ಶಿವಮೊಗ್ಗ | ಬಾಲಕಿಯ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳಿಗೆ 25 ವರ್ಷ ಸಜೆ
ಶಿವಮೊಗ್ಗ, ಅ.6: ಮೂರು ವರ್ಷಗಳ ಹಿಂದೆ ಬಾಲಕಿಯನ್ನು ಅತ್ಯಾಚಾರಗೈದ ನಾಲ್ವರು ಆರೋಪಿಗಳಿಗೆ 25 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಶಿವಮೊಗ್ಗ ಪೊಕ್ಸೋ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ.
ಕೋವಿಡ್ ಸಮಯದಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯ ಆರೈಕೆಗೆ ಬಂದಿದ್ದ ಬಾಲಕಿಯನ್ನು ಆಹಾರ ಕೊಡಿಸುವ ಆಮಿಷವೊಡ್ಡಿ ಕರೆದೊಯ್ದು ಅತ್ಯಾಚಾರ ಎಸಗಲಾಗಿತ್ತು.
ಪ್ರಕರಣದ ಹಿನ್ನಲೆ: 2020ರ ಡಿಸೆಂಬರ್ 6ರಂದು ಘಟನೆ ಸಂಭವಿಸಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಾಲಕಿಯ ತಾಯಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಸಂದರ್ಭ ಕೋವಿಡ್ ಮಾರ್ಗಸೂಚಿ ಪ್ರಕಾರ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಕ್ಯಾಂಟೀನ್ ಬಂದ್ ಆಗಿತ್ತು. ಈ ಹಿನ್ನೆಲೆಯಲ್ಲಿ ತಾಯಿಗೆ ಊಟ ತರಲು ಬಾಲಕಿ ಹೊರಗೆ ತೆರಳಿದ್ದಳು. ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡಿದ್ದ ಆರೋಪಿಗಳು, ಊಟ ಕೊಡಿಸುವುದಾಗಿ ಬಾಲಕಿಯನ್ನು ವಾಹನದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದರು. ಬಳಿಕ ವಾಪಸ್ ಆಸ್ಪತ್ರೆ ಬಳಿ ಕರೆತಂದು ಬಿಟ್ಟಿದ್ದರು. ಅಲ್ಲಿದ್ದವರು ಗಮನಿಸಿ ಆಸ್ಪತ್ರೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರು. ಬಳಿಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಮನೋಜ್, ಪ್ರಜ್ವಲ್, ವಿನಯ್ ಹಾಗೂ ಸಂದೀಪ್ ಎಂಬವರನ್ನು ಬಂಧಿಸಿದ್ದ ಪೊಲೀಸರು ಪೊಕ್ಸೊ ಕಾಯ್ದೆಯಡಿ FIR ದಾಖಲಿಸಿದ್ದರು. ವಿಚಾರಣೆ ನಡೆಸಿದೆ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ದಂಡ ಪಾವತಿಸದಿದ್ದರೆ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ. ನೊಂದ ಬಾಲಕಿಗೆ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಿದೆ.
ಬಾಲಕಿಯ ಪರವಾಗಿ ಸರಕಾರಿ ವಕೀಲ ಹರಿಪ್ರಸಾದ್ ವಾದ ಮಂಡಿಸಿದ್ದರು.