ವೈಯಕ್ತಿಕ ನಂಬಿಕೆಗಳನ್ನು ಸ್ಪೀಕರ್ ಶಾಸಕರ ಮೇಲೆ ಹೇರುವುದು ಸರಿಯೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸ್ಪೀಕರ್ ಆಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ಯು.ಟಿ.ಖಾದರ್ ಚರ್ಚೆಯಲ್ಲಿದ್ದಾರೆ. ಮುಖ್ಯ ಶಿಕ್ಷಕನಾಗಿ ಸದನದ ಕಲಾಪವನ್ನು ಮುನ್ನಡೆಸುವ ಮಹತ್ತರ ಹೊಣೆಗಾರಿಕೆಯುಳ್ಳ ಸ್ಪೀಕರ್ ಅವರು ನೂತನ ಶಾಸಕರಿಗಾಗಿ ಹಮ್ಮಿಕೊಂಡ ತರಬೇತಿ ಶಿಬಿರದ ಕಾರಣಕ್ಕಾಗಿ ಸ್ವತಃ ಟೀಕೆ ವಿಮರ್ಶೆಗೊಳಗಾಗುತ್ತಿರುವುದು ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ. ‘ನೂತನ ಶಾಸಕರಿಗಾಗಿ ಮೂರು ದಿನಗಳ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಾಸಕರನ್ನು ಉತ್ತಮ ಸಂಸದೀಯ ಪಟುವಾಗಿಸುವುದು ಈ ತರಬೇತಿಯ ಉದ್ದೇಶ. ನೆಲಮಂಗಲದಲ್ಲಿರುವ ಧರ್ಮಸ್ಥಳ ಕ್ಷೇಮವನದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದರು. ಆದರೆ ಈ ಶಿಬಿರದಲ್ಲಿ ಶಾಸಕರಿಗೆ ಮೋಟಿವೇಶನ್ ನೀಡಲು ಆಯ್ಕೆ ಮಾಡಿಕೊಂಡಿರುವ ನಾಲ್ಕು ಹೆಸರುಗಳ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ. ಭಾಷಣಕಾರರಲ್ಲಿ ಮೂವರು ಧಾರ್ಮಿಕ ಮುಖಂಡರಾಗಿದ್ದರೆ, ಓರ್ವ ಸಂಘಪರಿವಾರ ಹಿನ್ನೆಲೆಯಿರುವ ‘ಶಿಕ್ಷಣ ತಜ್ಞ’. ಈ ಶಿಕ್ಷಣ ತಜ್ಞರು ಈಗಾಗಲೇ ಬಹಿರಂಗವಾಗಿ ಕಾಂಗ್ರೆಸ್‌ನ ಗ್ಯಾರಂಟಿಗಳ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಈ ಹಿಂದಿನ ಬಿಜೆಪಿ ಸರಕಾರ ಪಠ್ಯ ಪುಸ್ತಕದಲ್ಲಿ ನಡೆಸಿದ ಹಸ್ತಕ್ಷೇಪವನ್ನು ಸಮರ್ಥಿಸುತ್ತಾ, ನೂತನ ಸರಕಾರ ಆ ಪರಿಷ್ಕೃತ ಪಠ್ಯವನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಟೀಕೆಗೊಳಗಾಗಿದ್ದರು. ಆರೆಸ್ಸೆಸ್‌ನ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಂಡ ಹೆಗ್ಗಳಿಕೆಯೂ ಈ ಚಿಂತಕರಿಗಿದೆ. ಉಳಿದ ಮೂವರು ಧಾರ್ಮಿಕ ಮುಖಂಡರು.
ಮೊದಲ ಬಾರಿ ವಿಧಾನಸೌಧವನ್ನು ತುಳಿಯುವ ಶಾಸಕರಿಗೆ ತರಬೇತಿಯ ಅಗತ್ಯ ಖಂಡಿತವಾಗಿಯೂ ಇದೆ. ಸದನದ ಕಲಾಪದಲ್ಲಿ ಹೇಗೆ ಭಾಗವಹಿಸಬೇಕು, ಈ ಸಂದರ್ಭದಲ್ಲಿ ಅವರ ಜವಾಬ್ದಾರಿಗಳೇನು, ತಮ್ಮ ಕ್ಷೇತ್ರವನ್ನು ಸದನದಲ್ಲಿ ಪ್ರತಿನಿಧಿಸುವ ಬಗೆ ಹೇಗೆ ಇತ್ಯಾದಿಗಳನ್ನು ಅವರಿಗೆ ತಿಳಿಸಿಕೊಡುವ ಅಗತ್ಯ ಖಂಡಿತವಾಗಿಯೂ ಇದೆ. ಇದನ್ನು ತಿಳಿಸಿಕೊಡಬೇಕಾದವರು ಸಂವಿಧಾನತಜ್ಞರು, ಹಿರಿಯ ರಾಜಕಾರಣಿಗಳು, ಹಿರಿಯ ಪತ್ರಕರ್ತರು, ಸಂವಿಧಾನದ ಮೇಲೆ ಗೌರವವಿರುವ ಹಿರಿಯ ಸಾಹಿತಿಗಳು, ಚಿಂತಕರು. ಶಾಸಕರು ಯಾವುದೇ ಜಾತಿ, ಧರ್ಮ, ಪಕ್ಷಗಳಿಗೆ ಸೇರಿರಲಿ, ಒಮ್ಮೆ ಶಾಸಕರಾಗಿ ಆಯ್ಕೆಯಾದ ಬಳಿಕ ಅವುಗಳನ್ನು ಮೀರಿ ಜನಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನೂತನ ಶಾಸಕರಿಗೆ ತರಬೇತಿಯ ಅಗತ್ಯವನ್ನು ಮನಗಂಡ ಕಾರಣಕ್ಕಾಗಿ ನೂತನ ಸ್ಪೀಕರ್ ಯು.ಟಿ.ಖಾದರ್ ಅವರನ್ನು ನಾವು ಅಭಿನಂದಿಸಬೇಕಾಗಿದೆ. ಆದರೆ ಇದೇ ಸಂದರ್ಭದಲ್ಲಿ, ಅದಕ್ಕಾಗಿ ಅವರು ಆಯ್ಕೆ ಮಾಡುವ ಸಂಪನ್ಮೂಲ ವ್ಯಕ್ತಿಗಳು ಸಂವಿಧಾನವನ್ನು ಪ್ರತಿನಿಧಿಸುವವರಾಗಬೇಕು. ಈ ದೇಶದಲ್ಲಿ ಧಾರ್ಮಿಕ ಮುಖಂಡರಿಗೆ ಕೊರತೆಯೇನೂ ಇಲ್ಲ. ಒಂದೊಂದು ಜಾತಿ, ಧರ್ಮ, ಪಂಗಡಗಳಿಗೂ ನೂರಾರು ಧಾರ್ಮಿಕ ಮುಖಂಡರಿದ್ದಾರೆ. ಇವರೆಲ್ಲರೂ ಆಯಾ ಸಮುದಾಯವನ್ನು ಪ್ರತಿನಿಧಿಸುವವರೇ ಹೊರತು, ಇಡೀ ದೇಶದ ಜನಸಮುದಾಯವನ್ನಲ್ಲ. ಕೆಲವು ಗುರೂಜಿಗಳಂತೂ ಬೋಧನೆಯನ್ನು ಉದ್ಯಮ, ದಂಧೆಯಾಗಿಸಿಕೊಂಡಿದ್ದಾರೆ. ಅವರೆಲ್ಲರಿಗೂ ಅವರದೇ ಅನುಯಾಯಿಗಳಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಒಟ್ಟು ಕಟ್ಟೋಣದಲ್ಲಿ ಯಾವ ಪಾತ್ರವೂ ಇವರಿಗಿಲ್ಲ. ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿರುವ ಬೇರೆ ಬೇರೆ ಸಮುದಾಯ, ಬೇರೆ ಬೇರೆ ನಂಬಿಕೆಗಳನ್ನು ಹೊತ್ತುಕೊಂಡು ಬಂದಿರುವ ಶಾಸಕರ ಮೇಲೆ ಸ್ಪೀಕರ್ ಒಬ್ಬರು ತಮ್ಮ ವೈಯಕ್ತಿಕ ನಂಬಿಕೆಯನ್ನು ಹೇರುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ರವಿಶಂಕರ್ ಗುರೂಜಿ ಸಹಿತ ಯಾವುದೇ ಧಾರ್ಮಿಕ ಮುಖಂಡರ ಬಗ್ಗೆ ಗೌರವ, ನಂಬಿಕೆಯನ್ನು ಹೊಂದುವ ಹಕ್ಕನ್ನು ಸಂವಿಧಾನವು ಸ್ಪೀಕರ್ ಅವರಿಗೂ ನೀಡಿದೆ. ಆದರೆ ಅದು ಅವರ ಖಾಸಗಿ ನಂಬಿಕೆಯಾಗಿ ಉಳಿದಾಗ ಮಾತ್ರ ಮಾನ್ಯತೆಯನ್ನು ಪಡೆಯುತ್ತದೆ. ತಾವು ನಂಬಿದ ಸ್ವಾಮೀಜಿಗಳು, ಧರ್ಮಗುರುಗಳನ್ನು ಇತರ ಶಾಸಕರ ಮೇಲೆ ಹೇರಲು ಹೊರಡುವುದು ಸಂವಿಧಾನ ವಿರೋಧಿ ನಡವಳಿಕೆಯಾಗುತ್ತದೆ.
ಸ್ಪೀಕರ್ ಎಂದರೆ ಪಕ್ಷಾತೀತ. ಇದೇ ಸಂದರ್ಭದಲ್ಲಿ ಧರ್ಮಾತೀತನಾಗಿ ಅಂದರೆ ತನ್ನ ಖಾಸಗಿ ಧಾರ್ಮಿಕ ನಂಬಿಕೆಗಳನ್ನು ಬದಿಗಿಟ್ಟು ಸದನವನ್ನು ಮುನ್ನಡೆಸುವುದು ಕೂಡ ಅತ್ಯಗತ್ಯವಾಗಿದೆ. ತಾನು ಸ್ಪೀಕರ್ ಎನ್ನುವ ಕಾರಣಕ್ಕಾಗಿ ತಾನು ನಂಬುವ ಸ್ವಾಮೀಜಿಗಳು, ಧರ್ಮಗುರುಗಳು, ಪವಾಡ ಪುರುಷರ ಪ್ರವಚನಗಳನ್ನು ಇತರ ಶಾಸಕರು ಕೇಳಬೇಕೆಂದು ಬಯಸುವುದು, ಅವರ ಮಾರ್ಗದರ್ಶನದಂತೆ ಮುನ್ನಡೆಯಬೇಕೆಂದು ಬಯಸುವುದು ಸ್ಪೀಕರ್ ಸ್ಥಾನಕ್ಕೆ ಮಾಡುವ ಅವಮಾನವಾಗಿದೆ. ಈ ಹಿಂದಿನ ಸ್ಪೀಕರ್ ಒಬ್ಬರು ಸದನದಲ್ಲಿಯೇ ‘ನಾನು ಆರೆಸ್ಸೆಸ್‌ನಿಂದ ಬಂದವನು ಎನ್ನುವುದರ ಬಗ್ಗೆ ನನಗೆ ಹೆಮ್ಮೆಯಿದೆ’ ಎಂಬ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು. ಸ್ಪೀಕರ್ ಸ್ಥಾನ ನಿರ್ವಹಿಸುವವರು ಆರೆಸ್ಸೆಸ್‌ನಿಂದ ಬಂದಿರಲಿ ಅಥವಾ ಇನ್ನಾವುದೋ ಮಠಗಳಿಂದ ಬಂದಿರಲಿ, ಆದರೆ ಸದನದೊಳಗೆ ಪ್ರವೇಶಿಸುವ ಸಂದರ್ಭದಲ್ಲಿ ಅವರು ಸಂವಿಧಾನವನ್ನಷ್ಟೇ ಪ್ರತಿನಿಧಿಸಬೇಕು. ಸ್ಪೀಕರ್ ಯು.ಟಿ.ಖಾದರ್ ಯಾವುದೇ ಗುರೂಜಿಗಳ ಮನೆಗೆ ಹೋಗಿ ಉದ್ದಂಡ ನಮಸ್ಕಾರ ಹಾಕಿದ್ದರೂ ಅದು ಇಷ್ಟರಮಟ್ಟಿಗೆ ಚರ್ಚೆಯಾಗುತ್ತಿರಲಿಲ್ಲ. ಆದರೆ ತಾನು ನಂಬಿದ ಗುರೂಜಿಗಳನ್ನು ಸದನದೊಳಗೆ ಕರೆತರುವ ಪ್ರಯತ್ನ ನಡೆಸಿರುವುದು, ಇತರ ಶಾಸಕರೂ ತನ್ನಂತೆಯೇ ಅವರಿಗೆ ಉದ್ದಂಡ ನಮಸ್ಕಾರ ಮಾಡಬೇಕು ಎಂದು ಬಯಸಿರುವುದು ಮಾತ್ರ ಪ್ರಶ್ನಾರ್ಹವಾಗಿದೆ.
‘ನಾನು ಪಕ್ಷಾತೀತ, ನಾನು ಎಲ್ಲ ಪಕ್ಷಗಳಿಗೂ ಸ್ಪೀಕರ್’ ಎಂದು ತಮ್ಮ ಕ್ರಮವನ್ನು ಸ್ಪೀಕರ್ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ‘ಅವರು ಏನು ಭಾಷಣ ಮಾಡಲಿದ್ದಾರೆ ಎನ್ನುವುದನ್ನು ಕೇಳಿ ಆ ಬಳಿಕ ಪ್ರತಿಕ್ರಿಯಿಸಿ’ ಎಂದೂ ಹೇಳಿದ್ದಾರೆ. ಎಲ್ಲ ಪಕ್ಷಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎನ್ನುವುದರ ಅರ್ಥ, ಬೇರೆ ಬೇರೆ ಪಕ್ಷಗಳು ಪೋಷಿಸುತ್ತಾ ಬರುತ್ತಿರುವ ಸ್ವಾಮೀಜಿಗಳನ್ನು ತಂದು ಸದನದಲ್ಲಿ ಕೂರಿಸಬೇಕು ಎಂದಲ್ಲ. ಎಲ್ಲ ಧರ್ಮ, ನಂಬಿಕೆಗಳಾಚೆಗೆ ಸಂವಿಧಾನವನ್ನೇ ನಂಬಿಕೆ, ಧರ್ಮವಾಗಿ ಸ್ವೀಕರಿಸಿ ಸದನವನ್ನು ಮುನ್ನಡೆಸುವುದು ಸ್ಪೀಕರ್ ಅವರ ಹೊಣೆಗಾರಿಕೆಯಾಗಿದೆ. ಸಾರ್ವಜನಿಕವಾಗಿ ಸಂವಿಧಾನದ ವಿರುದ್ಧ ಮಾತನಾಡುವ, ನಿರ್ದಿಷ್ಟ ಪಕ್ಷ ಸಂಘಟನೆಗಳ ವಕ್ತಾರರಾಗಿ ಕೆಲಸ ಮಾಡುವ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳುವ ನಾಯಕರು ಶಾಸಕರ ತರಬೇತಿ ಶಿಬಿರದಲ್ಲಿ ಬಂದು ‘ಅಮೃತವನ್ನು ಸುರಿದರೂ’ ಅದು ಶಾಸಕರ ಪಾಲಿಗೆ ವಿಷವಾಗಿ ಬದಲಾಗುತ್ತದೆ. ಈ ಸ್ವಾಮೀಜಿಗಳು ತಮ್ಮ ಅಕ್ರಮಗಳಿಗೆ, ತಮ್ಮ ಸಿದ್ಧಾಂತಗಳಿಗೆ ಶಾಸಕರನ್ನು ದುರ್ಬಳಕೆ ಮಾಡಲು ಸ್ಪೀಕರ್ ಅವರೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದುದರಿಂದ ತನ್ನ ನಂಬಿಕೆಗಳನ್ನು ಇತರ ಶಾಸಕರ ಮೇಲೆ ಹೇರಲು ಪ್ರಯತ್ನಿಸಿದ, ತರಬೇತಿಯ ಹೆಸರಿನಲ್ಲಿ ಶಾಸಕರನ್ನು ಧಾರ್ಮಿಕ ಮುಖಂಡರಿಗೆ ಒತ್ತೆಯಿಡಲು ಯತ್ನಿಸಿದ್ದಕ್ಕಾಗಿ ಸ್ಪೀಕರ್ ಅವರು ಶಾಸಕರ ಕ್ಷಮೆ ಕೋರಿ ಈ ವಿವಾದಿತ ಭಾಷಣಕಾರರನ್ನು ತರಬೇತಿ ಶಿಬಿರದಿಂದ ಹೊರಗಿಡಬೇಕು. ಬದಲಿಗೆ ಅವರ ಜಾಗಕ್ಕೆ ಹಿರಿಯ ಸಂವಿಧಾನ ತಜ್ಞರನ್ನು ಕೂರಿಸಿ ಅವರಿಂದ ಮಾತನಾಡಿಸಬೇಕು ಅಥವಾ ಈ ನಾಡಿನ ಹಿರಿಯ ರೈತನಿಂದಲೋ, ಪೌರಕಾರ್ಮಿಕರ ಪ್ರತಿನಿಧಿಗಳಿಂದಲೋ ಮಾತನಾಡಿಸಿ, ಅವರ ಮೂಲಕ ನಮ್ಮ ಶಾಸಕರು ಸ್ಫೂರ್ತಿ ಪಡೆಯುವಂತಾಗಲಿ.