ʼಗ್ಯಾರಂಟಿʼ ಯೋಜನೆಗಳು ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿದೆ : ಸಚಿವ ಮಧು ಬಂಗಾರಪ್ಪ

Update: 2024-02-18 12:05 GMT

ಶಿವಮೊಗ್ಗ: ಮನೆ ಒಡತಿಗೆ 2000 ರೂ.ಗಳ ಸಹಾಯಧನ ನೀಡುವ ಗೃಹಲಕ್ಷ್ಮಿ, ರಾಜ್ಯದ ಪ್ರತಿ ಮನೆ ಮನೆಗೆ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ, ಮುಂತಾದ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ರವಿವಾರ ಶಿಕಾರಿಪುರದ ತಾಲೂಕು ಆಡಳಿತ ಸಭಾಂಗಣದ ಹಿಂಭಾಗದಲ್ಲಿ ಏರ್ಪಡಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದ ಅವರು, ʼಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕಾಂಗ್ರೆಸ್‌ ಸರಕಾರ ನುಡಿದಂತೆ ನಡೆದು ಮುಂದೆ ಸಾಗುತ್ತಿದೆ ಎಂದರು.

ತಂದೆಯವರಾದ ಬಂಗಾರಪ್ಪನವರು ತಮ್ಮ ಅಧಿಕಾರ ಅವಧಿಯಲ್ಲಿ ಆಶ್ರಯ, ಆರಾಧನಾ, ಗ್ರಾಮೀಣ ಕೃಪಾಕದಂತಹ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಮೂರು ದಶಕಗಳ ಹಿಂದೆ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೆ ತರಲಾಗಿತ್ತು.‌ ಅದು ಇಂದು ಕೂಡ ಚಾಲ್ತಿಯಲ್ಲಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳನ್ನು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ದಿ ಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಶಿಕಾರಿಪುರ ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 53708, ಗೃಹಜ್ಯೋತಿ ಯೋಜನೆ ಅಡಿ 5843, ಅನ್ನಭಾಗ್ಯ ಯೋಜನೆಯಲ್ಲಿ 55,947, ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಅಡಿ ಸುಮಾರು 13 ಲಕ್ಷ ಜನ ಪ್ರಯಾಣಿಸಿದ್ದು ಅದಕ್ಕಾಗಿ 5.50 ಕೋಟಿ ರೂಪಾಯಿಗಳ ವೆಚ್ಚವನ್ನು ಸರಕಾರ ಭರಿಸಿದೆ. ಯುವನಿಧಿ ಯೋಜನೆಯಲ್ಲಿ ಶಿಕಾರಿಪುರ ತಾಲೂಕಿನ 600ಕ್ಕೂ ಹೆಚ್ಚು ವಿದ್ಯಾವಂತ ನಿರುದ್ಯೋಗಿ ಯುವಕರು ಹೆಸರು ನೋಂದಾಯಿಸಿದ್ದಾರೆ. ಅಲ್ಲದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ನಾಗರಾಜ್ ಗೌಡ ,ಗೋಣಿ ಮಾಲತೇಶ್, ವೈ.ಹೆಚ್ ನಾಗರಾಜ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News