ಅಲ್ಲಮಪ್ರಭುಗಳ ಜನ್ಮಭೂಮಿ ಶಿವಮೊಗ್ಗದ ವಿಕಾಸಕ್ಕೆ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪ

Update: 2024-01-14 16:40 GMT

ಶಿವಮೊಗ್ಗ: ಅನುಭವ ಮಂಟಪದ ಮೊದಲ ಪೀಠಾಧ್ಯಕ್ಷ ಅಲ್ಲಮಪ್ರಭುಗಳ ಜನ್ಮಭೂಮಿಯ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.

ಅವರು ಶಿರಾಳಕೊಪ್ಪ ಬಳಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದ ಪ್ರಸಿದ್ಧ ಶರಣ ಅಲ್ಲಮಪ್ರಭುಗಳು ಅದ್ವಿತೀಯ ಸಾಧಕರು. ಅವರ ಜೀವನ ಸಂದೇಶಗಳು ಇಂದಿನ ಜನರಿಗೆ ತಲುಪಿಸುವ ಸದುದ್ದೇಶದಿಂದ ಹಾಗೂ ನಮ್ಮ ಕೋರಿಕೆಯಂತೆ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್ ಗೆ ಅಲ್ಲಮಪ್ರಭುಗಳ ಹೆಸರನ್ನು ನಾಮಕರಣ ಗೊಳಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ವಿಶೇಷವಾಗಿ ಶಿವಮೊಗ್ಗ ಜಿಲ್ಲೆ 12ನೇ ಶತಮಾನದಲ್ಲಿ ಶರಣರ ನೆಲೆವೀಡಾಗಿಯೇ ಪ್ರಸಿದ್ದವಾಗಿತ್ತು. ಅಂತಹ ಮಹಾತ್ಮರ ಪುಣ್ಯಭೂಮಿಯನ್ನು ಗುರುತಿಸಿ ಅಭಿವೃದ್ಧಿಪಡಿಸದಿರುವುದು ನೋವಿನ ಸಂಗತಿ. ಪ್ರಸ್ತುತ ಆಡಳಿತಾರೂಡ ಸರ್ಕಾರ ಈ ಕ್ಷೇತ್ರದ ವಿಕಾಸಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.

ಈ ಕ್ಷೇತ್ರದ ವಿಕಾಸಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ. ಶರಣರ ಪುಣ್ಯಭೂಮಿಯನ್ನು ಅಭಿವೃದ್ಧಿಪಡಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು ಎಂದರು.

ಇಲ್ಲಿನ ಭೂಮಿಯ ಮಾಲಿಕತ್ವದ ಬಗ್ಗೆ ದಾಖಲಾತಿಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಅಲ್ಲದೇ ಈ ಸಂಬಂಧ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಲಾಗುವುದು. ಈ ಪ್ರದೇಶದ ಅಭಿವೃದ್ಧಿ ನನ್ನ ಕರ್ತವ್ಯ ಎಂದು ಭಾವಿಸಿರುವುದಾಗಿ ತಿಳಿಸಿದ ಅವರು ಈ ಸಂದರ್ಭದಲ್ಲಿ ಎಲ್ಲರ ಸಹಕಾರವನ್ನು ನಿರೀಕ್ಷಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜಗೌಡ, ಗೋಣಿ ಮಾಲತೇಶ ಶ್ರೀಕಾಂತ್, ಕಲಗೋಡು ರತ್ನಾಕರ್, ಹುಲ್ಮಾರ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News