ಬಿಜೆಪಿಯೊಳಗಿನ ಬ್ಲ್ಯಾಕ್ ಟಿಕೆಟ್ ದಂಧೆಯಲ್ಲಿ ವರಿಷ್ಠರ ಹೆಸರು!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಾಂಗ್ರೆಸ್‌ನ ಅಕ್ರಮಗಳ ಬಗ್ಗೆ ಬಿಜೆಪಿ ಒಂದು ಬೆರಳು ತೋರಿಸಿದರೆ, ಅವರದೇ ಮೂರು ಬೆರಳುಗಳು ಬಿಜೆಪಿಯ ಅಕ್ರಮಗಳನ್ನು ಬೆಟ್ಟು ಮಾಡುತ್ತಿವೆ. ಬಿಜೆಪಿಯ ನಾಯಕರು ಕಾಂಗ್ರೆಸ್‌ನ ಒಂದು ಆಕ್ರಮವನ್ನು ಬಿಚ್ಚಿದರೆ, ಅದರ ಜೊತೆ ಜೊತೆಗೇ ಬಿಜೆಪಿ ನಾಯಕರ ಮೂರು ಅಕ್ರಮಗಳು ತೆರೆದುಕೊಳ್ಳತೊಡಗುತ್ತವೆ. ಕಳೆದ ವಿಧಾನಸಭಾ ಚುನಾವಣೆ ಮುಗಿದು ಒಂದೂವರೆ ವರ್ಷವಾದರೂ, ಚುನಾವಣೆಯಲ್ಲಿ ಮಾಡಿದ ಅಕ್ರಮಗಳು ಬಿಜೆಪಿ ನಾಯಕರ ಬೆನ್ನು ಬಿಡುತ್ತಿಲ್ಲ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಭಾರೀ ಭ್ರಷ್ಟಾಚಾರಗಳು ವಿರೋಧ ಪಕ್ಷದಲ್ಲಿ ಕುಳಿತ ಬಿಜೆಪಿ ನಾಯಕರನ್ನು ಮತ್ತೆ ಹಿಂಬಾಲಿಸುತ್ತಿವೆ. ಬಿಜೆಪಿಯು ನಡೆಸಿದ 'ಚುನಾವಣಾ ಟಿಕೆಟ್ ಮಾರಾಟ ದಂಧೆ' ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಬಿಜೆಪಿಯ ಹಿರಿಯ ನಾಯಕರ ಬುಡಕ್ಕೇ ಬಂದಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ ಆರೋಪದಲ್ಲಿ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯ ಬಂಧುಗಳಾಗಿರುವ ಗೋಪಾಲ್ ಜೋಶಿ, ವಿಜಯ ಲಕ್ಷ್ಮೀ ಜೋಶಿ ಹಾಗೂ ಅಜಯ್ ಜೋಶಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜಾಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಈ ಮೂವರು, ಐದು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಸುಮಾರು 2.25 ಕೋಟಿ ರೂಪಾಯಿಯನ್ನು ಪಡೆದು ವಂಚಿಸಿದ ಆರೋಪ ಇವರ ಮೇಲಿದೆ. ಟಿಕೆಟ್ ಸಿಗದೇ ಇದ್ದಾಗ, ಸಂತ್ರಸ್ತ ಮರಳಿ ಹಣವನ್ನು ಕೇಳಿದಾಗ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ. ಕಾ
ರಾಜ್ಯ ಬಿಜೆಪಿಯೊಳಗೆ ಟಿಕೆಟ್ ಹೆಸರಿನಲ್ಲಿ ಕಾಳದಂಧೆ ನಡೆಯುತ್ತಿರುವುದು ಈ ಹಿಂದೆಯೇ ಜಗಜ್ಜಾಹೀರಾಗಿದೆ ಮಾತ್ರವಲ್ಲ, ಸಂಘಪರಿವಾರ ಮತ್ತು ಆರೆಸ್ಸೆಸ್ ನಂಟಿರುವ ಹಲವು ನಾಯಕರ ಬಂಧನವಾಗಿದೆ. ಆದರೆ ಈ ಬಾರಿಯ ಆರೋಪ ತುಸು ಗಂಭೀರವಾದುದು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಗೋವಿಂದ ಬಾಬು ಪೂಜಾರಿ ಎನ್ನುವ ಬಿಲ್ಲವ ಸಮುದಾಯದ ಉದ್ಯಮಿಗೆ ಟಿಕೆಟ್ ಆಮಿಷ ತೋರಿಸಿ ಆರೆಸ್ಸೆಸ್ ಬೆಂಬಲಿತ ನಾಯಕರು ಸುಮಾರು ಏಳು ಕೋಟಿ ರೂಪಾಯಿ ವಂಚಿಸಿದ ಆರೋಪ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡಿತ್ತು. ಈ ಪ್ರಕರಣದಲ್ಲಿ ತಮ್ಮ ಮೂರನೇ ದರ್ಜೆಯ ಉದ್ದಿಗ್ನಕಾರಿ ಭಾಷಣಗಳ ಮೂಲಕ ಕರಾವಳಿಗೆ ಬೆಂಕಿ ಹಚ್ಚುತ್ತಿದ್ದ ಚೈತ್ರಾ ಕುಂದಾಪುರ ಎನ್ನುವ ಕುಖ್ಯಾತ ಮಹಿಳೆ ಕೇಂದ್ರ ಸ್ಥಾನದಲ್ಲಿದ್ದಳು. ಈಕೆಯ ಮೇಲೆ ಅದಾಗಲೇ ಹಲವು ಕ್ರಿಮಿನಲ್ ಮೊಕದ್ದಮೆಗಳಿದ್ದವು. ಟಿಕೆಟ್ ಕೊಡಿಸುತ್ತೇನೆ ಎಂದು ವಂಚಿಸಿದ ಆರೋಪದಲ್ಲಿ ಚೈತ್ರಾ ಕುಂದಾಪುರಳ ಬಂಧನವೂ ಆಯಿತು. ತನಿಖೆಯ ಸಂದರ್ಭದಲ್ಲಿ ಈಕೆಯೊಂದಿಗೆ ಶಾಮೀಲಾಗಿರುವ ಸ್ವಾಮೀಜಿಯೂ ಸೇರಿದಂತೆ ಹಲವು ಹೆಸರುಗಳು ಹೊರ ಬಿದ್ದವು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸ್ವಾಮೀಜಿಯೊಬ್ಬ ಸಂಘಪರಿವಾರದ ಮುಖಂಡರಲ್ಲಿ ಒಬ್ಬನಾಗಿರುವ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವರ ಜೊತೆಗೆ ಗುರುತಿಸಿಕೊಂಡಿದ್ದ. ಈ ತಂಡ ವಂಚಿಸಿದ್ದು ಯಾರೋ ಒಬ್ಬ ಅಮಾಯಕನಿಗಲ್ಲ. ಅದಾಗಲೇ ಬಿಜೆಪಿಯೊಂದಿಗೆ ಗುರುತಿಸಿಕೊಂಡು, ಕೇಂದ್ರ ಸಚಿವ ಅಮಿತ್ ಶಾ ಅವರ ಜೊತೆಗೂ ಕಾಣಿಸಿಕೊಂಡಿದ್ದ ಉದ್ಯಮಿ ಒಬ್ಬರಿಗೆ. ಬಿಜೆಪಿಯ ಮತ್ತು ಆರೆಸ್ಸೆಸ್‌ನ ಹಿರಿಯ ನಾಯಕರ ಪಾತ್ರವಿಲ್ಲದೆ, ಈ ವಂಚನೆ ನಡೆದಿರಲಿಕಿಲ್ಲ ಎಂದು ಈ ಸಂದರ್ಭದಲ್ಲಿ ಅನುಮಾನ ಪಡಲಾಗಿತ್ತು. ತನ್ನ ಬಂಧನವಾದ ಬೆನ್ನಿಗೇ ಚೈತ್ರಾ ಕುಂದಾಪುರ ''ಈ ವಂಚನೆಯಲ್ಲಿ ಇನ್ನೂ ಹಲವು ಪ್ರಮುಖರ ಹೆಸರುಗಳು ಶೀಘ್ರದಲ್ಲೇ ಹೊರಬೀಳಲಿವೆ'' ಎಂದು ಹೇಳಿಕೆ ನೀಡಿದಳು. ತನ್ನನ್ನು ರಕ್ಷಿಸದೇ ಇದ್ದರೆ, ಉಳಿದವರ ಹೆಸರನ್ನು ಹೇಳಬೇಕಾಗುತ್ತದೆ ಎಂದು • ಪಕ್ಷದ ವರಿಷ್ಠರಿಗೆ ಪರೋಕ್ಷ ಬೆದರಿಕೆಯನ್ನು ! ಆಕೆ ಹಾಕಿದ್ದಳು. ಈ ಪ್ರಕರಣದಲ್ಲಿ ಕಬಾಬ್ ' ಮಾರುವವನೊಬ್ಬನಿಗೆ ವೇಷ ಹಾಕಿಸಿ, 'ಆರೆಸ್ಸೆಸ್ ವರಿಷ್ಠ ಎಂದು ಉದ್ಯಮಿಯನ್ನು ನಂಬಿಸಲಾಗಿತ್ತಂತೆ. ಬಿಜೆಪಿ, ಆರೆಸ್ಸೆಸನ್ನು ಬಲ್ಲ ಒಬ್ಬ ಉದ್ಯಮಿ ಯಾವನೋ ಒಬ್ಬ ಕಬಾಬ್ ಮಾರುವವನನ್ನು ಆರೆಸ್ಸೆಸ್ ವರಿಷ್ಠ ಎಂದು ತೋರಿಸಿದಾಕ್ಷಣ ಕೋಟ್ಯಂತರ ರೂಪಾಯಿಯನ್ನು ನೀಡಲು ಸಾಧ್ಯವೆ? ಯಾವುದೋ ಹಿರಿಯ ಆರೆಸ್ಸೆಸ್ ವರಿಷ್ಠರ ಮಾತುಗಳನ್ನು ನಂಬಿ ಚೈತ್ರಾ ಕುಂದಾಪುರ ಖತರ್‌ನಾಕ್ ತಂಡಕ್ಕೆ ಉದ್ಯಮಿ ಹಣ ಸುರಿದಿದ್ದಾರೆ ಎನ್ನುವುದು ಸ್ಪಷ್ಟ.
ಅದರ ಮುಂದುವರಿದ ಭಾಗ, ಇದೀಗ ಬಿಜೆಪಿಯ ಹಿರಿಯ ನಾಯಕ ಪ್ರಹ್ಲಾದ್ ಜೋಶಿ ಸೋದರನ ವಿರುದ್ಧ ದಾಖಲಾಗಿರುವ ಎಫ್‌ಐಆರ್. ಗೋಪಾಲ್ ಜೋಶಿ ಸಹಿತ ಮೂವರು ಆರೋಪಿಗಳು ಬಿಜೆಪಿಯಲ್ಲಿ ಯಾವುದೇ ಅತ್ಯುನ್ನತ ಸ್ಥಾನದಲ್ಲಿ ಇಲ್ಲ. ಹೀಗಿರುವಾಗ, ಲೋಕಸಭಾ ಟಿಕೆಟ್ ಗಾಗಿ ಕೋಟ್ಯಂತರ ರೂಪಾಯಿಯನ್ನು ಯಾರೂ ಇವರ ಕೈಗೆ ನೀಡಲಾರರು. ಪ್ರಹ್ಲಾದ್ ಜೋಶಿಯ ಸಂಬಂಧಿಕರು ಎನ್ನುವ ಕಾರಣದಿಂದಲೇ ಕೋಟ್ಯಂತರ ರೂಪಾಯಿಯನ್ನು ಇವರಿಗೆ ನೀಡಿದ್ದಾರೆ. ಪ್ರಹ್ಲಾದ್ ಜೋಶಿ ಬರೇ ಕೇಂದ್ರ ಸಚಿವರು ಮಾತ್ರವೇ ಅಲ್ಲ. ಅವರಿಗೆ ರಾಜ್ಯ ಬಿಜೆಪಿ ಮತ್ತು ಆರೆಸ್ಸೆಸ್ ಮೇಲೆ ನಿಯಂತ್ರಣವಿದೆ. ಕೇಂದ್ರ ವರಿಷ್ಠರ ಜೊತೆಗೆ ಆತ್ಮೀಯ ಸಂಬಂಧವನ್ನು ಪ್ರಹ್ಲಾದ್ ಜೋಶಿಯವರು ಹೊಂದಿದ್ದಾರೆ. ರಾಜ್ಯದಲ್ಲಿ ಯಾರಿಗೆ ಟಿಕೆಟ್ ನೀಡಬೇಕು, ನೀಡಬಾರದು ಎನ್ನುವ ನಿರ್ಧಾರದಲ್ಲಿ ಜೋಶಿ ಮತ್ತು ಅವರ ತಂಡದ ಹಸಕ್ಷೇಪಗಳ ಬಗ್ಗೆ ಬಿಜೆಪಿಯಲ್ಲೇ ಅಸಮಾಧಾನಗಳಿವೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ನೀಡುವಲ್ಲಿ ಆದ ಅಧ್ವಾನಕ್ಕೆ ಜೋಶಿ ಕೂಡ ಕಾರಣರು ಎನ್ನುವುದನ್ನು ಬಿಜೆಪಿ ನಾಯಕರೇ ಆರೋಪಿಸಿದ್ದರು. ಪರಿಣಾಮವಾಗಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಹಿನ್ನಡೆಯನ್ನು ಅನುಭವಿಸಿತ್ತು. ಆತಂಕದ ಸಂಗತಿಯೆಂದರೆ, ವಿಧಾನಸಭಾ ಟಿಕೆಟ್ ನೀಡುತ್ತೇನೆ ಎಂದು ಕೋಟ್ಯಂತರ ರೂ. ವಂಚಿಸಿದ ಕಾರಣಕ್ಕೆ ಹಲವು ಬಿಜೆಪಿ ಕಾರ್ಯಕರ್ತರ ಬಂಧನವಾದ ಬಳಿಕವೂ ಪಾಠ ಕಲಿಯದ ಬಿಜೆಪಿ ಮುಖಂಡರು ಯಾವ ಅಂಜಿಕೆಯೂ ಇಲ್ಲದೆ ತಮ್ಮ ದಂಧೆಯನ್ನು ಮುಂದುವರಿಸಿದ್ದಾರೆ. ಲೋಕಸಭಾ ಚುನಾವಣೆಯ ಟಿಕೆಟ್ ಹೆಸರಿನಲ್ಲಿ ನಡೆದ ವಂಚನೆಯಲ್ಲಿ ಪ್ರಹ್ಲಾದ್ ಜೋಶಿಯವರ ಹೆಸರು ಪ್ರಸ್ತಾಪ ಮಾಡದೇ ಸಂತ್ರಸ್ತರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡುವುದಕ್ಕೆ ಸಾಧ್ಯವೇ ಇಲ್ಲ. 'ನನಗೂ ಆರೋಪಿಗಳಿಗೂ ಯಾವ ಸಂಬಂಧವೂ ಇಲ್ಲ' ಎನ್ನುವ ಬಾಲಿಶ ಹೇಳಿಕೆಯನ್ನು ನೀಡಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಇಷ್ಟು ದೊಡ್ಡ ಅಕ್ರಮ ಜೋಶಿಯವರ ಗಮನಕ್ಕೇ ಬಂದಿಲ್ಲ ಎನ್ನುವುದು ನಂಬುವುದಕ್ಕೆ ಅರ್ಹವಾಗಿಲ್ಲ. ನಿಜಕ್ಕೂ ಈ ಪ್ರಕರಣದಲ್ಲಿ ಪ್ರಹ್ಲಾದ್ ಜೋಶಿಯವರ ಪಾತ್ರ ಎಷ್ಟು? ಟಿಕೆಟ್ ಆಮಿಷ ತೋರಿಸಿ ಅವರು ವಸೂಲಿ ಮಾಡಿದ ಕೋಟ್ಯಂತರ ರೂಪಾಯಿ ಯಾರ ಕೈ ಸೇರಿದೆ? ಎನ್ನುವುದಲ್ಲ ಗಂಭೀರ ತನಿಖೆಗೆ ಅರ್ಹವಾದ ವಿಷಯವಾಗಿದೆ.
ಬಿಜೆಪಿ ಟಿಕೆಟ್ ಆಮಿಷ ನಂಬಿ ಕೇವಲ ಒಂದಿಬ್ಬರಲ್ಲ, ಹಲವರು ಮೋಸ ಹೋಗಿದ್ದಾರೆ. ಬಿಜೆಪಿ ಬ್ಲ್ಯಾಕ್ ಟಿಕೆಟ್ ದಂಧೆಗೆ ಯಾರೆಲ್ಲ ಬಲಿಯಾಗಿದ್ದಾರೆಯೋ ಅವರೆಲ್ಲ ಧೈರ್ಯದಿಂದ ಹೊರಗೆ ಬಂದು ದೂರು ನೀಡುವಂತಹ ವಾತವರಣ ಸೃಷ್ಟಿಯಾಗಬೇಕಾಗಿದೆ. ಕೈ ಬದಲಾದ ಕೋಟ್ಯಂತರ ರೂಪಾಯಿ ಯಾರ ತಿಜೋರಿ ಸೇರಿದೆ ಎನ್ನುವುದು ತನಿಖೆಯಿಂದಷ್ಟೇ ಬಹಿರಂಗವಾಗಲು ಸಾಧ್ಯ. ಈ ಕಾರಣದಿಂದ, ಕೇಂದ್ರದ ವರಿಷ್ಠರ ಬೆಂಬಲ ಮತ್ತು ಸಚಿವ ಸ್ಥಾನದ ಬಲವಿರುವ ಪ್ರಹ್ಲಾದ್ ಜೋಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು. ಬಿಜೆಪಿಯ ಟಿಕೆಟ್ ಕೊಡಿಸುತ್ತೇನೆ ಎಂದು ಯಾರೇ ವಂಚಿಸಲಿ, ಅದರ ಕಳಂಕವನ್ನು ಬಿಜೆಪಿ ವರಿಷ್ಠರೇ ಹೊತ್ತುಕೊಳ್ಳಬೇಕಾಗುತ್ತದೆ. ಆದುದರಿಂದ, ಗಂಭೀರ ತನಿಖೆ ನಡೆಯುವುದು ಬಿಜೆಪಿಯ ವರಿಷ್ಠರ ಅಗತ್ಯವೂ ಕೂಡ. ಈ ಕಾರಣದಿಂದ, ತಕ್ಷಣ ಜೋಶಿ ವಿರುದ್ಧ ಕ್ರಮ ತೆಗೆದುಕೊಂಡು, ತನಿಖೆಗೆ ಸ್ವಯಂ ಮುಂದಾಗಬೇಕು. ಇದು ಕೇವಲ ಬಿಜೆಪಿಯೊಳಗಿನ ಸಮಸ್ಯೆ ಅಷ್ಟೇ ಅಲ್ಲ. ಸರಕಾರವೊಂದು ಭ್ರಷ್ಟವಾಗಲು ಈ ಬ್ಲ್ಯಾಕ್ ಟಿಕೆಟ್ ದಂಧೆಯೂ ನೇರ ಕಾರಣ. ಚುನಾವಣಾ ಟಿಕೆಟ್ ಪಡೆಯಲು ಕಂಡಕಂಡವರಿಗೆ ಕೋಟಿ ಕೋಟಿ ಸುರಿದವರು, ಚುನಾವಣೆಯಲ್ಲಿ ಗೆದ್ದ ಆನಂತರ ಸುರಿದ ದುಡ್ಡನ್ನು ವಾಪಸ್ ಪಡೆಯಲು ಭ್ರಷ್ಟಾಚಾರ ನಡೆಸುವುದು ಅನಿವಾರ್ಯವಾಗುತ್ತದೆ. ಈ ಹಿಂದಿನ ಬಿಜೆಪಿ ಸರಕಾರದ ಶೇ. 40 ಕಮಿಷನ್ ಅಕ್ರಮದ ಮೂಲ ಈ ಬ್ಲ್ಯಾಕ್‌ಟಿಕೆಟ್ ದಂಧೆಯಲ್ಲಿದೆ. ಆದುದರಿಂದ, ದಂಧೆಯ ಬೇರು ಎಲ್ಲೆಲ್ಲ ಹರಡಿಕೊಂಡಿದೆ ಎನ್ನುವುದರ ತನಿಖೆಯಾಗುವುದು ನಾಡಿನ ಅವಶ್ಯಕತೆಯೂ ಆಗಿದೆ.