ಎ.12 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ: ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ: ಹರಿಹರ ಬ್ರಹ್ಮ ಬಂದರೂ ನಾನು ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಎ.12 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಘೋಷಣೆ ಮಾಡಿದರು.
ರಾಷ್ಟ್ರ ಭಕ್ತರ ಬಳಗದ ವತಿಯಿಂದ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ನಡೆದ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎ.12ರಂದು ಕನಿಷ್ಟ 25 ಸಾವಿರ ಜನರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದರು.
ನಾನು ಜೀವನದಲ್ಲಿ ಪಕ್ಷಾಂತರ ಮಾಡಿಲ್ಲ. ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿ ಬಿಜೆಪಿಗೆ ಅನ್ಯಾಯ ಮಾಡಿದ್ದರು. ಪಕ್ಷಕ್ಕೆ ಚಾಕು ಹಾಕಿ ಹೋಗಿದ್ದರು. ಪಕ್ಷ ಕಟ್ಟಿ ಕೇವಲ ಆರು ಕ್ಷೇತ್ರಗಳನ್ನಷ್ಟೇ ಗೆದ್ದಿದ್ದರು. ಅಂದು ನಾವು 46 ಸ್ಥಾನ ಗೆದ್ದಿದ್ದೆವು ಎಂದರು.
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಸೋಲಿನ ಭಯ ಶುರುವಾಗಿದೆ. ದುಡ್ಡು ಜಾತಿಯ ಆಟ ಚುನಾವಣೆಯಲ್ಲಿ ನಡೆಯುವುದಿಲ್ಲ. 60 ಸಾವಿರ ಲೀಡ್ ಕೊಡುತ್ತಿದ್ದ ಶಿಕಾರಿಪುರ ಕ್ಷೇತ್ರ ಈಗ 11 ಸಾವಿರಕ್ಕೆ ಕುಸಿದಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ತಿಣುಕಾಡಿ ಗೆದ್ದರು. ಶಿಕಾರಿಪುರ ಕ್ಷೇತ್ರದಲ್ಲಿ ಅಪ್ಪ ಮಕ್ಕಳದ್ದು ವಿಚಿತ್ರ ರಾಜಕಾರಣ. ಯಡಿಯೂರಪ್ಪ, ಮಕ್ಕಳು ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ ಎಂದು ಶಿಕಾರಿಪುರ ಕ್ಷೇತ್ರದ ಜನರು ನನಗೆ ಕರೆ ಮಾಡಿ ಹೇಳುತ್ತಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಅಸಮಾಧಾನ ಇದೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭೆ ಕ್ಷೇತ್ರಕ್ಕೂ ಭೇಟಿ ನೀಡಿದ್ದೇನೆ. ಈಶ್ವರಪ್ಪ ಅವರಿಗೆ ಯಡಿಯೂರಪ್ಪ ಅನ್ಯಾಯ ಮಾಡಿದ್ದಾರೆ ಅಂತ ಹೇಳುತ್ತಿದ್ದಾರೆ. ಹಿಂದುತ್ವದ ಪರ ಧ್ವನಿ ಎತ್ತುವವರನ್ನು ತುಳಿಯುತ್ತಿದ್ದಾರೆ. ನಾನು 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಬಲಿಗರಿಗೆ ಬೆದರಿಕೆ ಕರೆ:
ಬೈಂದೂರು ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಅಸಮಾಧಾನ ಇದೆ. ಬೈಂದೂರಿನ ಮುಖಂಡರು ನನಗೆ ಬೆಂಬಲ ನೀಡಲಿದ್ದಾರೆ. ಹಿಂದೂಗಳಿಗೆ ಸಂಸದರು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಯಾರು ಕೂಡಾ ಹೆದರಬೇಡಿ. ಈಗ ತಾನೇ ನನಗೆ ದಿಲ್ಲಿಯಿಂದ ಕರೆ ಬಂದಿದೆ. ಸ್ಪರ್ಧೆ ಮಾಡಬೇಡಿ ಅಂತಾ ಹೇಳಿದ್ದಾರೆ. ಯಾರು ಎನ್ನುವುದನ್ನು ನಂತರ ಹೇಳುತ್ತೇನೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.
ಹಿಂದುತ್ವ ಬೆಂಬಲಿರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗಿದೆ. ಪಕ್ಷದಲ್ಲಿ ಅನೇಕ ಸಮಸ್ಯೆಗಳಿವೆ. ಈ ಹಿನ್ನೆಲೆಯಲ್ಲಿ ನಾನು ಚುನಾವಣೆ ಸ್ಪರ್ಧೆ ಮಾಡುತ್ತೇನೆ. ನನ್ನ ಅನೇಕ ಬೆಂಬಲಿಗರಿಗೆ ಬೆದರಿಕೆ ಬರುತ್ತಿವೆ. ಅನೇಕರು ಭಯದಿಂದ ಹೊರಗೆ ಬರುತ್ತಿಲ್ಲ. ಆದರೆ ಅವರೆಲ್ಲರೂ ಕರೆ ಮಾಡಿ ಗೆಲ್ಲಿಸುವ ಭರವಸೆ ನೀಡಿದ್ದಾರೆ ಎಂದರು.
ವಿಜಯೇಂದ್ರಗೆ ಮಂತ್ರಿ ಪಟ್ಟ:
ನಾನು ಪಕ್ಷದ ಶಿಸ್ತಿನ ಸಾಪಾಯಿ ಆಗಿದ್ದು ತಪ್ಪಾ. ಆತ್ಮಹತ್ಯೆ, ಕಮಿಷನ್ ಪ್ರಕರಣದಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿತ್ತು. ಬಳಿಕ ಸಿಎಂ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಸಚಿವ ಸ್ಥಾನದ ಭರವಸೆ ನೀಡಿದ್ದರು. ಆ ದಿನ ವಿಜಯೇಂದ್ರ ಅವರನ್ನು ಮಂತ್ರಿ ಮಾಡಲು ಹೊರಟಿದ್ದರು. ಅದಕ್ಕೆ ಕೇಂದ್ರ ವರಿಷ್ಠರು ಒಪ್ಪಲಿಲ್ಲ ಎಂದರು.
ಸಮಾವೇಶದಲ್ಲಿ ಈಶ್ವರಪ್ಪ ಪುತ್ರ ಕೆ.ಈ ಕಾಂತೇಶ್, ಮಾಜಿ ಮೇಯರ್ ಏಳುಮಲೈ ಬಾನು, ಮಾಜಿ ಉಪಮೇಯರ್ ಗನ್ನಿ ಶಂಕರ್, ಪಾಲಿಕೆ ಮಾಜಿ ಸದಸ್ಯರಾದ ವಿಶ್ವಾಸ್,ಆ.ಮಾ ಪ್ರಕಾಶ್ ಸೇರಿದಂತೆ ಹಲವರಿದ್ದರು