ಕಾಂಗ್ರೆಸ್ ಸರಕಾರ ಇರುವವರೆಗೂ ಐದು ʼಗ್ಯಾರಂಟಿʼ ಯೋಜನೆಗಳು ಮುಂದುವರೆಯಲಿದೆ : ಡಿಸಿಎಂ ಡಿ.ಕೆ ಶಿವಕುಮಾರ್

Update: 2024-02-24 11:47 GMT

ಶಿವಮೊಗ್ಗ: "ಕಾಂಗ್ರೆಸ್ ಸರಕಾರ ಇರುವವರೆಗೂ ಐದು ʼಗ್ಯಾರಂಟಿʼ ಯೋಜನೆಗಳು ಮುಂದುವರೆಯಲಿವೆ. ಗ್ಯಾರಂಟಿಗಳನ್ನು ಜಾತಿ ಮೇಲೆ ಕೊಟ್ಟಿಲ್ಲ. ಕಾಂಗ್ರೆಸ್ ಸರಕಾರ ಎಲ್ಲಾ ವರ್ಗದ ಬಗ್ಗೆಯೂ ಚಿಂತನೆ ಮಾಡುತ್ತದೆ" ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಅಲ್ಲಮ್ಮ ಪ್ರಭು ಆವರಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

"ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಏನೇ ಟೀಕೆ ಮಾಡಬಹುದು. ನಮಗೆ ಓಟು ಹಾಕದಿದ್ದರೇ ʼಗ್ಯಾರಂಟಿʼ ನಿಲ್ಲಬಹುದು ಎಂದು ಹೇಳಬಹುದು. ಆದರೆ ಕಾಂಗ್ರೆಸ್ ಸರಕಾರ ಗಟ್ಟಿಯಾಗಿದೆ. ಈ ಐದು ವರ್ಷವಲ್ಲ, ಇನ್ನೊಂದು ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ಜನರ ಭಾವನೆ, ಧರ್ಮದ ಮೇಲೆ ರಾಜಕಾಣರಣ ಮಾಡುತ್ತಾರೆ

ಬಿಜೆಪಿಯವರು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ. ದೇವಸ್ಥಾನ ಯಾರ ಆಸ್ತಿಯಲ್ಲ. ರಾಮಮಂದಿರ ಮೇಲೆ ಬಹಳ ಪ್ರಚಾರ ಮಾಡಲು ಬಿಜೆಪಿ ಮುಂದಾಗಿದೆ. ಅಯೋಧ್ಯೆಯಲ್ಲಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟವರು ರಾಜೀವ್ ಗಾಂಧಿಯವರು. ಬಿಜೆಪಿಯವರು ಜನರ ಭಾವನೆ, ಧರ್ಮದ ಮೇಲೆ ರಾಜಕಾಣರಣ ಮಾಡಿದರೆ ಕಾಂಗ್ರೆಸ್ ಪಕ್ಷ ಬಡವರ ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ ಹಾಗಾಗಿ ರಾಜಕಾರಣದಲ್ಲಿ ಧರ್ಮ ಇರಬಾರದು ಎಂದರು.

ಅರಣ್ಯ ಭೂಮಿ ಹಕ್ಕಿನ ಅರ್ಜಿಯ ಮಾನ್ಯತೆ ಮಿತಿಯನ್ನು 25 ವರ್ಷಕ್ಕೆ ಇಳಿಸಬೇಕು ಎಂದು ನಿರ್ಣಯ ಮಾಡಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶರಾವತಿ ಮುಳುಗಡೆ ಸಂತ್ರಸ್ಥರ ರಕ್ಷಣೆ ಸರಕಾರದ ಕರ್ತವ್ಯ,ಬದ್ದತೆಯೂ ಹೌದು.ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಅವಕಾಶ ನೀಡುವುದಿಲ್ಲ. ಇದು ನಮ್ಮ ಸರಕಾರದ ಜವಾಬ್ದಾರಿ ಎಂದು ಹೇಳಿದರು.

ಬಿಜೆಪಿ ಜನರಿಗೆ ನೀಡಿದ ಕಾರ್ಯಕ್ರಮ ಏನು

"ಬಿಜೆಪಿ ಸ್ನೇಹಿತರಿಗೆ ಕೇಳುವುದಿಷ್ಟೆ ನಿಮಗೆ ನಾಲ್ಕು ವರ್ಷ ಅಧಿಕಾರ ಇತ್ತಲ್ಲ, ನೀವು ಈ ರಾಜ್ಯದ ಜನರಿಗೆ ನೀಡಿದ ಕಾರ್ಯಕ್ರಮ ಏನು ಎಂಬುದನ್ನ ನೀವು ಹೇಳಬೇಕು. ನಾನು ಇಷ್ಟೆಲ್ಲಾ ಯೋಜನೆಗಳನ್ನು ಹೇಳುತ್ತೇನೆ. ಆದರೆ ನಿಮ್ಮ ಒಮ್ಮ ಶಾಸಕ ಆರಗ ಜ್ಞಾನೇಂದ್ರ ಇದು 420 ಗ್ಯಾರಂಟಿ ಎಂದು ಹೇಳುತ್ತಾರೆ. ಆರಗ ಜ್ಞಾನೇಂದ್ರ ನಿನಗೆ ಜ್ಞಾನ ಇದೆಯಾ?, ಅರೆ ಜ್ಞಾನ ಎಂದು ಟೀಕಿಸಿದರು.

ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳು ಜನರ ಹೃದಯ ಗೆದ್ದಿದೆ. ಮುಂದಕ್ಕೆ ಚುನಾವಣೆ ಬರುತ್ತದೆ. ಈ ಕೈಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್ ಸುಂದರೇಶ್,ಕಾಂಗ್ರೆಸ್ ವಕ್ತಾರ ನಿಕೇತರಾಜ್ ಮೌರ್ಯ,ಆಯನೂರು ಮಂಜುನಾಥ್,ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News