಾಮಿ ಸೋತಿದ್ದೇಕೆ? :
ರಾಮನಗರದಲ್ಲಿ ಕುಮಾರಸ್ವಾಮಿ ಶಾಸಕರಾಗಿದ್ದರು, ಮುಖ್ಯಮಂತ್ರಿಯೂ ಆದರು. ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಶಾಸಕರಾಗಿದ್ದರು. ಆದರೂ ನಿಖಿಲ್ ರಾಮನಗರದಲ್ಲಿ ಯಾಕೆ ಸೋತರು? ಅವರು ಕೆಲಸ ಮಾಡಿದ್ದರೆ ಜನ ಸೋಲಿಸುತ್ತಿದ್ದರಾ? 5 ವರ್ಷಕ್ಕೊಮ್ಮೆ ಬಂದು ಮತ ನೀಡಿ ಎಂದರೆ ಹೇಗೆ? ಮತದಾರರು ಏನು ಕೂಲಿ ಕಾರ್ಮಿಕರೇ? ಮತದಾನದ ಹಕ್ಕು ಸ್ವಾಭಿಮಾನದ ಪ್ರತೀಕ. ಅದನ್ನು ಯಾರೂ ಮಾರಿಕೊಳ್ಳುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
ಸರಕಾರ ನಿಮ್ಮ ಜತೆಗಿದೆ :
ಕೊಟ್ಟ ಕುದುರೆ ಏರಲು ಅರಿಯದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಅಧಿಕಾರ ಇದ್ದಾಗ ಈ ಕ್ಷೇತ್ರದ ಹಳ್ಳಿಗಳಿಗೆ ಹೋಗಿ ಬಡವರಿಗೆ ಸಹಾಯ ಮಾಡದಿದ್ದರೆ, ಜನರಿಗೆ ನೆರವಾಗದಿದ್ದರೆ, ಶಾಸಕನಾಗಿ ಒಂದೇ ಒಂದು ಬಗರ್ ಹುಕ್ಕುಂ ಸಭೆ ಮಾಡಲಿಲ್ಲ. ಈ ಕ್ಷೇತ್ರದಲ್ಲಿ ಒಮ್ಮೆಯೂ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲಿಲ್ಲ. ಈ ದೇಶಕ್ಕೆ ಗೌರವ ಕೊಡದಿದ್ದರೆ, ಜನರಿಗೆ ಗೌರವ ಕೊಡುತ್ತಾರಾ? ಕುಮಾರಸ್ವಾಮಿಗೆ ಅವರಾಯ್ತು, ಅವರ ಕುಟುಂಬವಾಯ್ತು ಎಂದು ಅವರು ಟೀಕಿಸಿದರು
ಇಡೀ ಸರಕಾರ ಯೋಗೇಶ್ವರ್ ಹಾಗೂ ನಿಮ್ಮ ಜತೆಗಿದೆ. ಈ ಅವಕಾಶವನ್ನು ನೀವು ಬಿಡುತ್ತೀರಾ? ಜೆಡಿಎಸ್ ನವರು ಅತ್ತರೆ ಅಳಲಿ, ಕುಣಿದರೆ ಕುಣಿಯಲಿ, ಏನಾದರೂ ಮಾಡಿಕೊಳ್ಳಲಿ. ನಿಮ್ಮ ಕಷ್ಟ ಸುಖಕ್ಕೆ ಆಗುವವರು ನಾವು, ನಿಮ್ಮ ಋಣ ತೀರಿಸುವವರು ನಾವು. ನಾವು ನಿಮ್ಮನ್ನು ಹಾಗೂ ಈ ಜಿಲ್ಲೆಯನ್ನು ಬಿಟ್ಟು ಹೋಗುವುದಿಲ್ಲ. ನಿಮ್ಮ ಸೇವೆ ಮಾಡುತ್ತೇವೆ. ಹೀಗಾಗಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ, ಆಶೀರ್ವಾದ ಮಾಡಿ ಎಂದು ಶಿವಕುಮಾರ್ ಮನವಿ ಮಾಡಿದರು.
ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ, ಕುಕ್ಕೂರುದೊಡ್ಡಿ ಶಿವಣ್ಣ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈಗೆ ಅಧಿಕಾರ ಸಿಕ್ಕ ಕಾರಣಕ್ಕೆ ನಾವು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಿಮ್ಮ ಕೈಗಳು ಬಲಿಷ್ಠವಾದವು.
ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ