ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ನಿಗಮದ ಚಂದ್ರಶೇಖರ್‌ ಕುಟುಂಬಕ್ಕೆ ಪರಿಹಾರ ಚೆಕ್‌ ವಿತರಿಸಿದ ಸಿಎಂ

Update: 2024-09-24 08:49 GMT

ಶಿವಮೊಗ್ಗ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ವಾಲ್ಮೀಕಿ ನಿಗಮದ ಚಂದ್ರಶೇಖರ್‌ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಗಳವಾರ ಬೆಂಗಳೂರಿನ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ 25 ಲಕ್ಷ ರೂಪಾಯಿಯ ಪರಿಹಾರ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಂದ್ರಶೇಖರ್‌ ಆತ್ಮಹತ್ಯೆ ದುರದೃಷ್ಟದ ಘಟನೆ. ಸರ್ಕಾರ ಅವರ ಕುಟುಂಬದ ನೋವಿಗೆ ಸ್ಪಂದಿಸಿದೆ ಮತ್ತು ಯಾವತ್ತೂ ಜತೆಗಿರಲಿದೆ ಎಂದು ಹೇಳಿದರು.

ಚಂದ್ರಶೇಖರ್ ಪತ್ನಿ, ಪುತ್ರರು ಪರಿಹಾರದ ಚೆಕ್‌ ಪಡೆದು ಸಿಎಂ ಆಶೀರ್ವಾದ ಪಡೆದರು. ಈ ಸಂದರ್ಭ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಶಾಸಕ ಎಸ್‌. ಎನ್. ಚನ್ನಬಸಪ್ಪ, ಭೋವಿ ಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಎಸ್‌. ರವಿಕುಮಾರ್‌, ಚಂದ್ರಶೇಖರ್ ಕುಟುಂಬದ ಬಂಧು ಭೂಪಾಲ್‌ ಮತ್ತಿರರು ಇದ್ದರು.

ಚಂದ್ರಶೇಖರ್ ಕುಟುಂಬದ ಜತೆಗೆ ನಿಲ್ಲುವೆ 

ಚಂದ್ರಶೇಖರ್ ಕುಟುಂಬಕ್ಕೆ ಸಾಂತ್ವನ ಹೇಳಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಯಾವುದೇ ಮನೆಯಲ್ಲಿ ಸಾವಾಗಬಾರದು. ಆದ ದುರ್ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯ. ಸರ್ಕಾರ ನಿಮ್ಮ ಕುಟುಂಬಕ್ಕೆ ನೀಡಿದ ಭರವಸೆಯಂತೆ ನಡೆದುಕೊಂಡಿದೆ. ಸಾಂತ್ವನ ಹೇಳಲು ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಹಾರ ಕೊಡಿಸುವಂತೆ ಭರವಸೆ ನೀಡಿದ್ದೆ. ಅದರಂತೆ ಮುಖ್ಯಮಂತ್ರಿಗಳು ಸಮ್ಮುಖದಲ್ಲಿ ಪರಿಹಾರ ನೀಡಲಾಗಿದೆ. ಸರ್ಕಾರ ಕೊಟ್ಟ ಹಣ ಅಪವ್ಯಯವಾಗದಂತೆ ನೋಡಿಕೊಳ್ಳಿ. ಮಕ್ಕಳ ಭವಿಷ್ಯಕ್ಕೆ ಒಂದು ಮಾರ್ಗ ತೋರಿಸಿ ಎಂದು ಸಲಹೆ ನೀಡಿದರು.

 ಚಂದ್ರಶೇಖರ್ ಕುಟುಂಬಕ್ಕೆ ಪರಿಹಾರಿ ಕೊಡುವ ವಿಚಾರದಲ್ಲಿ ಸರ್ಕಾರ ತುರ್ತು ಸ್ಪಂದಿಸಿದೆ. ಮುಖ್ಯಮಂತ್ರಿಗಳು ಅವರಿಗೆ ಮನವಿ ಮಾಡಿದ ತಕ್ಷಣವೇ ಅವರ ಆದೇಶದಂತೆ ಅಧಿಕಾರಿಗಳು ಶೀಘ್ರ ಕೆಲಸ ಮಾಡಿಕೊಟ್ಟಿದ್ದಾರೆ. ಸಾವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಮೃತರ ಕುಟುಂಬಕ್ಕೆ ನೆರವಾದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ.

-ಎಸ್‌. ಎನ್ ಚನ್ನಬಸಪ್ಪ, ಶಾಸಕ, ಶಿವಮೊಗ್ಗ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News