ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ಜನರಿಗೆ ತಪ್ಪದ ಗೋಳು: ರಸ್ತೆ ಇಲ್ಲದೆ ಪರದಾಟ

Update: 2023-08-11 06:15 GMT

ಶಿವಮೊಗ್ಗ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಇಲ್ಲದೇ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.ರಸ್ತೆ ಸಂಪರ್ಕವಿಲ್ಲದೆ ಜನರು ಪರದಾಡುವಂತಾಗಿದೆ.

ಮಲೆನಾಡಿನಲ್ಲಿ ಅಲ್ಪ ಪ್ರಮಾಣದ ಮಳೆಗೆ ಮಜಿರೆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯ ಸಮಸ್ಯೆಗಳು ಅನಾವರಣಗೊಂಡಿವೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದಯಪುರ, ಕಿಕ್ಕೇರಿ, ಅಮ್ತಿ, ಬಚ್ಚಿನಕೂಡುಗೆ ಮತ್ತು ಸುರಳಿ ಗ್ರಾಮದ ಜನರ ಗೋಳು ಹೇಳತೀರದಾಗಿದೆ.

ಹಾಲುಮಹಿಷಿ ಗ್ರಾಮದಿಂದ ಮಜಿರೆ ಗ್ರಾಮಗಳಿಗೆ ಹೋಗುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಹಾಳಾದ ರಸ್ತೆಯಲ್ಲಿ ಸಂಚಾರ ಸಾಧ್ಯವಾಗದೇ ಶಾಲಾ ಮಕ್ಕಳು- ಜನರ ಪರದಾಡುವಂತಾಗಿದೆ. ಹಾಳಾದ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಮಜಿರೆ ಗ್ರಾಮಸ್ಥರು ಸಂಚಾರ ನಡೆಸಬೇಕಾಗಿದೆ.

ಈ ಗ್ರಾಮಗಳಲ್ಲಿ ಯಾರಿಗಾದ್ರೂ ಆರೋಗ್ಯ ಹದಗೆಟ್ಟರೇ ಜೋಲಿ ಕಟ್ಟಿ ಹೊರಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಬೈಕ್, ಕಾರು ಇರಲಿ, ನಡೆದು ಹೋಗಲು ಆಗದ ದುಸ್ಥಿತಿಯಲ್ಲಿವೆ ಇಲ್ಲಿನ ರಸ್ತೆಗಳು. ಕಳೆದ 20 ವರ್ಷದಿಂದ 4 ಕಿ.ಮೀ ಡಾಂಬರ್ ರಸ್ತೆ ನಿರ್ಮಿಸಲು ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದರೂ ಆಡಳಿತ ವರ್ಗದವರು ಚಿತ್ತ ಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆರಗ ವಿರುದ್ದ ಗರಂ:

ಜ್ಞಾನೇಂದ್ರ ಅವರು ಎರಡೆರಡು ಬಾರಿ ಎಂಎಲ್ಎ ಆದ್ರೂ ಈ ಗ್ರಾಮಗಳತ್ತ ಗಮನಹರಿಸಿಲ್ಲ.2013 ರಿಂದಲೂ ಮಜಿರೆ ಗ್ರಾಮಗಳ ಬೂತಿನಲ್ಲಿ ಬಿಜೆಪಿಗೆ ಮುನ್ನಡೆ ಕೊಟ್ಟಿದ್ದೇವೆ.ಆದರೂ ಕೂಡ ಯಾವುದೇ ರೀತಿಯ ಸೌಕರ್ಯ ಕಲ್ಪಿಸದೇ ಕುಗ್ರಾಮವಾಗಿಯೇ ಇಟ್ಟಿದ್ದಾರೆ ಎಂದು ಮಜಿರೆ ಗ್ರಾಮಗಳ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೀಘ್ರದಲ್ಲೇ ರಸ್ತೆ ನಿರ್ಮಿಸದಿದ್ದರೇ, ಹೋರಾಟ ಮಾಡುವುದಾಗಿ ಗ್ರಾಮಸ್ಥರ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News