ಭಾರತದಲ್ಲಿ ಬಡತನ ಇಳಿಕೆಯಾದರೂ ಹಸಿವಿನ ದಾಂಧಲೆಯೇಕೆ ಹೆಚ್ಚುತ್ತಿದೆ?

Update: 2024-10-16 04:19 GMT

PC: istockphoto.com

ಹಸಿವಿನ ಕಾರಣಕ್ಕಾಗಿ ಭಾರತ ಮತ್ತೆ ವಿಶ್ವ ಮಟ್ಟದಲ್ಲಿ ಸುದ್ದಿಯಲ್ಲಿದೆ. ಜಾಗತಿಕ ಹಸಿವು ಸೂಚ್ಯಂಕವನ್ನು ಶನಿವಾರ ಬಿಡುಗಡೆಗೊಳಿಸಲಾಗಿದ್ದು, 127 ರಾಷ್ಟ್ರಗಳ ಪೈಕಿ ಭಾರತವು 105ನೇ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತವು 125 ರಾಷ್ಟ್ರಗಳ ಪೈಕಿ 111ನೇ ಸ್ಥಾನದಲ್ಲಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಹಸಿವಿನಲ್ಲಿ ಭಾರತ ತುಸು ಚೇತರಿಸಿದೆಯಾದರೂ, ಹಸಿವು ಸಮಸ್ಯೆ ಗಂಭೀರವಾಗಿರುವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ಭಾರತವೂ ಸ್ಥಾನ ಪಡೆದುಕೊಂಡಿರುವುದು ‘ವಿಶ್ವ ಗುರು’ವಾಗಲು ಹೊರಟ ಭಾರತಕ್ಕೆ ಯಾವ ರೀತಿಯಲ್ಲೂ ಶೋಭೆ ತರುವುದಿಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನದಂತಹ ದೇಶಗಳು ಆತಂಕ, ಸಂಘರ್ಷ, ಯುದ್ಧ್ದ ಮೊದಲಾದ ಅತಿರೇಕಗಳಿಂದ ಜರ್ಜರಿತವಾಗಿರುವ ದೇಶಗಳು. ಭಾರತವು ಮಂಗಳ, ಚಂದ್ರನ ಕಡೆಗೆ ಹಾರುವ ಕನಸು ಕಾಣುತ್ತಿರುವ ವಿಜ್ಞಾನ, ತಂತ್ರಜ್ಞಾಗಳಲ್ಲಿ ಮುಂಚೂಣಿಯಲ್ಲಿರುವ ದೇಶ. ಕೊರೋನ ಸಂದರ್ಭದಲ್ಲಿ ಬಡ ದೇಶಗಳಿಗೆ ನೆರವಿನ ಹಸ್ತ ಚಾಚಿರುವ ದೇಶ. ಆದರೆ ತನ್ನದೇ ದೇಶದ ಜನರ ಹಸಿವನ್ನು ಇಂಗಿಸುವಲ್ಲಿ ಇದು ವಿಫಲವಾಗಿದೆ ಎನ್ನುವ ಅಂಶ ನಿಜಕ್ಕೂ ನಾಚಿಕೆಗೇಡಿನದ್ದು. ಎಂದಿನಂತೆಯೇ ಈ ಸಮಿಕ್ಷೆಯನ್ನೇ ನಿರಾಕರಿಸುವ ಮೂಲಕ ಭಾರತ ತನ್ನ ಮುಖ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಈ ಹಿಂದೆಯೂ ಭಾರತ ಇದನ್ನೇ ಮಾಡಿತ್ತು. ವಾಸ್ತವವನ್ನು ಒಪ್ಪಿಕೊಂಡು, ಅದನ್ನು ಸರಿಪಡಿಸುವುದಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸುವ ಬದಲು, ವಾಸ್ತವವನ್ನು ನಿರಾಕರಿಸುವುದೇ ಹಸಿವನ್ನು ಗೆಲ್ಲುವ ದಾರಿ ಎಂದು ನಮ್ಮ ನಾಯಕರು ಬಲವಾಗಿ ನಂಬಿದಂತಿದೆ.

2024ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 27.3 ಅಂಕಗಳನ್ನು ಭಾರತ ಹೊಂದಿದ್ದು, ಹಸಿವಿನ ಮಟ್ಟವು ಇಲ್ಲಿ ಗಂಭೀರವಾಗಿದೆ ಎಂದು ವರದಿ ಹೇಳಿದೆ. ಈ ಸೂಚ್ಯಂಕವನ್ನು ಆದಾಯದ ಆಧಾರದಲ್ಲಿ ಅಳೆಯಲಾಗುವುದಿಲ್ಲ. ಬದಲಿಗೆ ಮಕ್ಕಳು ಮತ್ತು ಮಹಿಳೆಯರ ದೈಹಿಕ ಆರೋಗ್ಯವನ್ನು ಮಾನದಂಡವಾಗಿಟ್ಟುಕೊಂಡು ಆಯಾ ದೇಶದ ಹಸಿವಿನ ಪರಿಣಾಮಗಳನ್ನು ತೂಗಲಾಗುತ್ತದೆ. ಭಾರತದಲ್ಲಿ 5 ವರ್ಷಕ್ಕಿಂತ ಕೆಳಗಿನ ಪ್ರಾಯದ ಶೇ. 35.5ಕ್ಕೂ ಅಧಿಕ ಮಕ್ಕಳು ಕುಂಠಿತ ದೇಹ ಬೆಳವಣಿಗೆಯುಳ್ಳವರಾಗಿದ್ದಾರೆ ಎನ್ನುವುದನ್ನು ವರದಿ ಗುರುತಿಸಿದೆ. ಶೇ. 18.07ರಷ್ಟು ಮಕ್ಕಳು ಕೃಶ ಕಾಯರಾಗಿದ್ದರೆ, ದೇಶದ ಜನಸಂಖ್ಯೆಯ ಶೇ. 13.7ರಷ್ಟು ಮಂದಿ ಪೌಷ್ಟಿಕತೆಯ ಕೊರತೆಯನ್ನು ಹೊಂದಿದ್ದಾರೆ. ವಿಪರ್ಯಾಸವೆಂದರೆ ಭಾರತಕ್ಕೆ ಹೋಲಿಸಿದರೆ, ಬಾಂಗ್ಲಾ, ನೇಪಾಳ, ಶ್ರೀಲಂಕಾ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದು, ಸಾಧಾರಣ ಶ್ರೇಣಿಯಲ್ಲಿ ಗುರುತಿಸಿಕೊಂಡಿದೆ. ಗಂಭೀರ ಮಟ್ಟದ ಸಾಲಿನಲ್ಲಿ ಇವುಗಳ ಹೆಸರಿಲ್ಲ. ಭಾರತ ಈ ವರದಿಯನ್ನು ನಿರಾಕರಿಸಿದೆ ಮಾತ್ರವಲ್ಲ, ಭಾರತದಲ್ಲಿ ಬಡವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಸರಕಾರ ಈಗಾಗಲೇ ವರದಿ ಬಿಡುಗಡೆ ಮಾಡಿದೆ. ನೀತಿ ಆಯೋಗದ ಅಧಿಕಾರಿಗಳು ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ 2022-23ರಲ್ಲಿ ಭಾರತದ ಬಡತನ 11.3ಕ್ಕೆ ಕುಸಿತವಾಗಿದೆ. ಈ ಮೂಲಕ ಭಾರತದಲ್ಲಿ ಬಡತನ ನಿವಾರಣೆಯಲ್ಲಿ ಅಭೂತ ಪೂರ್ವ ಸಾಧನೆಯಾಗಿದೆ ಎಂದು ಆಯೋಗ ಹೇಳಿಕೊಂಡಿತ್ತು. ಆಯೋಗದ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು. ‘‘ಎಲ್ಲರನ್ನು ಒಳಗೊಳ್ಳುವ ಬೆಳವಣಿಗೆಗಳನ್ನು ಸಾಧಿಸುವಲ್ಲಿ, ಆರ್ಥಿಕತೆಯಲ್ಲಿ ಸಮಗ್ರ ಬದಲಾವಣೆಗಳನ್ನು ತರುವಲ್ಲಿ ತನ್ನ ಸರಕಾರ ಯಶಸ್ವಿಯಾಗಿರುವುದನ್ನು ವರದಿ ಹೇಳುತ್ತದೆ’’ ಎಂದು ಅವರು ವರದಿಯನ್ನು ವ್ಯಾಖ್ಯಾನಿಸಿದ್ದರು. ಇದಾದ ಬಳಿಕ ನಂದನ್ ನೀಲೇಕಣಿಯ ನೇತೃತ್ವದ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿಯ ಮಾನವ ಅಭಿವೃದ್ಧಿ ಸಮೀಕ್ಷೆಯೂ ದೇಶದಲ್ಲಿ ಬಡವರ ಸಂಖ್ಯೆ ಶೇ. 21ರಿಂದ 8.5ಕ್ಕೆ ಇಳಿಕೆಯಾಗಿದೆ ಎಂದು ಹೇಳಿತ್ತು. ಪುಣ್ಯಕ್ಕೆ ದೇಶಾದ್ಯಂತ ಒದಗಿಸುತ್ತಿರುವ ಸಬ್ಸಿಡಿ ಆಹಾರ, ಆರ್ಥಿಕ ನೆರವುಗಳನ್ನು ಈ ಸಂದರ್ಭದಲ್ಲಿ ಸಮೀಕ್ಷೆ ಎತ್ತ್ತಿ ಹಿಡಿದಿತ್ತು. ಬಡತನ ಇಳಿಕೆಯಲ್ಲಿ ಈ ನೆರವುಗಳು ಪರಿಣಾಮಕಾರಿ ಪಾತ್ರವಹಿಸಿದೆ ಎಂದು ಗುರುತಿಸಿರುವ ನಿಲೇಕಣಿ ಸಮೀಕ್ಷೆ, ಸಾಮಾಜಿಕ ಭದ್ರತೆಗೆ ಸರಕಾರ ಒತ್ತು ನೀಡದೇ ಇದ್ದರೆ ಬಡತನ ಮತ್ತೆ ಉಲ್ಬಣಿಸಲಿದೆ ಎಂದು ಎಚ್ಚರಿಸಿತ್ತು.

ಭಾರತದಲ್ಲಿ ಬಡತನ ಇಳಿಕೆಯಾಗುತ್ತಿದ್ದರೂ ಹಸಿವು ಯಾಕೆ ಹೆಚ್ಚುತ್ತಿದೆ? ಎನ್ನುವ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇದ್ದರೆ ಭಾರತ ಈ ಕಳಂಕದಿಂದ ಮೇಲೆದ್ದು ನಿಲ್ಲುವುದಕ್ಕೆ ಸಾಧ್ಯವೇ ಇಲ್ಲ. ಮೊತ್ತ ಮೊದಲಾಗಿ, ಬಡತನಕ್ಕೂ, ಹಸಿವಿಗೂ ನೇರ ಸಂಬಂಧವಿದೆ ಎನ್ನುವುದನ್ನು ಸರಕಾರ ಒಪ್ಪಿಕೊಳ್ಳಬೇಕು. ಬಡತನ ಇಳಿಕೆಯಾಗಿರುವುದು ನಿಜವೇ ಆಗಿದ್ದರೆ, ಈ ದೇಶದಲ್ಲಿ ರೋಗ ಪೀಡಿತ ಮಕ್ಕಳ ಸಂಖ್ಯೆಯಲ್ಲಿ, ಬಾಣಂತಿಯರ ಸಾವಿನಲ್ಲಿ, ರೋಗ ಪೀಡಿತ ಬಾಣಂತಿಯರ ಸಂಖ್ಯೆಯಲ್ಲಿ ಇಳಿಮುಖವಾಗಬೇಕು. ಅಪೌಷ್ಟಿಕತೆಯಿಂದ ರೋಗಪೀಡಿತರಾಗುವವರ ಸಂಖ್ಯೆ ಕಡಿಮೆಯಾಗಬೇಕು. ಇಲ್ಲವಾದರೆ, ಬಡತನದ ಇಳಿಕೆಯೆನ್ನುವುದು ಅಂಕಿ ಸಂಕಿಗಳ ತಂತ್ರವಾಗಿಯಷ್ಟೇ ಮುಗಿಯುತ್ತದೆ. ಭಾರತ ಬಡತನವನ್ನು ಇಳಿಕೆ ಮಾಡಲು ಕಂಡುಕೊಂಡ ಸುಲಭ ಉಪಾಯ, ಬಡತನಕ್ಕೆ ಇರುವ ಆದಾಯದ ಮಾನದಂಡವನ್ನಷ್ಟೇ ಇಳಿಕೆ ಮಾಡಿರುವುದು. ಸುರೇಶ್ ತೆಂಡುಲ್ಕರ್ ಸಮಿತಿಯು 2004ರಲ್ಲಿ ಸಮೀಕ್ಷೆಯನ್ನು ನಡೆಸಿದ ಬಳಿಕ ನಗರದಲ್ಲಿ ದಿನಕ್ಕೆ 32 ರೂಪಾಯಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 28 ರೂಪಾಯಿ ಆದಾಯ ಇರುವವರನ್ನು ಕಡು ಬಡವರು ಎಂದು ಘೋಷಿಸಿತು. ವಿಶ್ವ ಬ್ಯಾಂಕ್ ಬಡತನವನ್ನು ಗುರುತಿಸಲು ಪ್ರತೀ ವ್ಯಕ್ತಿಯ ದಿನದ ಆದಾಯ 180 ರೂಪಾಯಿ ಎಂದು ನಿಗದಿ ಪಡಿಸಿದೆ. ಆದರೆ ಭಾರತದಲ್ಲಿ ಬಡವರನ್ನು ಗುರುತಿಸುವ ಸಂದರ್ಭದಲ್ಲಿ ತೆಂಡುಲ್ಕರ್ ಮಾನದಂಡವನ್ನೇ ಇಟ್ಟು ಸಮೀಕ್ಷೆ ಮಾಡಲಾಗುತ್ತದೆ. ಈ ಆದಾಯದ ಆಧಾರದಲ್ಲಿ ಬಡತನವನ್ನು ಗುರುತಿಸುವಾಗ ಹಣದುಬ್ಬರ ಹೇಗೆ ವರ್ಷದಿಂದ ವರ್ಷಕ್ಕೆ ಆದಾಯದ ಮೌಲ್ಯವನ್ನು ಕೆಳಗಿಳಿಸಿದೆ ಎನ್ನುವುದನ್ನು ಉದ್ದೇಶಪೂರ್ವಕವಾಗಿ ಗಮನಿಸಲಾಗುವುದಿಲ್ಲ. ಆದುದರಿಂದಲೇ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಬಡವರು ಇಳಿಕೆಯಾಗುತ್ತಿದ್ದಾರೆ. ಆದರೆ ಹಸಿವು ಹೆಚ್ಚಾಗುತ್ತಿದೆ.ಭಾರತದಲ್ಲಿ 60 ಲಕ್ಷ ಮಕ್ಕಳು ಶೂನ್ಯ ಆಹಾರದೊಂದಿಗೆ ಬದುಕುತ್ತಿದ್ದಾರೆ ಎನ್ನುವ ಅಂಶವನ್ನು ಹಾರ್ವರ್ಡ್ನ ಅಧ್ಯಯನವೊಂದು ಬಹಿರಂಗಪಡಿಸಿತ್ತು. ಈ ಮಕ್ಕಳು ಪೌಷ್ಟಿಕವಾದ ಯಾವುದೇ ಆಹಾರವಿಲ್ಲದೆ ಸಾಯುತ್ತಿದ್ದಾರೆ ಎನ್ನುವ ಅಂಶವನ್ನು ಬಹಿರಂಗಪಡಿಸಿದಾಗಲೂ ಭಾರತ ಅದನ್ನು ಸಾರಾಸಗಟಾಗಿ ವಿರೋಧಿಸಿತ್ತು.

ವಿಪರ್ಯಾಸವೆಂದರೆ ಬಡವರಿಗೆ ಉಚಿತ ಆಹಾರಗಳನ್ನು, ಬದುಕಲು ಬೇಕಾದ ಅತ್ಯಗತ್ಯ ನೆರವನ್ನು ನೀಡಿದಾಗ ಅದನ್ನು ನ್ಯಾಯಾಲಯ ಕೂಡ ಪ್ರಶ್ನಿಸುತ್ತದೆ. ಈ ಬಗ್ಗೆ ಸರಕಾರಕ್ಕೆ ನೋಟಿಸ್ ಜಾರಿಗೊಳಿಸುತ್ತದೆ. ಆದರೆ, ಭಾರತದ ಹಸಿವಿನ ಬಗ್ಗೆ ಗಂಭೀರ ವರದಿಗಳು ಹೊರ ಬಿದ್ದಾಗ ನ್ಯಾಯಾಲಯ ಜಾಣಕುರುಡು, ಜಾಣ ಕಿವುಡನ್ನು ಪ್ರದರ್ಶಿಸುತ್ತದೆ. ಭಾರತದಲ್ಲಿ ಯಾರಾದರೂ ಹಸಿವಿನಿಂದ ಸತ್ತರೆ ಅದಕ್ಕೆ ಸರಕಾರವೇ ಹೊಣೆಯಾಗಬೇಕು. ಹಸಿವಿನಿಂದ ಸಾವು ಒಂದು ಅಪರಾಧವಾಗಬೇಕು. ಕೇಂದ್ರ ಸರಕಾರ ನಡೆಸುವ ಮಾರಣ ಹೋಮವೆಂದು ಅದನ್ನು ಕರೆಯಬೇಕು. ಈ ನಿಟ್ಟಿನಲ್ಲಿ ಹಸಿವು ಸೂಚ್ಯಂಕದ ವರದಿಯ ಸತ್ಯಾಸತ್ಯತೆಯನ್ನು ಅರಿಯಲು ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಯಬೇಕಾಗಿದೆ. ಸರಕಾರದ ಅಂಕಿಸಂಕಿಗಳ ಮರೆಯಲ್ಲಿ ನಡೆಯುವ ಹಸಿವಿನ ಕಗ್ಗೊಲೆಗೆ ಇನ್ನಾದರೂ ವಿರಾಮ ಬೀಳಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News