ಚೆಕ್ ಬೌನ್ಸ್ ಪ್ರಕರಣ| ನನ್ನ ಖಾಸಗಿ ವಿಷಯ ಮುಂದಿಟ್ಟುಕೊಂಡು ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ: ಸಚಿವ ಮಧುಬಂಗಾರಪ್ಪ
ಶಿವಮೊಗ್ಗ: ಚೆಕ್ ಬೌನ್ಸ್ ಪ್ರಕರಣದ ತೀರ್ಪಿನ ಹಿನ್ನಲೆಯಲ್ಲಿ ತಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರ ಮೊದಲು ಅವರದ್ದೇ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಕ್ಕೆ ಉತ್ತರಿಸಲಿ ಎಂದು ಸಚಿವ ಮಧುಬಂಗಾರಪ್ಪ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕ ಯತ್ನಾಳ್ ಕೋರೊನಾ ಕಾಲದಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದ್ದಾರೆ. 45 ರೂ ಮಾಸ್ಕ್‌ಗೆ 450 ರೂ ಬಿಲ್ ಮಾಡಿದ್ದಾರೆ. ಕೋಟ್ಯಾಂತರ ರೂ. ಭ್ರಷ್ಟಾಚಾರ ಆಗಿದೆ. ಅವರು ಯಾರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂಬುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಉತ್ತರಿಸಲಿ ಎಂದು ಹೇಳಿದರು.
ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್, ಎಂ.ಎಲ್ ಸಿ ರವಿಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಡಿಸಿಎಂ ಆಗಿದ್ದ ಅಶೋಕ್ ಅವರ ಮೇಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಅದನ್ನು ಮುಂದಿನ ದಿನಗಳಲ್ಲಿ ತೆಗೆಯುತ್ತೇನೆ ಎಂದರು.
ಎಂಎಲ್ ಸಿ ರವಿಕುಮಾರ್ ಜೀವನದಲ್ಲಿ ಒಂದು ಗ್ರಾಮಪಂಚಾಯಿತಿ ಚುನಾವಣೆಯನ್ನು ಎದುರಿಸಲಿಲ್ಲ. ಕೇವಲ ಮಾತನಾಡಲು ಬಿಜೆಪಿ ಅವರನ್ನಿಟ್ಟುಕೊಂಡಿದೆ. ನಳೀನ್ ಕುಮಾರ್ ಕಟೀಲ್ ಕರಾವಳಿಯಲ್ಲಿ ಸಾವಿನ ಮೇಲೆ ರಾಜಕಾರಣ ಮಾಡಿಕೊಂಡು ಬರುತ್ತಿರುವ ವ್ಯಕ್ತಿ ಎಂದು ಟೀಕಿಸಿದರು.
ಚೆಕ್ ಬೌನ್ಸ್ ಪ್ರಕರಣ, ಅದು ಖಾಸಗಿ ವಿಷಯವಾಗಿದೆ
ಚೆಕ್ ಬೌನ್ಸ್ ಪ್ರಕರಣ ವ್ಯವಹಾರಿಕವಾಗಿದ್ದು ಅದು ಖಾಸಗಿ ವಿಷಯವಾಗಿದೆ. ನನ್ನ ಖಾಸಗಿ ವಿಷಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ನೀಚತನ ಬಿಜೆಪಿ ಮಾಡುತ್ತಿದೆ. ಮಾಧ್ಯಮಗಳು ಇಂತಹ ವಿಷಯಗಳಲ್ಲಿ ನನ್ನ ಸ್ಪಷ್ಟಿಕರಣ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದರು.
ಐದು ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದೆ ಎಂದು ಬಿಂಬಿಸುತ್ತಿದ್ದಾರೆ. ಈ ಸೌಲಭ್ಯಗಳಿಂದ ಜನರ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ. ಬಿಜೆಪಿಯವರೂ ಸೇರಿದಂತೆ ಎಲ್ಲರೂ ಯೋಜನೆಯ ಲಾಭ ಪಡೆಯಬೇಕೆಂಬುದು ನಮ್ಮ ಆಶಯ. ಆದರೆ ಟೀಕೆ ಮಾಡುವವರು ತಮ್ಮ ಕಾರ್ಯಕರ್ತರಿಗೆ ಯೋಜನೆ ಲಾಭ ಪಡೆಯಬೇಡಿ ಎಂದು ಹೇಳುವ ಧೈರ್ಯವಿದೆಯೇ ಎಂದು ಕೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳಲ್ಲಿ ಮಕ್ಕಳ ಕೈಲಿ ಶೌಚಾಲಯ ಸ್ವಚ್ಛಗೊಳಿಸುವುದು ಸಹನೀಯವಲ್ಲ. ಇದು ಬಿಜೆಪಿಯವರ ಪಾಪಕೃತ್ಯ. ನಾನು ಸರಿಪಡಿಸುತ್ತೇನೆ. ಮುಂದಿನ ದಿನಗಳಲ್ಲಿ ಇಂತಹದ್ದನ್ನು ಮುಂದುವರೆಯಲು ಬಿಡುವುದಿಲ್ಲ ಎಂದು ಹೇಳಿದರು.
ಯುವನಿಧಿ ಯೋಜನೆಯಡಿ ಹಣ ಸಂದಾಯ ಮಾಡುವ ಕಾರ್ಯಕ್ರಮ ಜ. 12 ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಅದರ ಪೂರ್ವ ತಯಾರಿ ಕುರಿತು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲರೊಂದಿಗೆ ಜ.3ರಂದು ಸಭೆ ನಡೆಸಲಾಗುತ್ತಿದೆ. ಯುವನಿಧಿಗೆ ಈವರೆಗೂ 20 ಸಾವಿರ ಮಂದಿ ನೊಂದಣಿಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ನೊಂದಣಿಯಾಗುವ ಮೂಲಕ ಸರಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್ ಸುಂದರೇಶ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಮುಖಂಡರಾದ ಜಿ,.ಡಿ ಮಂಜುನಾಥ್, ಕಲಗೋಡು ರತ್ನಾಕರ್,ಆರ್.ಪ್ರಸನ್ನಕುಮಾರ್,ಎನ್.ರಮೇಶ್,ಎಸ್ಪಿ ದಿನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.