ಜಾತಿ ಬ್ಯಾರಕ್‌ಗಳು ಮತ್ತು ಭಾರತದ ಜೈಲುಗಳು!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
''ದೇಶದಲ್ಲಿರುವ ಜೈಲುಗಳಲ್ಲಿ ಯಾವುದೇ ರೀತಿಯ ಜಾತಿ ತಾರತಮ್ಯ ಇರಬಾರದು. ಜೈಲು ಕೈಪಿಡಿಯಲ್ಲಿರುವ ಇಂತಹ ತಾರತಮ್ಯವನ್ನು ಪೋಷಿಸುವ ಎಲ್ಲ ವಿಧಿಗಳನ್ನು ತೆಗೆದು ಹಾಕಬೇಕು'' ಎಂದು ಸುಪ್ರೀಂಕೋರ್ಟ್ ತನ್ನ ಮಹತ್ವದ ತೀರ್ಪೊಂದರಲ್ಲಿ ಹೇಳಿದೆ. ಕೇಂದ್ರ ಸರಕಾರದ 2016ರ ಜೈಲು ಕೈಪಿಡಿಯಲ್ಲಿ ಹಲವು ದೋಷಗಳನ್ನು ಗುರುತಿಸಿರುವ ಸರ್ವೋಚ್ಚ ನ್ಯಾಯಾಲಯ, "ಕೈದಿಗಳನ್ನು ಅವರ ಜಾತಿ ಆಧಾರದಲ್ಲಿ ವರ್ಗೀಕರಿಸುವುದನ್ನು ನಿಷೇಧಿಸಬೇಕು, ದೈಹಿಕ ಶ್ರಮದ ಕೆಲಸಗಳನ್ನು ಶ್ರೇಣೀಕೃತ ಜಾತಿ ಪದ್ಧತಿಯ ಅನುಸಾರವಾಗಿ ಕೈದಿಗಳ ನಡುವೆ ವಿಂಗಡಿಸುವುದು ತಾರತಮ್ಯದಿಂದ ಕೂಡಿದ್ದು, ಇದರ ವಿರುದ್ದ ಕ್ರಮ ಕೈಗೊಳ್ಳಬೇಕು" ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠವು ಹೇಳಿದೆ.
ಭಾರತೀಯ ಜೈಲುಗಳಲ್ಲಿರುವ ಜಾತಿ ಆಧಾರಿತ ವರ್ಗೀಕರಣ ಮತ್ತು ಜಾತಿ ಆಧಾರಿತ ಕಾರ್ಮಿಕ ನಿಯಮಗಳನ್ನು ಬಹಿರಂಗ ಪಡಿಸುವ ವಿಸ್ತ್ರತ ತನಿಖಾ ವರದಿಯೊಂದನ್ನು 2020ರಲ್ಲಿ 'ದಿ ವೈರ್' ವೆಬ್‌ಸೈಟ್ ಪ್ರಕಟಿಸಿತ್ತು. ಇದನ್ನು ಆಧಾರವಾಗಿಟ್ಟುಕೊಂಡು 'ದಿ ವೈರ್'ನ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಸುಕನ್ಯಾ ಶಾಂತ ಅವರು ಈ ಜಾತಿ ತಾರತಮ್ಯದ ವಿರುದ್ದ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ಕಳೆದ ಜನವರಿಯಲ್ಲಿ ನ್ಯಾಯಾಲಯವು 11 ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆಯನ್ನು ಕೇಳಿತ್ತು, ಜೈಲುಗಳಲ್ಲಿರುವ ಮೂರು ಪ್ರಮುಖ ತಾರತಮ್ಯವನ್ನು ನ್ಯಾಯಾಲಯ ಗುರುತಿಸಿದೆ. ಅದರಲ್ಲಿ ಒಂದು, ಜೈಲುಗಳಲ್ಲಿ ಜಾತಿ ಆಧಾರದ ಮೇಲೆ ಕೈದಿಗಳಿಗೆ ಕೆಲಸಗಳನ್ನು ನೀಡುವುದು. ಎರಡನೆಯದು, ಅವರ ಜಾತಿ ಆಧಾರದ ಮೇಲೆ ಅವರನ್ನು ವರ್ಗೀಕರಿಸಿ ಅವರಿಗೆ ವಸತಿ ವ್ಯವಸ್ಥೆಗಳನ್ನು ಮಾಡುವುದು ಮತ್ತು ಮೂರನೆಯದು, ಕೆಲವು ನಿರ್ದಿಷ್ಟ ಬುಡಕಟ್ಟು ಸಮುದಾಯಗಳ ಮೇಲೆ ವಿಧಿಸಿರುವ ಆರೋಪಗಳು ಮತ್ತು ನಿಬಂಧನೆಗಳು. 'ದಿ ವೈರ್'ನಲ್ಲಿ ಪ್ರಕಟವಾಗಿರುವ ವಿಶೇಷ ತನಿಖಾ ವರದಿ ಸಾಕಷ್ಟು ಸುದ್ದಿ ಮಾಡಿತ್ತು ಮಾತ್ರವಲ್ಲ, ಭಾರತದಲ್ಲಿ ಹರಡಿಕೊಂಡಿರುವ ಜಾತಿ ವ್ಯವಸ್ಥೆಯ ಕರಾಳ ಮುಖವನ್ನು ಇನ್ನಷ್ಟು ವಿಸ್ತ್ರತವಾಗಿ ಚರ್ಚಿಸಲು ಕಾರಣವಾಗಿತ್ತು.
ಈ ವರದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಕೂಡ ತನ್ನದಾಗಿಸಿಕೊಂಡಿತ್ತು. ಜಾತಿ ಅಸ್ಪೃಶ್ಯತೆ, ಜಾತಿ ನಿಂದನೆ, ಜಾತಿ ಹೆಸರಿನಲ್ಲಿ ನಡೆಯುವ ದೌರ್ಜನ್ಯಗಳನ್ನು ನಮ್ಮ ಕಾನೂನು ಅಪರಾಧವೆಂದು ಪರಿಗಣಿಸುತ್ತದೆ ಎಂದೇ ನಾವೆಲ್ಲ ನಂಬುತ್ತಾ ಬಂದಿದ್ದೇವೆ. ಎಲ್ಲೇ ಜಾತಿ ದೌರ್ಜನ್ಯಗಳು ನಡೆದರೂ ತಕ್ಷಣ ಅದರ ವಿರುದ್ಧ ನಾವು ಪೊಲೀಸರಿಗೆ ದೂರು ನೀಡುತ್ತೇವೆ. ಮಲಹೊರುವ ಪದ್ಧತಿಯ ವಿರುದ್ದವೂ ನಮ್ಮಲ್ಲಿ ಕಠಿಣ ಕಾನೂನು ಜಾರಿಯಲ್ಲಿದ್ದು, ಇಂತಹ ಆಚರಣೆಗೆ ದಲಿತರನ್ನು ಒತ್ತಾಯಿಸಿದ ಪ್ರಕರಣಗಳು ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬಹುದಾಗಿದೆ. ಆರೋಪ ಸಾಬೀತಾದರೆ ಜೈಲು ನುಭವಿಸಬೇಕಾಗುತ್ತದೆ. ಶಿಕ್ಷೆ ಅನುಭವಿಸಬೇಕಾಗುತ್ತದೆ. ವಿಪರ್ಯಾಸವೆಂದರೆ, ಇಂತಹ ಪ್ರಕರಣಗಳಲ್ಲಿ ದೋಷಿಗಳೆಂದು ಗುರುತಿಸಲ್ಪಟ್ಟವರನ್ನು ಶಿಕ್ಷಿಸುವುದಕ್ಕಾಗಿ ಇರುವ ಜೈಲುಗಳೇ ಜಾತಿ ವ್ಯವಸ್ಥೆಯನ್ನು ಮಾದರಿಯಾಗಿರಿಸಿಕೊಂಡು, ಕೈದಿಗಳ ಮೇಲೆ ಅದನ್ನು ಹೇರುತ್ತಿವೆ. ಜೈಲುಗಳಲ್ಲೇ ಜಾತಿ ನಿಂದನೆಗಳು, ಜಾತಿ ದೌರ್ಜನ್ಯಗಳು ನಡೆದರೆ ಅವುಗಳ ವಿರುದ್ಧ ಶೋಷಿತ ಸಮುದಾಯ ಯಾರಿಗೆ ದೂರು ನೀಡಬೇಕು? ಉದಾಹರಣೆಗೆ, ಮಧ್ಯ ಪ್ರದೇಶದ ಜೈಲು ಕೈಪಿಡಿಯ ಪ್ರಕಾರ, ಕೈಗಳಿಂದ ಮಾಡುವ ತೋಟ ವೃತ್ತಿಯನ್ನು ಜೈಲುಗಳಲ್ಲಿ ಮೆಹ್ರಾರ್ ಎನ್ನುವ ದಲಿತ ಸಮುದಾಯಕ್ಕೇ ನೀಡಬೇಕಾಗುತ್ತದೆ. ಕಸಗುಡಿಸುವ, ಜೈಲು ಶುಚಿತ್ವದ ಎಲ್ಲ ಕೆಲಸಗಳು ಜೈಲುಗಳಲ್ಲಿ ದಲಿತ ಸಮುದಾಯದ ಕೈದಿಗಳಿಗೆ ಮೀಸಲಾಗಿರುತ್ತವೆ. ಪಶ್ಚಿಮ ಬಂಗಾಳದ ಜೈಲು ಸಂಹಿತೆಯು, ಅಡುಗೆಕೆಲಸಕ್ಕೆ ಉನ್ನತ ಜಾತಿಯ ಕೈದಿಗಳನ್ನು ನೇಮಿಸಲು ಸೂಚನೆ ನೀಡುತ್ತದೆ.
ತಿರುನಲ್ವೇಲಿಯ ಪಾಲಯಂ ಕೋಟೆ ಕೇಂದ್ರ ಕಾರಾಗೃಹದಲ್ಲಿ ಜಾತಿಗೆ ಅನುಗುಣವಾಗಿ ಬ್ಯಾರಕ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ, ತೇವರ್ ಜಾತಿಗೆ ಸೇರಿದ ಕೈದಿಗಳನ್ನು ತೇವರ್ ಬ್ಯಾರಕ್‌ಗೆ ಸೇರಿಸಲಾಗುತ್ತದೆ. ಪಲ್ಸರ್ ಜಾತಿಗಳಿಗೆ ಅವರದೇ ಆಗಿರುವ ಬೇರೆ ಬ್ಯಾರಕ್ ಗಳಿವೆ. ಅತ್ಯಂತ ವಿಷಾದನೀಯ ಸಂಗತಿಯೆಂದರೆ, 2011ರಲ್ಲಿ ಅರ್ಜಿದಾರ ಸಿ. ಆರುಲ್ ಎಂಬವರು ಮದ್ರಾಸ್ ಹೈಕೋರ್ಟ್‌ಗೆ ಇದರ ವಿರುದ್ಧ ಅರ್ಜಿಯನ್ನು ಸಲ್ಲಿಸಿದಾಗ, ರಾಜ್ಯ ಸರಕಾರ ಇದನ್ನು ಅಲ್ಲಗಳೆಯಲಿಲ್ಲ. ಬದಲಿಗೆ ಗೃಹ ಇಲಾಖೆ ಜೈಲಿನ ನಿಯಮಗಳನ್ನು ಸಮರ್ಥಿಸಿಕೊಂಡಿತ್ತು. "ಜೈಲುಗಳೊಳಗೆ ಜಾತಿ ಸಂಘರ್ಷಗಳನ್ನು ತಡೆಯಲು ಇದು ಅತ್ಯಗತ್ಯ" ಎಂದು ಸರಕಾರ ನ್ಯಾಯಾಲಯದ ಮುಂದೆ ಪ್ರತಿಪಾದಿಸಿತು. ಅದಕ್ಕಿಂತ ದೊಡ್ಡ ದುರಂತವೆಂದರೆ, ಮದ್ರಾಸ್ ಹೈಕೋರ್ಟ್ ಕೂಡ ಸರಕಾರದ ವಾದವನ್ನು ಅಂಗೀಕರಿಸಿ ಈ ಜಾತಿ ಬ್ಯಾರಕ್ಗಳನ್ನು ಒಪ್ಪಿಕೊಂಡಿತು. ಜೈಲುಗಳು ನಮ್ಮ ಸಮಾಜದ ಕನ್ನಡಿ. ಸಮಾಜದಲ್ಲಿ ಅಪರಾಧ ಎಸಗಿದವರನ್ನು ಸುಧಾರಿಸುವುದಕ್ಕಾಗಿ ಜೈಲುಗಳಿವೆ ಎಂದು ನಾವು ನಂಬಿದ್ದೇವೆಯಾದರೂ, ಜೈಲುಗಳೇ ಇಂದು ವಿವಿಧ ಅಪರಾಧಗಳಿಗಾಗಿ ಕುಖ್ಯಾತಿಯನ್ನು ಪಡೆದಿವೆ. ಒಬ್ಬ ಅಮಾಯಕ ಯಾರದೋ ತಪ್ಪಿಗಾಗಿ ಜೈಲು ಸೇರಿದರೆ, ಆತನನ್ನು ಒಬ್ಬ ಪರಿಪೂರ್ಣ ಕ್ರಿಮಿನಲ್ ಆಗಿ ಬದಲಾಯಿಸಿ ಜೈಲುಗಳು ಸಮಾಜಕ್ಕೆ ಮರಳಿಸುತ್ತವೆ. ಜೈಲುಗಳಲ್ಲೇ ಕುಳಿತು ಸಮಾಜದೊಳಗಿನ ಅಪರಾಧಗಳ ಸೂತ್ರಗಳನ್ನು ಆಡಿಸುವ ರಾಜಕಾರಣಿಗಳು, ಪಾತಕಿಗಳ ಸಂಖ್ಯೆ ಕಡಿಮೆಯಿಲ್ಲ. ಹಾಗೆಯೇ, ಜಾತೀಯತೆಯ ಕ್ರೌರ್ಯವನ್ನು ತಲೆಯೊಳಗೆ ತುಂಬಿಕೊಂಡಿರುವ ಜೈಲು ಸಿಬ್ಬಂದಿಯ ಸಂಖ್ಯೆ ಈ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಮಲಹೊರುವ ಪದ್ದತಿ ಸಮಾಜದೊಳಗೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಜೈಲುಗಳಲ್ಲಿ ಮಲಹೊರುವ ಪದ್ಧತಿಯನ್ನು ಶಿಕ್ಷೆಯ ರೂಪದಲ್ಲಿ ಇನ್ನೂ ಜೈಲು ಅಧಿಕಾರಿಗಳು ಕಾಪಾಡಿಕೊಂಡು ಬಂದಿದ್ದಾರೆ.
ದಲಿತ ಮತ್ತು ಶೋಷಿತ ಸಮುದಾಯದ ಕೈದಿಗಳ ಕೈಯಲ್ಲಿ ಮಲಹೊರಿಸುವುದರ ಹಿಂದೆ ಜೈಲುಗಳ ಶುಚಿತ್ವವಷ್ಟೇ ಅಧಿಕಾರಿಗಳ ಗುರಿಯಲ್ಲ. ಇದು ಕೈದಿಗಳನ್ನು ಶಿಕ್ಷಿಸುವ ಇನ್ನೊಂದು ವಿಧಾನ. . ಈ ಮೂಲಕ ಆ ಆ ಕೈದಿಗಳನ್ನು ಪೊಲೀಸ್ ಸಿಬ್ಬಂದಿ ಪಳಗಿಸುತ್ತಾರೆ. ಸಮಾಜದಲ್ಲಿ ಅವರ ಸ್ಥಾನಮಾನವನ್ನು ಅವರಿಗೆ ತಿಳಿಸಿಕೊಡುತ್ತಾರೆ. ಮೇಲ್ಜಾತಿಯ ಕೈದಿಗಳಿಗೆ ಅದರಲ್ಲೂ ಬ್ರಾಹ್ಮಣ ಜಾತಿಯ ಕೈದಿಗಳಿಗೆ ಅಡುಗೆ ಕೆಲಸವನ್ನಲ್ಲದೆ ಇನ್ನಾವ ಶ್ರಮದ ಕೆಲಸವನ್ನೂ ಸಿಬ್ಬಂದಿ ನೀಡುವುದಿಲ್ಲ. ಶುಚಿತ್ವ, ಮಲಹೊರುವ ಕೆಲಸಗಳನ್ನು ಕೆಳ ಜಾತಿಯ ಕೈದಿಗಳು ನಿರಾಕರಿಸಿದ್ದೇ ಆದರೆ ಅವರ ಮೇಲೆ ಬರ್ಬರ ದಾಳಿಗಳು ಪೊಲೀಸರಿಂದ ಮಾತ್ರವಲ್ಲ, ಕೆಲವೊಮ್ಮೆ ಮೇಲ್‌ಜಾತಿ ಕೈದಿಗಳಿಂದಲೂ ನಡೆಯುತ್ತವೆ. ಇದೇ ಸಂದರ್ಭದಲ್ಲಿ, ಕೆಲವು ಬುಡಕಟ್ಟು ಸಮುದಾಯಗಳ ಹೆಸರುಗಳೇ ಅವರ ಅಪರಾಧಕ್ಕೆ ಆಧಾರಗಳಾಗಿರುತ್ತವೆ. ಆ ಜಾತಿಯ ವೃತ್ತಿಯೇ ಕಳ್ಳತನವೆಂದು ಜೈಲು ಸಿಬ್ಬಂದಿ ನಿರ್ಧರಿಸಿ ಬಿಟ್ಟಿರುತ್ತಾರೆ. ಇವರನ್ನು ಜೈಲಿನೊಳಗೆ ನಡೆಸಿಕೊಳ್ಳುವ ರೀತಿಯೇ ಬೇರೆಯದಾಗಿರುತ್ತದೆ.
ಜೈಲುಗಳಲ್ಲಿ ದಲಿತ ಕೈದಿಗಳ ಸಂಖ್ಯೆ ಶೇಕಡಾವಾರು ಹೆಚ್ಚಿದೆ. ಹಾಗೆಯೇ ಹಿಂದುಳಿದ ವರ್ಗಕ್ಕೆ ಸೇರಿದ ದುರ್ಬಲ ಸಮುದಾಯ ಜೈಲುಗಳಲ್ಲಿ ಎರಡನೇ ಸ್ಥಾನವನ್ನು ಪಡೆಯುತ್ತಾರೆ. ಅಲ್ಪಸಂಖ್ಯಾತರು ಮೂರನೆಯ ಸ್ಥಾನದಲ್ಲಿದ್ದಾರೆ. ಜೈಲಿನ ಹೊರಗಿರುವ ಸಮಾಜದಲ್ಲಿ ಈ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಕಳಪೆ ಬದುಕು ಕೂಡ ಇದೇ ಕ್ರಮಾಂಕದಲ್ಲಿದೆ ಎನ್ನುವುದನ್ನು ಗಮನಿಸಬೇಕಾಗಿದೆ. ಇಂದು ತಳ ಸಮುದಾಯಕ್ಕೆ ಸೇರಿದ ದೊಡ್ಡ ಸಂಖ್ಯೆಯ ಜನರು ಜಾಮೀನು ನೀಡಲು ಹಣವಿಲ್ಲದೆ, ಜನವಿಲ್ಲದೆ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಕೊಳೆಯುತ್ತಿದ್ದಾರೆ. ತಾವು ಅಪರಾಧಿಗಳು ಹೌದೋ ಅಲ್ಲವೋ ಎಂದು ನಿರ್ಧಾರವಾಗದಿದ್ದರೂ ಶಿಕ್ಷೆ ಅನುಭವಿಸುತ್ತಿದ್ದಾರೆ. ಭಾರತದ ಜೈಲುಗಳು ತನ್ನ ಸಾಮರ್ಥ್ಯವನ್ನು ಮೀರಿ ದುಪ್ಪಟ್ಟು ಪ್ರಮಾಣದಲ್ಲಿ ಕೈದಿಗಳನ್ನು ತುಂಬಿಟ್ಟುಕೊಂಡಿವೆ. ಸಮಾಜ ಅಪರಾಧಿಗಳೆಂದು ಗುರುತಿಸಿ ತಿರಸ್ಕರಿಸಿದ ಈ ಕೈದಿಗಳಲ್ಲಿ ಸುಧಾರಣೆ ತರಲು ಕೆಲಸ ಮಾಡಬೇಕಾಗಿದ್ದ ಭಾರತದ ಜೈಲುಗಳಲ್ಲಿ ಮೊದಲು ಸುಧಾರಣೆ ತರಬೇಕಾಗಿದೆ. ಇಲ್ಲವಾದರೆ, ಇವುಗಳು ಸಮಾಜಕ್ಕೆ ಕ್ರಿಮಿನಲ್‌ಗಳನ್ನು, ಜಾತೀಯತೆಯ ಹೊಲಸುಗಳನ್ನು ಉತ್ಪಾದಿಸಿ ಹೊರ ಬಿಡುವ ಕಾರ್ಖಾನೆಗಳಾಗಿ ಬದಲಾಗುವ ದಿನಗಳು ದೂರವಿಲ್ಲ.