ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿ ಬಗ್ಗೆ ಮಾತನಾಡಲು ಏನು ಇಲ್ಲ : ನಿಖಿಲ್ ಕುಮಾರಸ್ವಾಮಿ

Update: 2024-11-09 14:43 GMT

PC :x/@Nikhil_Kumar_k

ಚನ್ನಪಟ್ಟಣ : ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಏನು ಇಲ್ಲ. ಸಂಸದರಾಗಿ ಉಪ ಮುಖ್ಯಮಂತ್ರಿಯ ಸಹೋದರ ಇದ್ದರು. ಚನ್ನಪಟ್ಟಣ ಸಹ ಅವರ ವ್ಯಾಪ್ತಿಗೆ ಬರುತಿತ್ತು. ಆದರೆ, ಕ್ಷೇತ್ರದಲ್ಲಿ ಅವರು ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ದೂರಿದರು.

ಶನಿವಾರ ಚನ್ನಪಟ್ಟಣದ ಕನ್ನಿದೊಡ್ಡಿಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿ ಬಗ್ಗೆ ಮಾತನಾಡಲು ಏನು ಇಲ್ಲ. ಹೀಗಾಗಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಈಗ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿಎಂ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್ ಸಂಪುಟ ನನ್ನ ವಿರುದ್ಧ ಚನ್ನಪಟ್ಟಣದಲ್ಲಿ ಚುನಾವಣೆ ಮಾಡುತ್ತಿದೆ. ಸಿ.ಪಿ.ಯೋಗೇಶ್ವರ್‌ ಗೆ ಯಾಕೆ ಕಾಂಗ್ರೆಸ್ ಟಿಕೆಟ್ ಕೊಟ್ಟರು ಅಂತ ಎಲ್ಲರಿಗೂ ಗೊತ್ತಿದೆ. ಅವರು 6 ವರ್ಷಕ್ಕೊಮ್ಮೆ ಪಕ್ಷಾಂತರ ಮಾಡುತ್ತಾರೆ. ಬಿಜೆಪಿಯಲ್ಲಿ ಅವರಿಗೆ ಎಲ್ಲ ಗೌರವ ನೀಡಿ ಶಕ್ತಿ ತುಂಬಿಸಿದ್ದರು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಇಗ್ಗಲೂರು ಬ್ಯಾರೇಜ್‍ಗೂ ದೇವೇಗೌಡರಿಗೂ ಏನು ಸಂಬಂಧ ಇಲ್ಲ ಅಂತಾರೆ. ಇಗ್ಗಲೂರು ಬ್ಯಾರೇಜ್ ಸ್ಥಳ ಪರಿಶೀಲನೆ ಫೋಟೋ ಬಿಡುಗಡೆಯಾಗಿದೆ. ಇತಿಹಾಸವನ್ನು ಯಾರು ಮರೆ ಮಾಚುವುದಕ್ಕೆ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಅವರು ತಿರುಗೇಟು ನೀಡಿದರು.

ಇವತ್ತು ಚನ್ನಪಟ್ಟಣದ ಅಭಿವೃದ್ಧಿ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ಈ ಹಿಂದೆ ಯಾಕೆ ಇದನ್ನೆಲ್ಲ ಮಾತನಾಡಲಿಲ್ಲ. ನಾನು ಹಾಗೂ ಯೋಗೇಶ್ವರ್ ಸತ್ತರೆ ಇಲ್ಲೇ ಮಣ್ಣಾಗುತ್ತೇವೆ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಯಾರು ಸಾಯುವುದು ಬೇಡ ಎಲ್ಲ ನೂರಾರು ವರ್ಷ ಚೆನ್ನಾಗಿರಲಿ ಎಂದು ಹೇಳಿದರು.

ದಿನೇ ದಿನೇ ಆತ್ಮವಿಶ್ವಾಸ ಹೆಚ್ಚುತ್ತಿದೆ. ಕುಮಾರಣ್ಣನ ಸ್ವಕ್ಷೇತ್ರ ಅನ್ನೋ ಕಾರಣಕ್ಕೆ ಚನ್ನಪಟ್ಟಣ ರಾಜ್ಯ ಹಾಗೂ ದೇಶದ ಗಮನ ಸೆಳೆದಿದೆ. ಜನ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ನನ್ನ ಮನದಾಳದ ಮಾತು ಜನರಿಗೆ ತಲುಪುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News