ಆದಾಯ ಹೆಚ್ಚಳಗೊಂಡ ಕೇವಲ 26 ಬಿಪಿಎಲ್ ಕಾರ್ಡ್‌ಗಳು ಅನರ್ಹ!

Update: 2024-11-12 19:54 IST
ಆದಾಯ ಹೆಚ್ಚಳಗೊಂಡ ಕೇವಲ 26 ಬಿಪಿಎಲ್ ಕಾರ್ಡ್‌ಗಳು ಅನರ್ಹ!
  • whatsapp icon

ಉಡುಪಿ, ನ.12: ಉಡುಪಿಯಲ್ಲಿ ಯಾವುದೇ ಕುಟಂಬದ ಬಿಪಿಎಲ್ ಕಾರ್ಡ್‌ಗಳನ್ನು ರದ್ಧತಿ ಮಾಡಲಾಗಿಲ್ಲ. ತೆರಿಗೆ ಪಾವತಿದಾರರು ಮತ್ತು ಆದಾಯ ಹೆಚ್ಚಳವಾಗಿರುವ ಕೇವಲ 44 ಕುಟುಂಬಗಳ ಬಿಪಿಎಲ್ ಕಾರ್ಡ್‌ನ್ನು ಅನರ್ಹಗೊಳಿಸಿ ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ. ಈ ಪ್ರಕ್ರಿಯೆ ಯನ್ನು ಕುಟುಂಬಗಳ ಹೇಳಿಕೆ ಪಡೆದುಕೊಂಡೆ ಮಾಡಲಾಗಿದೆ ಎಂದು ಉಡುಪಿ ತಾಪಂ ಕಚೇರಿಯಲ್ಲಿ ಇಂದು ನಡೆದ ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಉಡುಪಿಯ ಆಹಾರ ನಿರೀಕ್ಷರು ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ವಿಷಯ ಪ್ರಸ್ತಾಪಿಸಿ, ಉಡುಪಿ ಜಿಲ್ಲೆಯಲ್ಲಿ 40ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಬಡವರಿಗೆ ಸಮಸ್ಯೆ ಆಗುತ್ತದೆ. ಅವರನ್ನು ಎಲ್ಲ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದರು.

ಇದಕ್ಕೆ ಸ್ಪಷ್ಟನೆ ನೀಡಿದ ಆಹಾರ ನಿರೀಕ್ಷಕರು, ಉಡುಪಿಯಲ್ಲಿನ ಆದಾಯ ಹೆಚ್ಚಳ ಮತ್ತು ತೆರಿಗೆ ಪಾವತಿದಾರ ಒಟ್ಟು 11238 ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳ ವಿವರ ವನ್ನು ಪರಿಶೀಲನೆ ಮಾಡುವಂತೆ ಬೆಂಗಳೂರಿನ ಕಮಿಷನರ್ ಕಚೇರಿಯಿಂದ ಕಳುಹಿಸಿಕೊಡಲಾಗಿತ್ತು. ಅದರಂತೆ ತೆರಿಗೆ ಪಾವತಿದಾರ 508 ಕಾರ್ಡ್‌ಗಳ ಪೈಕಿ ಒಟ್ಟು 238 ಕಾರ್ಡ್‌ಗಳನ್ನು ಪರಿಶೀಲನೆ ಮಾಡಲಾಗಿದ್ದು, ಅದರಲ್ಲಿ 220 ಕುಟುಂಬಗಳು ಬಿಪಿಎಲ್ ಕಾರ್ಡ್‌ಗೆ ಅರ್ಹರಾಗಿದ್ದಾರೆ. 18 ಕಾರ್ಡ್‌ಗಳು ಅರ್ನಹಗೊಳಿಸಲಾಗಿದೆ. ಇನ್ನು 270 ಕಾರ್ಡ್‌ಗಳು ಪರಿಶೀಲನೆಗೆ ಬಾಕಿ ಇವೆ ಎಂದರು.

ಕುಟುಂಬದ ಆದಾಯ ಹೆಚ್ಚಳಗೊಂಡಿರುವ 10730 ಬಿಪಿಎಲ್ ಕಾರ್ಡ್‌ಗಳ ಪೈಕಿ ಒಟ್ಟು 9243 ಕಾರ್ಡ್‌ಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ 9217 ಕಾರ್ಡ್‌ಗಳು ಬಿಪಿಎಲ್‌ಗೆ ಅರ್ಹವಾಗಿದೆ. ಕೇವಲ 26ಕಾರ್ಡ್‌ಗಳು ಮಾತ್ರ ಅನರ್ಹಗೊಂಡಿದೆ. ಇನ್ನು 1487 ಕಾರ್ಡ್‌ಗಳು ಪರಿಶೀಲನೆಗೆ ಬಾಕಿ ಇದೆ. ಅನರ್ಹಗೊಂಡ ಕಾರ್ಡುದಾರರ ಹೇಳಿಕೆಯನ್ನು ಪಡೆದುಕೊಂಡು ಅವರ ಹೇಳಿಕೆ ತೆಗೆದುಕೊಂಡು ಮಾಡಲಾಗಿದೆ. ಇಲ್ಲಿ ಯಾವುದೇ ಕುಟುಂಬಗಳ ಕಾರ್ಡ್ ರದ್ಧಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

‘ಅನರ್ಹ ಬಿಪಿಎಲ್ ಕಾರ್ಡ್ ಎಂದು ಗುರುತಿಸಿರುವ ಪಡಿತರ ಚೀಟಿಗಳ ಫಲಾನುಭವಿಗಳ ದಾಖಲೆಗಳ ನೈಜತೆ ಪರಿಶೀಲನೆ ಮಾಡಿ ನಂತರವೆ ಅವರ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಆ ಫಲಾನುಭವಿಗಳಿಗೆ ಪಡಿತರ ವ್ಯವಸ್ಥೆಯನ್ನು ಮೊದಲಿನಂತೆ ಮುಂದುವರೆಸ ಬೇಕು’ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು.

ಉಡುಪಿ ತಾಲೂಕಿನ ಕೊಡವೂರು, ಹೆರ್ಗ, ಶಿವಳ್ಳಿ ಗ್ರಾಮಗಳಲ್ಲಿ ಹಕ್ಕುಪತ್ರ ನೀಡಲು ಬಾಕಿ ಇದ್ದು, ಅದರ ಎಲ್ಲ ಪ್ರಕ್ರಿಯೆಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಿ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಪು ಕ್ಷೇತ್ರದ 10 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ 94 ಸಿ. ಹಾಗೂ 94 ಸಿ.ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಕಡತಗಳನ್ನು ಶೀಘ್ರವೇ ವಿಲೆಗೊಳಿಸಬೇಕು. ಸಣ್ಣ ನೀರಾವರಿ ವ್ಯಾಪ್ತಿಗೆ ಬರುವ ಕಿಂಡಿ ಅಣೆಕಟ್ಟುಗಳಲ್ಲಿ ನೀರಿನ ಶೇಖರಣೆ ಯನ್ನು ಸಮರ್ಪಕವಾಗಿ ನಿರ್ವಹಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಕುಡಿಯುವ ನೀರು ಹಾಗೂ ಕೃಷಿ ಕಾರ್ಯಗಳಿಗೆ ಅನುಕೂಲ ಮಾಡಬೇಕು ಎಂದು ಗುರ್ಮೆ ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಉಡುಪಿ ಕ್ಷೇತ್ರದ 34 ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ಸಭೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ತಾಪಂ ಆಡಳಿತಾಧಿಕಾರಿ ರವೀಂದ್ರ, ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿಜಯ, ಉಡುಪಿ ತಹಶೀಲ್ದಾರ್ ಗುರುರಾಜ ಪಿ.ಆರ್., ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಉಪಸ್ಥಿತರಿದ್ದರು.

ತಾಪಂ ಸಹಾಯಕ ನಿರ್ದೇಶಕಿ ಫರ್ಝಾನಾ ಸ್ವಾಗತಿಸಿದರು. ದಿನಕರ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

ನಾಳೆಯಿಂದಲೇ ರಸ್ತೆ ದುರಸ್ತಿ ಕಾಮಗಾರಿ

ಬೀಡಿನಗುಡ್ಡೆ, ಕುಕ್ಕಿಕ್ಕಟ್ಟೆ, ಅಲೆವೂರು, ಮೂಡುಬೆಳ್ಳೆ ಸಂಪೂರ್ಣ ಹಾಳಾಗಿದೆ. ಅದೇ ರೀತಿ ಶಿರ್ವ- ಕಟಪಾಡಿ ರಸ್ತೆಯೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಜನ ನಮಗೆ ಬೈಯುತ್ತಿದ್ದಾರೆ. ಆದುದರಿಂದ ಗುತ್ತಿಗೆದಾರ ರಿಗೆ ತಿಳಿಸಿ ನಾಳೆ ಯಿಂದಲೇ ಕಾಮಗಾರಿ ಪ್ರಾರಂಭಿಸಿ ಎಂದು ಶಾಸಕರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಈಗಾಗಲೇ ಗುತ್ತಿಗೆದಾರರಿಗೆ ಸೂಚನೆ ನೀಡಿ, ಹೊಂಡಗುಂಡಿ ಬಿದ್ದಿರುವ ರಸ್ತೆ ಗಳನ್ನು ಕೂಡಲೇ ದುರಸ್ತಿ ಮಾಡುವಂತೆ ತಿಳಿಸಲಾಗಿದೆ. ಕೆಲವು ಕಾಮಗಾರಿಯನ್ನು ಪ್ರಾಕೃತಿಕ ವಿಕೋಪ ನಿಧಿಯಿಂದ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News