ಅನಾರೋಗ್ಯ ಪೀಡಿತ ಬಡವರಿಗೆ ಬದುಕುವ ಹಕ್ಕಿಲ್ಲವೆ?

Update: 2024-10-17 07:31 GMT

ಸಾಂದರ್ಭಿಕ ಚಿತ್ರ  PC: stock.adobe.com

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜಕಾರಣಿಗಳು ಗೋಹತ್ಯೆ, ಲವ್‌ಜಿಹಾದ್, ಮತಾಂತರ ಇತ್ಯಾದಿಗಳನ್ನು ಭಾರತದ ಜನರ ಮೂಲಭೂತ ಸಮಸ್ಯೆಯೆಂಬಂತೆ ಬಿಂಬಿಸಿ ಹೊಡೆದಾಡಿಸುತ್ತಿರುವ ಹೊತ್ತಿನಲ್ಲೇ, ಭಾರತದ ಔಷಧಿ ಬೆಲೆ ನಿಗದಿ ಪ್ರಾಧಿಕಾರವು ಜನಸಾಮಾನ್ಯರ ಅತ್ಯಗತ್ಯ ಔಷಧಿಗಳ ಬೆಲೆಗಳನ್ನು ಶೇ. 50 ರಷ್ಟು ಹೆಚ್ಚಿಸಿದೆ. ಅಸ್ತಮಾ, ಗ್ಲಾಕೋಮಾ, ಥಲಸೇಮಿಯಾ, ಕ್ಷಯ ಮತ್ತು ಮಾನಸಿಕ ಅಸ್ವಸ್ಥತೆಯಂತಹ ರೋಗಗಳಿಗೆ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವ ಔಷಧಿಗಳು ಜನಸಾಮಾನ್ಯರ ಪಾಲಿಗೆ ದುಬಾರಿಯಾಗಲಿದೆ. 'ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಹಾಲಿ ದರಗಳಲ್ಲಿ ಔಷಧಿಗಳನ್ನು ಮಾರಾಟ ಮಾಡುವುದು ಕಷ್ಟ. ಹಾಗಾಗಿ ಕೆಲವು ಔಷಧಿಗಳ ಬೆಲೆಗಳನ್ನು ಹೆಚ್ಚಿಸಬೇಕು' ಎಂದು ಔಷಧಿ ತಯಾರಿಕೆ ಕಂಪೆನಿಗಳು ಕೋರಿಕೊಂಡ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ನಿರ್ಧಾರಕ್ಕೆ ಬಂದಿದೆಯಂತೆ. ವಿವಿಧ ಬ್ಯಾಕ್ಟಿರಿಯಾ ಸೋಂಕುಗಳ ಚಿಕಿತ್ಸೆಯಲ್ಲಿ ಬಳಕೆಯಾಗುವ ಬೆಂಝಿಲ್ ಪೆನ್ಸಿಲಿನ್‌ನಂತಹ ಇಂಜೆಕ್ಷನ್‌ಗಳು, ನಿಧಾನ ಹೃದಯ ಬಡಿತ ಚಿಕಿತ್ಸೆಗಾಗಿ ಇರುವ ಎಟ್ರೋಪಿನ್‌ ಇಂಜೆಕ್ಷನ್, ಕ್ಷಯರೋಗಕ್ಕೆ ಬಳಕೆಯಾಗುವ ಸ್ಪೆಸ್ಟೋಮೈಸಿನ್ ಪೌಡರ್, ಅಸ್ತಮಾ, ಉಸಿರಾಟ ರೋಗಗಳಿಗಾಗಿ ಇರುವ ಔಷಧಿಗಳು, ರಕ್ತಹೀನತೆಗಾಗಿ ಬಳಸುವ ಇಂಜೆಕ್ಷನ್‌ಗಳು, ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಗಾಗಿ ಇರುವ ಲೀಥಿಯಂ ಮಾತ್ರೆಗಳು ಮುಂದಿನ ದಿನಗಳಲ್ಲಿ ರೋಗಿಗಳ ಪಾಲಿಗೆ ದುಬಾರಿಯಾಗಲಿವೆ. ಈ ಎಲ್ಲ ಔಷಧಿಗಳು ಜನಸಾಮಾನ್ಯರ ದೈನಂದಿನ ಆರೋಗ್ಯದ ವಿಷಯದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಔಷಧಿಗಳ ಈ ದುಬಾರಿ ಬೆಲೆ ದೇಶದ ಆರೋಗ್ಯ ವಲಯದ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರುವುದರಲ್ಲಿ ಅನುಮಾನವಿಲ್ಲ.

ಭಾರತ ಅಸ್ತಮಾ ರೋಗಕ್ಕಾಗಿ ವಿಶ್ವದಲ್ಲೇ ಕುಖ್ಯಾತಿಯನ್ನು ಪಡೆದಿದೆ. ಕೊರೋನೋತ್ತರ ದಿನಗಳು ಅಸ್ತಮಾ ಕಾಯಿಲೆಯನ್ನು ಭೀಕರಗೊಳಿಸಿದೆ. ಕೊರೋನ ವೈರಸ್‌ಗೆ ಅತಿ ಹೆಚ್ಚು ಬಲಿಯಾಗಿರುವುದು ಅಸ್ತಮಾ ಪೀಡಿತರು ಎನ್ನುವುದನ್ನು ಅಧ್ಯಯನ ಹೇಳುತ್ತದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ವಾಯು ಮಾಲಿನ್ಯಗಳು ಭಾರತದಲ್ಲಿ ಅಸ್ತಮಾ ರೋಗಿಗಳನ್ನು ಹೆಚ್ಚಿಸುತ್ತಿವೆ. ಅಸ್ತಮಾದಿಂದ ಇಡೀ ಜಗತ್ತಿನಲ್ಲಿ ಸಂಭವಿಸುವ ಸಾವುಗಳಲ್ಲಿ ಶೇ. 46ರಷ್ಟು ಜನರು ಭಾರತದಲ್ಲಿ ಸಾಯುತ್ತಿದ್ದಾರೆ ಎನ್ನುವುದನ್ನು ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ವರದಿ ಹೇಳುತ್ತದೆ. ಇಂದಿಗೂ ಸೂಕ್ತ ಉಪಚಾರದ ಕೊರತೆಗಳಿಂದಲೇ ಅಸ್ತಮಾದಲ್ಲಿ ಅತಿ ಹೆಚ್ಚು ಸಾವು ನೋವುಗಳು ಭಾರತದಲ್ಲಿ ಸಂಭವಿಸುತ್ತವೆ. ನಗರ ಪ್ರದೇಶದಲ್ಲಿ ಬದುಕುತ್ತಿರುವ ಕಾರ್ಮಿಕ ವರ್ಗ ಇಂದಿಗೂ ಅಸ್ತಮಾ ಕಾಯಿಲೆಯ ಬಗ್ಗೆ ಜಾಗೃತಿಯನ್ನು ಹೊಂದಿಲ್ಲ. ಅವರಿಗೆ ಸೂಕ್ತ ಔಷಧಿಗಳು ಸಿಗುತ್ತಿಲ್ಲ ಅಥವಾ ಅದನ್ನು ಕೊಳ್ಳುವ ಸಾಮರ್ಥ್ಯ ಅವರ ಬಳಿಯಿಲ್ಲ. ನಿವೃತ್ತರಾಗಿ ಮುಸ್ಸಂಜೆಯ ಬದುಕನ್ನು ಅನುಭವಿಸುವ ಹಿರಿಯ ನಾಗರಿಕರನ್ನೂ ಅತಿ ಹೆಚ್ಚು ಕಾಡುತ್ತಿರುವುದು ಅಸ್ತಮಾ ರೋಗ, ಹೀಗಿರುವಾಗ ಅಸ್ತಮಾದ ಔಷಧಿಗಳ ಬೆಲೆಯನ್ನು ಏರಿಸುವುದೆಂದರೆ, ಉಸಿರಾಟಕ್ಕೆ ಹೆಣಗಾಡುತ್ತಿರುವ ರೋಗಿಗಳ ಗಂಟಲನ್ನೇ ಒತ್ತಿ ಹಿಡಿದಂತೆ.

ಸೂಕ್ತ ಔಷಧಿಗಳು ದೊರೆಯುತ್ತಿಲ್ಲ ಎಂದು ಇತ್ತೀಚೆಗೆ ಕ್ಷಯ ರೋಗಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಭಾರತದ ಹಸಿವು ಸೂಚ್ಯಂಕ ಅತ್ಯಂತ ಕಳವಳಕಾರಿ ಸ್ಥಿತಿಯಲ್ಲಿರುವುದನ್ನು ಇತ್ತೀಚೆಗೆ ಜಾಗತಿಕ ವರದಿಯೊಂದು ಬಹಿರಂಗ ಪಡಿಸಿದೆ. ಅದು ಸೂಚ್ಯಂಕವನ್ನು ನಿರ್ಧರಿಸುವಾಗ ಭಾರತದಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯಿಂದ ನರಳುವವರನ್ನು ಗುರುತಿಸಿದೆ. ಅಪೌಷ್ಟಿಕತೆಯ ಕಾರಣದಿಂದಲೇ ಭಾರತದಲ್ಲಿ ರಕ್ತಹೀನತೆಯಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಿದೆ. ಹಸಿವು ಮತ್ತು ಕ್ಷಯ ರೋಗಗಳಿಗೆ ಪರಸ್ಪರ ಸಂಬಂಧವಿದೆ. ಹಸಿವಿನಿಂದ ತತ್ತರಿಸಿ ಕೂತಿರುವ ದೇಹಗಳನ್ನು ಬಲಿ ಹಾಕಲು ಕ್ಷಯ ಹೊಂಚು ಹಾಕಿ ಕಾಯುತ್ತಿರುತ್ತದೆ. ಪೌಷ್ಟಿಕ ಆಹಾರದ ಕೊರತೆಯಿಂದ ಭಾರತದಲ್ಲಿ ಕ್ಷಯ ಅಕ್ಷಯವಾಗುತ್ತಿದೆ. ಇಂತಹ ಹೊತ್ತಿನಲ್ಲಿ ಕ್ಷಯ ರೋಗಿಗಳ ಔಷಧಿಗಳ ದರವನ್ನು ಹೆಚ್ಚಿಸುವುದೆಂದರೆ, ಕ್ಷಯ ರೋಗಿಗಳ ಅಳಿದುಳಿದ ಬದುಕುವ ಅವಕಾಶವನ್ನು ಕಿತ್ತುಕೊಂಡಂತೆಯೇ ಸರಿ. ಭಾರತದಲ್ಲಿ ಕ್ಷಯ ರೋಗಿಗಳ ಸಂಖ್ಯೆ ಶೇ. 27ರಷ್ಟಿದ್ದು, 28.2 ಲಕ್ಷ ಮಂದಿಗೆ ಟಿಬಿ ತಗುಲಿದೆ ಎಂದು 2023ರಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ. ಭಾರತದಲ್ಲಿ ಕ್ಷಯ ರೋಗಕ್ಕೆ ಪ್ರತೀ ವರ್ಷ 3.31 ಲಕ್ಷ ಜನರು ಸಾಯುತ್ತಿದ್ದಾರೆ. ಇದು ಜಗತ್ತಿನಲ್ಲಿಯೇ ಅತ್ಯಂತ ಅಧಿಕ ಎಂದು ಗುರುತಿಸಲಾಗಿದೆ. ಕೊರೋನ ಕಾಲದಲ್ಲಿ ಸರಕಾರ ಕ್ಷಯರೋಗಿಗಳನ್ನು ಮರೆತು, ಕೊರೋನ ಕಡೆ ಗಮನ ಹರಿಸಿರುವುದು ಭಾರತದಲ್ಲಿ ಕ್ಷಯ ಇನ್ನಷ್ಟು ಹರಡುವುದಕ್ಕೆ ಕಾರಣವಾಯಿತು. ಕ್ಷಯ ರೋಗಿಗಳ ಉಚಿತ ಔಷಧಿ, ಪೌಷ್ಟಿಕ ಆಹಾರಕ್ಕಾಗಿ ಇಟ್ಟ ಹಣವನ್ನೂ ಈ ಸಂದರ್ಭದಲ್ಲಿ ಕೊರೋನ ಹೆಸರಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಜಂಟಿಯಾಗಿ ಲೂಟಿ ಹೊಡೆದರು. ಕ್ಷಯ ರೋಗಿಗಳು ಈ ಅವಧಿಯಲ್ಲಿ ಸೂಕ್ತ ಚಿಕಿತ್ಸೆ, ಆರೈಕೆ, ಔಷಧಿಗಳಿಲ್ಲದೆ ಪ್ರಾಣ ಕಳೆದುಕೊಂಡರು. ವಿಶ್ವದ ಕ್ಷಯ ರೋಗ ಪ್ರಮಾಣದ ಶೇ. 87 ರೋಗಿಗಳು ಒಟ್ಟು 30 ದೇಶಗಳಲ್ಲಿದ್ದಾರೆ. ಭಾರತ ಶೇ. 27 ರಷ್ಟು ರೋಗಿಗಳನ್ನು ಹೊಂದಿದ್ದು ಕ್ಷಯ ರೋಗಕ್ಕಾಗಿ ವಿಶ್ವದಲ್ಲೇ ಅಗ್ರ ಸ್ಥಾನದಲ್ಲಿದೆ. ವಿಪರ್ಯಾಸವೆಂದರೆ, ನೆರೆಯ ಪಾಕಿಸ್ತಾನದಲ್ಲಿ ಕ್ಷಯ ರೋಗಿಗಳ ಸಂಖ್ಯೆ ಶೇ. 5.7 ಆಗಿದ್ದರೆ ಬಾಂಗ್ಲಾದಲ್ಲಿ ಶೇ. 3.6. ಕೋವಿಡ್‌ನಿಂದಾಗಿ ಭಾರತದಲ್ಲಿ ಕ್ಷಯ ರೋಗದ ಕುರಿತ ಜಾಗೃತಿ ತೀವ್ರ ಹಿನ್ನಡೆ ಅನುಭವಿಸಿದ್ದು, ಗುರುತಿಸುವ ಕೆಲಸವೂ ತಟಸ್ಥವಾಗಿತ್ತು. 2022ರಲ್ಲಿ 1.1 ಲಕ್ಷ ಪ್ರಕರಣಗಳು ವರದಿಯಾಗಿವೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಕ್ಷಯ ರೋಗಕ್ಕೆ ಸಂಬಂಧಿಸಿ ಔಷಧಿಗಳ ಬೆಲೆಯೇರಿಕೆ ಒಂದು ರೀತಿಯಲ್ಲಿ ಗಾಯದ ಮೇಲೆ ಎಳೆದ ಬರೆಯಾಗಿದೆ. ಇದು ಸಾಮಾಜಿಕವಾಗಿ ಬೇರೆ ಬೇರೆ ನೆಲೆಗಳಲ್ಲಿ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ.

ಭಾರತದಲ್ಲಿ ಮಾನಸಿಕ ರೋಗಗಳ ಬಗ್ಗೆ ಇನ್ನೂ ಭಾರೀ ಅಜ್ಞಾನಗಳಿವೆ. ಒಂದೆಡೆ ಮಾನಸಿಕ ಒತ್ತಡಗಳನ್ನು ಅನುಭವಿಸುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿವೆ. ಆದರೆ ಅದಕ್ಕೆ ಪೂರಕವಾಗಿ ವೈದ್ಯರು ಮತ್ತು ಆಸ್ಪತ್ರೆಗಳ ಭಾರೀ ಕೊರತೆಗಳನ್ನು ಭಾರತ ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿ ಮಾನಸಿಕ ರೋಗಿಗಳಿಗೆ ನೀಡುವ ಔಷಧಿಗಳ ಬಗ್ಗೆಯೂ ಬಹಳಷ್ಟು ಗೊಂದಲಗಳಿವೆ. ವಿದೇಶಗಳಲ್ಲಿ ನಿಷೇಧಿಸಲ್ಪಟ್ಟ ಔಷಧಿಗಳನ್ನು ಭಾರತದಲ್ಲಿ ವಿತರಿಸಲಾಗುತ್ತಿದೆ ಎನ್ನುವುದು ವೈದ್ಯರಮೇಲಿರುವ ಆರೋಪವಾದರೆ, ಮಾನಸಿಕ ಅಸ್ವಸ್ಥತೆಯನ್ನು ದೈಹಿಕ ರೋಗದಂತೆ ಸಹಜವಾಗಿ ತೆಗೆದುಕೊಳ್ಳಲು ಜನರು ಇನ್ನೂ ಸಿದ್ದರಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮಾನಸಿಕ ರೋಗಕ್ಕೆ ಮೌಲ್ಯಗಳನ್ನೇ ಔಷಧಿಗಳನ್ನಾಗಿ ಬಳಸಿ, ರೋಗವನ್ನು ಇನ್ನಷ್ಟು ಭೀಕರವಾಗಿಸುತ್ತಾರೆ. ಇದೇ ಸಂದರ್ಭದಲ್ಲಿ ಮಾನಸಿಕ ರೋಗಿಗಳಿಗೆ ನೀಡುವ ಔಷಧಿಗಳ ಬೆಲೆ ದುಬಾರಿಯಾಗಿರುವುದರಿಂದ ಅದನ್ನು ನಿಯಮಿತವಾಗಿ ತೆಗೆದುಕೊಳ್ಳುವಲ್ಲೂ ರೋಗಿಗಳು ಹಿಂದೇಟು ಹಾಕುತ್ತಿದ್ದಾರೆ.

ಕೊರೋನೋತ್ತರ ದಿನಗಳಲ್ಲಿ ಮಾನಸಿಕ ಒತ್ತಡಗಳಿಂದ ಆತ್ಮಹತ್ಯೆ ಮಾಡುತ್ತಿರುವವರ ಸಂಖ್ಯೆ ಭಾರತದಲ್ಲಿ ಅಧಿಕವಾಗುತ್ತಿದೆ. ಇಂತಹ ಹೊತ್ತಿನಲ್ಲಿ ಭಾರತ ಸರಕಾರ ಮಾನಸಿಕ ಕಾಯಿಲೆಗಳಿಗೆ ಸಂಬಂಧಿಸಿದ ಔಷಧಿಗಳ ಬೆಲೆಯನ್ನು ಹೆಚ್ಚಿಸಲು ಅನುಮತಿ ನೀಡಿದೆ. ಒಂದೆಡೆ ಆರೋಗ್ಯ ಮತ್ತು ಜೀವವಿಮೆ ಪಾಲಿಸಿಗಳ ಮೇಲೆ ಜಿಎಸ್‌ಟಿ ತೆರಿಗೆಯನ್ನು ವಿಧಿಸಿ ಜನರ ಆರೋಗ್ಯದ ಹಕ್ಕನ್ನು ದುಬಾರಿಯಾಗಿಸಿರುವ ಸರಕಾರ, ಇದೀಗ ಔಷಧಿಗಳ ದರವನ್ನು ಹೆಚ್ಚಿಸಿ ಜನರ ಬದುಕನ್ನು ಔಷಧಿ ಕಂಪೆನಿಗಳ ದುರಾಸೆಗೆ ಬಲಿಕೊಟ್ಟಿದೆ. ಸರಕಾರ 'ಜನೌಷಧಿ' ಯ ಮೂಲಕ ಕಡಿಮೆ ದರದಲ್ಲಿ ಔಷಧಿಗಳನ್ನು ಮಾರಾಟ ಮಾಡುವ ಬಗ್ಗೆ ಹೇಳಿಕೆಯನ್ನು ನೀಡುತ್ತಿದೆಯಾದರೂ ಇದರ ಬಗ್ಗೆ ಇರುವ ಗೊಂದಲಗಳು ಇನ್ನೂ ಪರಿಹಾರವಾಗಿಲ್ಲ. ಮುಖ್ಯವಾಗಿ ಜನೌಷಧಿಯಲ್ಲಿ ನೀಡುವ ಔಷಧಿಯ ಗುಣಮಟ್ಟದ ಬಗ್ಗೆ ವೈದ್ಯಕೀಯ ವಲಯದಲ್ಲಿ ಸಾಕಷ್ಟು ವದಂತಿಗಳಿವೆ. ಇದೇ ಸಂದರ್ಭದಲ್ಲಿ ಜೆನೆರಿಕ್ ಔಷಧಿಗಳು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಪೂರೈಕೆಯಾಗುತ್ತಿಲ್ಲ. ಮತ್ತು ಜನರಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಕೊರೋನ ಲಸಿಕೆಯನ್ನು ಜನಸಾಮಾನ್ಯರ ಮೇಲೆ ಬಲವಂತವಾಗಿ ಹೇರಿ, ಅದರ ಹೆಸರಿನಲ್ಲಿ ಔಷಧಿ ಕಂಪೆನಿಗಳು ಸಾವಿರಾರು ಕೋಟಿ ರೂಪಾಯಿಯನ್ನು ದೋಚಲು ಅವಕಾಶ ಕೊಟ್ಟ ಸರಕಾರ, ಇದೀಗ ಜನಸಾಮಾನ್ಯರ ಮೂಲಭೂತ ಅಗತ್ಯವಾಗಿರುವ ಔಷಧಿಗಳ ಬೆಲೆ ಏರಿಕೆಗೆ ಅನುಮತಿ ಕೊಟ್ಟಿರುವುದು ದೇಶದ ಮಧ್ಯಮ ವರ್ಗದ ಜನತೆಗೆ ಮಾಡಿದ ಮಹಾದ್ರೋಹವಾಗಿದೆ. ಈ ಮೂಲಕ ಅನಾರೋಗ್ಯ ಪೀಡಿತ ಮಧ್ಯಮ ವರ್ಗದ ಜನತೆಗೆ ಬದುಕುವ ಹಕ್ಕಿಲ್ಲ ಎನ್ನುವುದನ್ನು ಸರಕಾರವೇ ಘೋಷಿಸಿದಂತಾಗಿದೆ. 

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News