ಪಕ್ಷಕ್ಕೆ ವಾಪಸ್ಸಾಗುವಂತೆ ಬಿಜೆಪಿಯಿಂದ ಆಹ್ವಾನ ಬಂದಿದೆ : ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಪಕ್ಷಕ್ಕೆ ವಾಪಸ್ಸಾಗುವಂತೆ ಬಿಜೆಪಿಯಿಂದ ಆಹ್ವಾನ ಬಂದಿದ್ದು, ಈ ಬಗ್ಗೆ ನಾನಿನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಲೋಕಸಭಾ ಚುನಾವಣೆ ಬಳಿಕ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಈ ಬಗ್ಗೆ ಮಾತುಕತೆ ನಡೆದ ಬಳಿಕ ತೀರ್ಮಾನ ಮಾಡುತ್ತೇವೆ" ಎಂದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ರಾಷ್ಟ್ರಭಕ್ತ ಬಳಗದ ಮಹಾಲಿಂಗ ಶಾಸ್ತ್ರಿಗಳು ಗೆಲುವು ಸಾಧಿಸಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆ ಸೇರಿದಂತೆ ಆಯಾ ಚುನಾವಣೆ ಬಂದಾಗ ರಾಷ್ಟ್ರ ಭಕ್ತರ ಬಳಗ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಸಿಎಂ-ಡಿಸಿಎಂ ಬದಲಾವಣೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, "ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಎಷ್ಟರಮಟ್ಟಿಗೆ ಜಾತಿವಾದಿಗಳು ಎಂಬುವುದು ಬಹಿರಂಗವಾಗಿದೆ. ಮಠಾಧಿಪತಿಗಳಿಗೆ ದೇವರ ಸ್ಥಾನ ಕೊಟ್ಟಿದ್ದೇವೆ. ಆದರೆ, ಕಾಂಗ್ರೆಸ್ಸಿಗರು ದೇವರ ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ" ಎಂದು ಟೀಕಿಸಿದರು.
ʼಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ, ಬಿಜೆಪಿ ಸೇರಿದಂತೆ ಯಾವ ಪಕ್ಷ ಇದರಲ್ಲಿ ತಲೆ ಹಾಕಲು ಬರುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಏನು ಬೇಕಾದರೂ ಮಾಡಿಕೊಳ್ಳಿ. ಸಂವಿಧಾನದಲ್ಲಿ ಒಂದೇ ಸಿಎಂ ಸ್ಥಾನಕ್ಕೆ ಅವಕಾಶವಿದೆ. ಮುಖ್ಯಮಂತ್ರಿ ಸ್ಥಾನದ ನಂತರ ಎಷ್ಟು ಉಪ ಮುಖ್ಯಮಂತ್ರಿ ಬೇಕಾದರೂ ಮಾಡಿಕೊಳ್ಳಲಿʼ ಎಂದು ಹೇಳಿದರು.