ಚನ್ನಪಟ್ಟಣದಲ್ಲಿ ಸಚಿವ ಝಮೀರ್ ಅಹ್ಮದ್ ಪ್ರಚಾರ
ಚನ್ನಪಟ್ಟಣ : ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಪ್ರವೇಶ ಮಾಡಿದ್ದು, ಮೂರು ದಿನಗಳ ಕಾಲ ಇಲ್ಲೇ ಠಿಕಾಣಿ ಹೂಡಲಿದ್ದಾರೆ.
ಸಂಡೂರು, ಶಿಗ್ಗಾಂವಿಯಲ್ಲಿ ಒಂದು ವಾರ ಪ್ರಚಾರ ಮುಗಿಸಿ ಶನಿವಾರ ಬೆಂಗಳೂರಿಗೆ ಆಗಮಿಸಿದ ಅವರು, ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್ ಜತೆಗೂಡಿ ಸಂಜೆಯಿಂದಲೇ ಚನ್ನಪಟ್ಟಣ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ಆರಂಭಿಸಿದರು.
ಬಿಸ್ಮಿಲ್ಲಾ ನಗರ, ಬಡಾ ಮಖಾನ್, ಯಾರಬ್ ನಗರದಲ್ಲಿ ಮುಖಂಡರ ಸಭೆ ನಡೆಸಿ ರೋಡ್ ಶೋ ನಡೆಸಿ ಮಾತನಾಡಿದ ಝಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಸರಕಾರ ನುಡಿದಂತೆ ನಡೆದ ಸರಕಾರ. ಐದು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್, 120 ಕೆರೆ ತುಂಬಿಸುವ ಮೂಲಕ ತಾಲೂಕಿನ ರೈತರ ಆಶಾ ಕಿರಣವಾಗಿದ್ದಾರೆ. ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಮುಸ್ಲಿಮ್ ಮುಖಂಡರ ಸಭೆ :
ಈ ಮಧ್ಯೆ ಪ್ರಮುಖ ಮುಸ್ಲಿಮ್ ಮುಖಂಡರ ಸಭೆ ನಡೆಸಿದ ಝಮೀರ್ ಅಹ್ಮದ್ ಖಾನ್, ಚುನಾವಣೆ ಕಾರ್ಯತಂತ್ರ ಕುರಿತು ಸಮಾಲೋಚನೆ ನಡೆಸಿದರು. ಮುಸ್ಲಿಮ್ ಸಮುದಾಯದ ಮತಗಳು ಬೇರೆ ಕಡೆ ಚದುರಬಾರದು. ಜತೆಗೆ ಮತದಾನ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಇದು ನಮಗೆ ಪ್ರತಿಷ್ಟೆ ಚುನಾವಣೆ, ಹೀಗಾಗಿ ಸಮುದಾಯ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪರ ನಿಂತು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ಬಲ ತುಂಬಬೇಕು ಎಂದು ಮನವಿ ಮಾಡಿದರು.
ಪ್ರಚಾರಕ್ಕೆ ಆಗಮಿಸಿದ ಝಮೀರ್ ಅಹಮದ್ ಖಾನ್ ಅವರೊಂದಿಗೆ ಸಚಿವ ರಹೀಮ್ ಖಾನ್, ಮಾಜಿ ಸಂಸದ ಡಿ.ಕೆ.ಸುರೇಶ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಚರ್ಚೆ ನಡೆಸಿದರು.