ಹರ್ಯಾಣ ಫಲಿತಾಂಶ: ಕಾಂಗ್ರೆಸ್ ಆರೋಪದಲ್ಲಿ ಹುರುಳಿದೆಯೆ?

Update: 2024-10-10 05:43 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹರ್ಯಾಣದಲ್ಲಿ ಕಳೆದುಕೊಂಡ ಮಾನವನ್ನು ಸರಿದೂಗಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಫಲಿತಾಂಶ ಪೂರ್ಣ ಪ್ರಮಾಣದಲ್ಲಿ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರಾದ ಜೈರಾಂ ರಮೇಶ್ ಅವರು ‘‘ಫಲಿತಾಂಶವನ್ನು ಒಪ್ಪಲು ಸಾಧ್ಯವಿಲ್ಲ. ಮತಯಂತ್ರಗಳನ್ನು ಮತ್ತು ಚುನಾವಣಾ ಪ್ರಕ್ರಿಯೆಯನ್ನು ತಿರುಚಲಾಗಿದೆ’’ ಎಂದು ಆರೋಪಿಸಿದ್ದರು. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದೂ ಹೇಳಿದ್ದರು. ವಿಪರ್ಯಾಸವೆಂದರೆ, ಇಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೇವಲ ಇವಿಎಂ ಮೇಲೆ ಮಾತ್ರ ತಮ್ಮ ಅವಿಶ್ವಾಸವನ್ನು ವ್ಯಕ್ತಪಡಿಸುತ್ತಿಲ್ಲ. ಚುನಾವಣಾ ಆಯೋಗವೂ ಕೇಂದ್ರ ಸರಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿಪಕ್ಷ ನಾಯಕರು ಹಲವು ಬಾರಿ ಆರೋಪಿಸಿದ್ದಾರೆ. ಇವಿಎಂನ ಬಗ್ಗೆ ವಿಪಕ್ಷಗಳು ತಮ್ಮ ಅನುಮಾನ ವ್ಯಕ್ತಪಡಿಸಿದಾಗ ಅದನ್ನು ಚುನಾವಣಾ ಆಯೋಗ ಸಾರಾಸಗಟಾಗಿ ತಳ್ಳಿ ಹಾಕಿತ್ತು. ಹೀಗಿರುವಾಗ ಚುನಾವಣಾ ಆಯೋಗಕ್ಕೆ ದೂರು ನೀಡಿದರೆ, ತಮಗೆ ನ್ಯಾಯ ಸಿಗುತ್ತದೆ ಎಂದು ಅವರು ಹೇಗೆ ನಂಬುತ್ತಾರೆ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಆದರೆ, ಪ್ರಜಾಸತ್ತಾತ್ಮಕವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಕ್ಕೆ ಹೊರತಾದ ಇನ್ನೊಂದು ದಾರಿ ಇಲ್ಲ ಅಥವಾ ಫಲಿತಾಂಶದ ವಿರುದ್ಧ ಪಕ್ಷ ನ್ಯಾಯಾಂಗದ ಮೊರೆ ಹೋಗಬೇಕಾಗುತ್ತದೆ.

ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಿದೆ. ನಿಯೋಗದಲ್ಲಿ ಕೆ. ಸಿ. ವೇಣುಗೋಪಾಲ್, ಅಜಯ್ ಮಾಕೆನ್, ಜೈರಾಂ ರಮೇಶ್, ಪವನ್ ಖೇರ ಮೊದಲಾದವರಿದ್ದರು. ದೂರಿನಲ್ಲಿ, ಸುಮಾರು 20 ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ರಮ ನಡೆದಿದೆ. ಇಲ್ಲಿನ ಮತದಾನ ಯಂತ್ರಗಳನ್ನು ಮೊಹರು ಮಾಡಬೇಕು ಎಂದು ನಾಯಕರು ಒತ್ತಾಯಿಸಿದ್ದಾರೆ. ಇನ್ನೂ 13 ಕ್ಷೇತ್ರಗಳಿದ್ದು ಚುನಾವಣಾ ಆಯೋಗಕ್ಕೆ ಸಲ್ಲಿಸಲು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ.ಆದರೆ ಈ ದೂರುಗಳನ್ನು ಚುನಾವಣಾ ಆಯೋಗ ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬಹುದು ಎನ್ನುವುದನ್ನು ನಾವು ಮೊದಲೇ ಊಹಿಸಬಹುದಾಗಿದೆ. ಈಗಾಗಲೇ ಜೈರಾಂ ರಮೇಶ್ ಆರೋಪಗಳಿಗೆ, ಚುನಾವಣಾ ಆಯೋಗ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ ಮಾತ್ರವಲ್ಲ, ಆರೋಪಗಳನ್ನು ಪರಿಶೀಲಿಸುವ ಕನಿಷ್ಠ ಭರವಸೆಯನ್ನೂ ಚುನಾವಣಾ ಆಯೋಗ ನೀಡಿಲ್ಲ. ನಿಜಕ್ಕೂ 20 ವಿಧಾನಸಭಾ ಕ್ಷೇತ್ರಗಳಲ್ಲಿ ಇವಿಎಂ ಮೂಲಕ ಅಕ್ರಮಗಳು ನಡೆದಿದ್ದರೆ ಅದರಲ್ಲಿ ಪರೋಕ್ಷವಾಗಿ ಚುನಾವಣಾ ಆಯೋಗದ ಪಾತ್ರವನ್ನು ನಾವು ಶಂಕಿಸಬೇಕಾಗುತ್ತದೆ. ಒಂದು ವೇಳೆ ಅಕ್ರಮ ನಡೆದರೆ ತಾನೂ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ಎನ್ನುವುದು ಚುನಾವಣಾ ಆಯೋಗಕ್ಕೆ ಚೆನ್ನಾಗಿಯೇ ಗೊತ್ತಿದೆ. ಆದುದರಿಂದಲೇ, ಜೈರಾಂ ರಮೇಶ್ ಆರೋಪವನ್ನು ಆಯೋಗ ತಿರುಚಿ, ಪ್ರತಿಕ್ರಿಯೆಯನ್ನು ನೀಡಿದೆ.

ಜೈರಾಂ ರಮೇಶ್ ತಮ್ಮ ಹೇಳಿಕೆಯಲ್ಲಿ ‘‘ಚುನಾವಣೆಯ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದರಿಂದ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’’ ಎಂದಿದ್ದರು. ಚುನಾವಣಾ ಆಯೋಗ ಆ ಹೇಳಿಕೆಯನ್ನು ತಿರುಚಿ ‘‘ಚುನಾವಣಾ ಫಲಿತಾಂಶವನ್ನು ಒಪ್ಪಲು ಸಾಧ್ಯವಿಲ್ಲ ಎನ್ನುವ ಹೇಳಿಕೆ ಪ್ರಜಾಸತ್ತೆಗೆ ವಿರುದ್ಧವಾದುದು’’ ಎಂದು ಖರ್ಗೆಗೆ ಬರೆದ ಪತ್ರದಲ್ಲಿ ತಿಳಿಸಿದೆ. ಜನಾದೇಶವನ್ನು ಒಪ್ಪಲಾಗದು ಎಂದು ಕಾಂಗ್ರೆಸ್ ಹೇಳುತ್ತಿಲ್ಲ. ಚುನಾವಣೆಯಲ್ಲಿ ಅಕ್ರಮಗಳು ನಡೆದಿರುವುದರಿಂದ ಫಲಿತಾಂಶವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ.ಚುನಾವಣೆಯಲ್ಲಿ ಅಕ್ರಮಗಳು ನಡೆಯುವುದು ಪ್ರಜಾಸತ್ತೆಗೆ ಶೋಭೆ ತರುವಂತಹದ್ದೇನೂ ಅಲ್ಲ. ಆದುದರಿಂದ ಅಂತಹ ಆರೋಪ ಕೇಳಿ ಬಂದರೆ ಅದರ ಬಗ್ಗೆಯೂ ಪರಿಶೀಲನೆ ನಡೆಸುವ ಭರವಸೆಯನ್ನು ಚುನಾವಣಾ ಆಯೋಗ ನೀಡಬೇಕು. ವಿಪಕ್ಷಗಳು ನೀಡಿದ ದಾಖಲೆಗಳನ್ನು ಪರಿಶೀಲಿಸಿ, ಅದರಲ್ಲಿ ಸತ್ಯಾಂಶಗಳೆಷ್ಟು ಎನ್ನುವುದನ್ನು ಅವಲೋಕಿಸಿ ಬಳಿಕ ಹೇಳಿಕೆಯನ್ನು ನೀಡಬೇಕು. ಆದರೆ ಅದಾವುದನ್ನು ಮಾಡದೆ ಸಾರಾಸಗಟಾಗಿ ಕಾಂಗ್ರೆಸ್ ಪಕ್ಷದ ಆರೋಪವನ್ನು ತಳ್ಳಿಹಾಕಿದರೆ ಅದು ಅನುಮಾನಗಳಿಗೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ. ಚುನಾವಣಾ ಆಯೋಗ ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿದೆ ಎಂದು ವಿಪಕ್ಷಗಳು ಆರೋಪಿಸುವ ಸ್ಥಿತಿ ನಿರ್ಮಾಣವಾಗುತ್ತದೆ.

ಇದೇ ಸಂದರ್ಭದಲ್ಲಿ ಹರ್ಯಾಣ ಸೋಲಿನ ಬಗ್ಗೆ ‘ಇಂಡಿಯಾ’ದ ಭಾಗವಾಗಿರುವ ಇತರ ಪಕ್ಷಗಳ ವಿಶ್ಲೇಷಣೆಯನ್ನೂ ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಕಾಂಗ್ರೆಸ್ನ ದುರಹಂಕಾರ, ಅತಿ ಆತ್ಮವಿಶ್ವಾಸ ಅದರ ಹೀನಾಯ ಸೋಲಿಗೆ ಕಾರಣವಾಯಿತು ಎನ್ನುವುದನ್ನು ಹಲವು ಪ್ರಾದೇಶಿಕ ಪಕ್ಷಗಳು ದೂರಿವೆ. ಆಪ್ ಮತ್ತು ಕಾಂಗ್ರೆಸ್ ಜೊತೆಯಾಗಿ ಚುನಾವಣೆಯನ್ನು ಎದುರಿಸಿದ್ದರೆ ಫಲಿತಾಂಶದಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬರುತ್ತಿದ್ದವು. ಆದರೆ ಉಭಯ ಪಕ್ಷಗಳಿಗೂ ತಮ್ಮ ತಮ್ಮ ಪ್ರತಿಷ್ಠೆಯೇ ಮುಖ್ಯವಾಯಿತು. ಹರ್ಯಾಣದ ಜನತೆಯ ನೋವು, ದುಮ್ಮಾನಗಳಿಗೆ ಈ ಚುನಾವಣೆ ಧ್ವನಿಯಾಗುತ್ತದೆ ಎನ್ನುವುದು ಗೊತ್ತಿದ್ದರೂ, ಈ ಪಕ್ಷಗಳಿಗೆ ಅದು ಮುಖ್ಯವಾಗಲಿಲ್ಲ. ಬಲಾಢ್ಯ ಜಾತಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆಯೇನೋ ನಿಜ. ಆದರೆ ಅನೇಕ ಸಂದರ್ಭದಲ್ಲಿ ಅದು ತಿರುಗುಬಾಣವಾಗುತ್ತದೆ. ಜಾಟ್ ಸಮುದಾಯವನ್ನು ನೆಚ್ಚಿಕೊಂಡು ಉಳಿದ ದುರ್ಬಲ ಸಮುದಾಯಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದಕ್ಕಾಗಿ ಕಾಂಗ್ರೆಸ್ ಭಾರೀ ಬೆಲೆಯನ್ನು ತೆರಬೇಕಾಯಿತು.

ಬಹುಶಃ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೂ, ಅದಕ್ಕಾಗಿ ಬೆಲೆ ತೆರುತ್ತಿರುವುದು ಹರ್ಯಾಣ ಕೇಂದ್ರಿತವಾದ ಜನಪರ ಹೋರಾಟಗಳು. ಕೇಂದ್ರದ ಕೃಷಿ ನೀತಿಯ ವಿರುದ್ಧ ತಲೆಯೆತ್ತಿದ ರೈತ ಆಂದೋಲನಗಳಿಗೆ, ಕ್ರೀಡೆಯನ್ನು ಬಲಿತೆಗೆದುಕೊಳ್ಳುತ್ತಿರುವ ರಾಜಕೀಯ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದ ಕುಸ್ತಿ ಪಟುಗಳಿಗೆ, ಅಗ್ನಿಪಥ್ ಯೋಜನೆಯ ಮೂಲಕ ಸೇನೆಯ ಘನತೆಗೆ ಧಕ್ಕೆ ತಂದ ಕೇಂದ್ರದ ವಿರುದ್ಧ ಹೋರಾಡುತ್ತಿರುವ ಯುವ ಸಮೂಹಕ್ಕೆ ಪರೋಕ್ಷವಾಗಿ ಸಣ್ಣದೊಂದು ಹಿನ್ನಡೆಯಾಗಿದೆ. ಆದರೆ ಚುನಾವಣಾ ಫಲಿತಾಂಶ ಹರ್ಯಾಣದ ಜನಾಕ್ರೋಶದ ಬೆಂಕಿಯನ್ನು ತಣ್ಣಗಾಗಿಸಲಾರದು. ಯಾಕೆಂದರೆ ಅಲ್ಲಿನ ಆಂದೋಲನಗಳು ರೂಪುಗೊಂಡಿರುವುದು ರಾಜಕೀಯೇತರವಾಗಿ. ಯಾವುದೇ ಚುನಾವಣೆಗಳನ್ನು ಮೀರಿ ಜನರು ಬೀದಿಗಿಳಿದು ಆಂದೋಲನದ ರೂಪದಲ್ಲಿ ಕೇಂದ್ರದ ನೀತಿಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಆ ಪ್ರತಿಭಟನೆಗಳನ್ನು ದಮನಿಸುವುದು ಸುಲಭವಿಲ್ಲ. ಚುನಾವಣೆಯ ಫಲಿತಾಂಶದಿಂದ ಧೈರ್ಯ ಪಡೆದುಕೊಂಡವರಂತೆ, ಈ ಆಂದೋಲನಗಳ ಬಗ್ಗೆ ಮತ್ತೆ ಪ್ರಧಾನಿ ಟೀಕೆಗಳ ಸುರಿಮಳೆಯನ್ನು ಹರಿಸಿದ್ದಾರೆ. ಆದರೆ, ಇಂತಹ ಟೀಕೆಗಳು ಪ್ರಧಾನಿ ಮೋದಿ ಸರಕಾರಕ್ಕೆ ಭವಿಷ್ಯದಲ್ಲಿ ಇನ್ನಷ್ಟು ದುಬಾರಿಯಾಗಲಿದೆ. ಮತಗಟ್ಟೆಯಲ್ಲಿ ಮತಗಳನ್ನು ಖರೀದಿಸಿದಷ್ಟು ಸುಲಭದಲ್ಲಿ ಜನರ ಪ್ರಾಮಾಣಿಕ ಆಂದೋಲನಗಳನ್ನು, ರೊಚ್ಚು, ಆಕ್ರೋಶಗಳನ್ನು, ನೋವು ದುಮ್ಮಾನಗಳನ್ನು ಖರೀದಿಸುವುದು ಸಾಧ್ಯವಿಲ್ಲ ಎನ್ನುವುದು ಅವರಿಗೆ ಶೀಘ್ರದಲ್ಲೇ ಅರ್ಥವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News