ಅಲ್ಪಸಂಖ್ಯಾತರಿಗೆ ಅನ್ಯಾಯ ಎಸಗಿದ ಬಿಜೆಪಿಯಿಂದ ‘ಸಬ್ ಕಾ ವಿಶ್ವಾಸ್’ ಸಾಧ್ಯವಿಲ್ಲ: ನಸೀರ್ ಅಹ್ಮದ್
ಬೆಂಗಳೂರು, ಜು.20: ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಎನ್‍ಡಿಎ ನೇತೃತ್ವದ ಕೇಂದ್ರ ಸರಕಾರ ಹಾಗೂ ಹಿಂದಿನ ಬಿಜೆಪಿ ಸರಕಾರವು ಅಲ್ಪಸಂಖ್ಯಾತರಿಗೆ ಯಾವುದೇ ಹುದ್ದೆಗಳನ್ನು ನೀಡದೇ ಮೋಸ ಎಸಗಿದೆ. ಇಂತಹ ಅನ್ಯಾಯಗಳನ್ನು ಮಾಡಿದ ಮೇಲೆ ‘ಸಬ್ ಕಾ ವಿಶ್ವಾಸ್’ ಬರಲು ಸಾಧ್ಯವಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ನಸೀರ್ ಅಹ್ಮದ್ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್‍ನಲ್ಲಿ 2023-24ನೆ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ, ಕೋವಿಡ್ ಬಂದಾಗ ರಾಜ್ಯಕ್ಕೆ ಬರಲಿಲ್ಲ. ಆದರೆ, ಸಾರ್ವತ್ರಿಕ ವಿಧಾನಸಭೆ ಚುನಾವಣೆಗಾಗಿ ರಾಜ್ಯಕ್ಕೆ ಹಲವು ಬಾರಿ ಬಂದು ಹೋದರು ಎಂದು ಹೇಳಿದರು.
ಕೇಂದ್ರಕ್ಕೆ ಕರ್ನಾಟಕದಿಂದ ಲಕ್ಷಾಂತರ ಕೋಟಿ ರೂ.ಜಿಎಸ್‍ಟಿ ಹೋಗುತ್ತದೆ. ಆದರೆ, ಕೇಂದ್ರ ಸರಕಾರವು ರಾಜ್ಯಕ್ಕೆ ಬರೀ 500ಕೋಟಿ ರೂ.ಜಿಎಸ್‍ಟಿ ಪರಿಹಾರವನ್ನು ವಿತರಣೆ ಮಾಡುತ್ತದೆ. ಕಡಿಮೆ ಪರಿಹಾರವನ್ನು ನೀಡುವ ಮೂಲಕ ಮಲತಾಯಿ ಧೋರಣೆಯನ್ನು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್‍ನ ಪರಿಷತ್ ಸದಸ್ಯರು ಸದನದಲ್ಲಿ ಭಾಗಿಯಾಗಬೇಕಾಗಿತ್ತು. ಆದರೆ, ಅವರು ಹೊರ ಉಳಿದಿದ್ದಾರೆ. ಬಿಜೆಪಿ ಸದಸ್ಯರಿಗೆ ವಿಧಾನಸೌಧದಲ್ಲಿ ಗೋಡ್ಸೆ ಪ್ರತಿಮೆ ಇಲ್ಲದ್ದರಿಂದ ಅವರು ಮಹಾತ್ಮಗಾಂಧಿ ಪ್ರತಿಮೆ ಬಳಿ ಕುಳಿತು ಧರಣಿ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಬಿಜೆಪಿ ಅವರೇ 25 ಜನ ಸಂಸದರಿದ್ದು, ಅವರು ಯಾರೋಬ್ಬರೂ ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿಲ್ಲ. ಹಾಗೊಂದು ಬಾರಿ ಅವರು ಭೇಟಿ ಮಾಡಿದ್ದೇವೆ ಎಂದು ತಿಳಿಸಿದರೇ, ನಾನು ರಾಜಕಾರಣವನ್ನೇ ತ್ಯಜಿಸುತ್ತೇನೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಅನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ತಿಳಿಸಿದರು.