ಶಿವಮೊಗ್ಗದ ಫ್ರೀಡಂ ಪಾರ್ಕ್ ಗೆ ʼಅಲ್ಲಮಪ್ರಭುʼ ಹೆಸರು: ಸಂಪುಟ ತೀರ್ಮಾನಕ್ಕೆ ಸಚಿವ ಮಧು ಬಂಗಾರಪ್ಪ ಸಂತಸ

Update: 2024-01-18 17:46 GMT

ಬೆಂಗಳೂರು: ವಚನ ಸಾಹಿತ್ಯದ ಮೂಲಕ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾರಿದ ಶರಣ ಅಲ್ಲಮಪ್ರಭು ಅವರ ಹೆಸರನ್ನು ಶಿವಮೊಗ್ಗದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕಿಗೆ ನಾಮಕಾರಣ ಮಾಡಲು ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

"ಶಿವಮೊಗ್ಗದ 46.32 ಎಕರೆ ವಿಸ್ತೀರ್ಣದ ಆವರಣದ ಮೈದಾನಕ್ಕೆ ಅಲ್ಲಮಪ್ರಭು ಹೆಸರು ನಾಮಕರಣ ಮಾಡುವ ಮೂಲಕ ಜಿಲ್ಲೆಯ ಜನತೆಯ ದಶಕಗಳ ಕನಸನ್ನು ಕಾಂಗ್ರೆಸ್ ನೇತೃತ್ವದ ಸರಕಾರ ನನಸು ಮಾಡಿದೆ" ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

"12ನೇ ಶತಮಾನದಲ್ಲಿಅನುಭವ ಮಂಟಪದ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊದಲಿಗೆ ಈ ನೆಲದಲ್ಲಿ ಸ್ಥಾಪಿಸಿದ ಅಲ್ಲಮಪ್ರಭು ಅವರ ಹೆಸರನ್ನು ಶಿವಮೊಗ್ಗದ ಫ್ರೀಡಂ ಪಾರ್ಕ್​​ಗೆ ಇಡಬೇಕು ಎಂಬುದು ಜನತೆಯ ಒತ್ತಾಸೆಯಾಗಿತ್ತು. ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸಿರುವುದು ಕೊಟ್ಟ ಮಾತಿನಂತೆ ನಮ್ಮ ಸರಕಾರ ನಡೆದುಕೊಳ್ಳುತ್ತದೆ ಎಂಬುದಕ್ಕೆ ಇದು ನಿದರ್ಶನ," ಎಂದು ಬಣ್ಣಿಸಿದ್ದಾರೆ.

"12ನೇ ಶತಮಾನದ ಒಬ್ಬ ಪ್ರಸಿದ್ಧ ಕವಿ, ತತ್ತ್ವ ಜ್ಞಾನಿ ಅಲ್ಲಮಪ್ರಭುಗಳು ಶಿಕಾರಿಪುರದ ಬಳ್ಳಿಗಾವೆಯವರು. ಅವರು ನಮ್ಮ ಶಿವಮೊಗ್ಗ ಜಿಲ್ಲೆಯವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಹೀಗಾಗಿ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಅವರ ಹೆಸರಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ವಾರಿಗೆ ಮನವಿ ಮಾಡಲಾಗಿತ್ತು.ಇದಕ್ಕಾಗಿ ಇಡೀ ಜಿಲ್ಲೆಯ ಜ‌ನರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

ಸಮ ಸಮಾಜದ ಕಲ್ಪನೆಯ ಜತೆಗೆ ಮಹಿಳೆಯರಿಗೆ ಸಮಾನ ಗೌರವ ಸ್ಥಾನ ಮಾಡಲು ನೀಡಲು ಹೋರಾಟ ನಡೆಸಿದ, ಜಾತೀಯತೆಯ ನಿರ್ಮೂಲನೆಗೆ 12ನೇ ಶತಮಾನದಲ್ಲೇ ಕ್ರಾಂತಿ ಮಾಡಿದ ಮತ್ತು ತಮ್ಮ ವಚನಗಳ ಮೂಲಕ ಜಗತ್ತಿನ ಕಣ್ಣು ತೆರೆಸಿದ ಅಲ್ಲಮಪ್ರಭು ಅವರ ಆದರ್ಶಗಳು ಮುಂದಿನ ಯುವಪೀಳಿಗೆಗೆ ಮಾದರಿಯಾಗಬೇಕು. ಸರಕಾರದ ನಿರ್ಧಾರ ಅತ್ಯಂತ ಸಮಯೋಚಿತವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News