ಸಾಸ್ತಾನ ಟೋಲ್‌ಗೇಟ್ ಸಮಸ್ಯೆ: ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವತಿಯಿಂದ ಪ್ರತಿಭಟನೆ

Update: 2024-11-09 14:54 GMT

ಬ್ರಹ್ಮಾವರ, ನ.9: ಸಂಪೂರ್ಣ ಹದಗೆಟ್ಟು ಹೊಂಡ ಗುಂಡಿಗಳಿಂದ ತುಂಬಿರುವ ಹೆದ್ದಾರಿ, ಉರಿಯದ ಬೀದಿ ದೀಪಗಳು, ಪಾದಚಾರಿಗಳಿಗೆ ವಿವಿಧ ಸಮಸ್ಯೆ ಹಾಗೂ ಸ್ಥಳೀಯ ವಾಹನಗಳಲ್ಲಿ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿರುವ ವಾಹನ ಗಳಿಗೆ ಟೋಲ್ ಶುಲ್ಕ ವಿಧಿಸುತ್ತಿರುವುದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವತಿಯಿಂದ ಇಂದು ಸಂಜೆ ಸಾಸ್ತಾನ ಟೋಲ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ ನಾಯರಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋಟ ಜಿಪಂ ವ್ಯಾಪ್ತಿಯ ಕಮರ್ಷಿಯಲ್ ವಾಹನಗಳಿಗೆ ಟೋಲ್ ಸಂಗ್ರಹ ಮಾಡದಂತೆ ಸ್ಪಷ್ಟ ಸೂಚನೆಯನ್ನುನೀಡಲಾಗಿತ್ತು. ಸ್ಥಳೀಯ ಶಾಲೆಗಳ ವಾಹನಗಳಿಗೆ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿತ ವಾಹನಗಳಿಗೆ ಟೋಲ್ ವಿಧಿಸುವ ಮೂಲಕ ಪುನಃ ಸಮಸ್ಯೆಗಳನ್ನು ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಹೊಂಡಗುಂಡಿಗಳು ನಿರ್ಮಾಣವಾಗಿವೆ. ಅವುಗಳನ್ನು ರಿಪೇರಿ ಮಾಡಿಲ್ಲ. ಅಲ್ಲದೇ ಬೀದಿ ದೀಪಗಳು ಕೂಡ ಉರಿಯದ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಯಾವುದೇ ರೀತಿಯ ಸ್ಪಂದನೆ ಟೋಲ್ ಅಧಿಕಾರಿಗಳಿಂದ ಲಭಿಸುತ್ತಿಲ್ಲ. ಪಾದಚಾರಿಗಳು ಸಂಚರಿಸುವ ರಸ್ತೆಗಳಲ್ಲಿ ಕೂಡ ಹೊಂಡಬಿದ್ದು ಸಮಸ್ಯೆಗಳಾಗುತ್ತಿವೆ ಎಂದರು.

ಎಕ್ಸ್‌ಪ್ರೆಸ್ ವೇಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಕಡ್ಡಾಯವಾಗಿದ್ದರೂ ಕೂಡ ಅದಕ್ಕೂ ಇಲ್ಲಿ ಸ್ಪಂದನೆ ನೀಡುತ್ತಿಲ್ಲ ಎಂದು ಸಮಸ್ಯೆಗಳ ಸರಮಾಲೆ ಯನ್ನು ಜನತೆ ಮುಂದೆ ತೆರೆದಿಟ್ಟ ಶ್ಯಾಮಸುಂದರ ನಾಯರಿ, ಟೋಲ್ ಅಧಿಕಾರಿಗಳ ನಿರ್ಲಕ್ಷತ ನಕ್ಕೆ ಪ್ರತಿಬಾರಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಒದಗಿ ಬಂದಿರುವುದು ನಾಚಿಕೇಗೇಡು ಎಂದರು.

ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಮಾತನಾಡಿ, ಟೋಲ್ ಗುತ್ತಿಗೆಯನ್ನು ಇಂಗ್ಲೆಂಡ್ ಮೂಲದ ಕೆಕೆಆರ್ ಎಂಬ ಕಂಪೆನಿ ವಹಿಸಿ ಕೊಂಡಿದ್ದು ಸ್ಥಳೀಯರ ಸಮಸ್ಯೆಗಳ ಕುರಿತು ಮಾತನಾಡಿದರೆ ಯಾವುದೇ ರೀತಿಯಲ್ಲಿ ಕ್ಯಾರೇ ಅನ್ನುತ್ತಿಲ್ಲ. ಸಾಸ್ತಾನಕ್ಕೆ ಈ ಟೋಲ್ ಒಂದು ಶನಿಯಂತೆ ಒಕ್ಕರಿಸಿದ್ದು 2016ರಿಂದ ಪ್ರತಿ ವಿಚಾರಕ್ಕೂ ಇಲ್ಲಿ ಪ್ರತಿಭಟನೆ ಮಾಡುವ ಪರಿಸ್ಥಿತಿ ಒದಗಿದೆ. ರಸ್ತೆಗೆ ಪ್ಯಾಚ್‌ಅಪ್ ವರ್ಕ್ ಮಾಡಲು ಹೇಳಿದರೆ ಹಳೆಯ ಡಾಂಬರಿನ ಹುಡಿಯನ್ನು ಹಾಕಿ ಕಣ್ಣೋರೆ ಸುವ ತಂತ್ರ ಮೂಲಕ ಹಣ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಸ್ಥಳಕ್ಕೆ ಬಾರದ ಹಿರಿಯ ಅಧಿಕಾರಿಗಳು: ಸ್ಥಳಕ್ಕೆ ಟೋಲ್ ಅಧಿಕಾರಿಗಳು ಬರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ ಮೇರೆಗೆ ಟೋಲ್ ಸಿಬಂದ್ದಿ ಗಳು ಆಗಮಿಸಿದ್ದು, ಹಿರಿಯ ಅಧಿಕಾರಿಗಳು ಬರದಿದ್ದಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಬ್ರಹ್ಮಾವರ ಸರ್ಕಲ್ ಇನ್‌ಸ್ಪೆಕ್ಟರ್ ದಿವಾಕರ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.

ಪ್ರತಿಭಟನೆಯಲ್ಲಿ ಸಾಸ್ತಾನ ಸಂತ ಅಂತೋನಿ ಚರ್ಚಿನ ಧರ್ಮಗುರು ವಂ. ಸುನೀಲ್ ಡಿಸಿಲ್ವಾ, ಸೀರಿಯನ್ ಚರ್ಚಿನ ಧರ್ಮಗುರು ವಂ. ಡೇವಿಡ್ ಕ್ರಾಸ್ತಾ, ಹೋರಾಟ ಸಮಿತಿಯ ಪ್ರಮುಖರಾದ ಆಲ್ವಿನ್ ಅಂದ್ರಾದೆ, ನಾಗರಾಜ್ ಗಾಣಿಗ, ಡೆನಿಸ್ ಡಿಸೋಜಾ, ಪಂಚಾಯತ್ ಸದಸ್ಯರಾದ ಚಂದ್ರ ಮೋಹನ್, ವಾಹನ ಚಾಲಕರು ಮತ್ತು ಮ್ಹಾಲಕರ ಸಂಘದ ಪದಾಧಿಕಾರಿಗಳು,ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ನ.11ಕ್ಕೆ ಸಭೆ ನಡೆಸಲು ನಿರ್ಧಾರ

ಟೋಲ್ ಅಧಿಕಾರಿಗಳ ಅಸಹಕಾರಕ್ಕೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಬ್ರಹ್ಮಾವರ ಸರ್ಕಲ್ ಇನ್‌ಸ್ಪೆಕ್ಟರ್ ದಿವಾಕರ್ ಅವರು ಟೋಲ್ ಹಿರಿಯ ಅಧಿಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸಿ ಸೋಮವಾರ ನ.11ರಂದು ಬ್ರಹ್ಮಾವರದಲ್ಲಿ ಟೋಲ್‌ನ ಹಿರಿಯ ಅಧಿಕಾರಿ ಗಳು, ತಹಶೀಲ್ದಾರ್ ಹಾಗೂ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಸಮಸ್ಯೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಕುರಿತು ತೀರ್ಮಾನಿ ಸಲಾಯಿತು. ಸಭೆ ನಡೆಯುವವರೆಗೆ ಯಾವುದೇ ಸ್ಥಳೀಯ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿರುವ ವಾಹನಗಳಿಗೆ, ಶಾಲಾ ವಾಹನಗಳಿಗೆ ಟೋಲ್ ಪಡೆಯದಂತೆ ಸರ್ಕಲ್ ಇನ್‌ಸ್ಪೆಕ್ಟರ್ ಅವರು ಟೋಲ್ ಸಿಬಂದಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.











Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News