ಕಾನೂನಾತ್ಮಕವಾಗಿ ರಾಷ್ಟ್ರ ಧ್ವಜಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯ: ಮಧು ಬಂಗಾರಪ್ಪ

Update: 2024-01-29 06:58 GMT

ಶಿವಮೊಗ್ಗ: ಕಾನೂನಾತ್ಮಕವಾಗಿ ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯ. ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.

ಮಂಡ್ಯದ ಕೆರಗೋಡಿನಲ್ಲಿ ಕೇಸರಿ ಧ್ವಜ ತೆರವು ವಿವಾದದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಂದರಲ್ಲೂ ರಾಜಕೀಯ ಮಾಡುವುದು ಬಿಜೆಪಿಯ ಅಭ್ಯಾಸವಾಗಿದೆ. ಮನಸ್ಸಿಗೆ ಬಂದಂತೆ ನಡೆದುಕೊಳ್ಳುವುದು ಸರಿಯಲ್ಲ ಎಂದರು.

ಸರಕಾರಕ್ಕೆ ರಾಮನ ಶಾಪ ತಟ್ಟುತ್ತದೆ ಎಂಬ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ,ಯಾವ ರಾಮ, ಯಾರ ರಾಮ, ಎಲ್ಲಿಯ ರಾಮ. ಅವರಿಗೆ ಮಾನ ಮರ್ಯಾದೆ ಇದೆಯೇ? ಅಶೋಕ್ ಡಿಸಿಎಂ ಆಗಿದ್ದವರು. ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು‌ ಎಂದು ಅವರಿಗೆ ಗೊತ್ತಿರಬೇಕು. ರಾಮನ ಹೆಸರಿನಲ್ಲಿ ರಾಜಕೀಯ ಮಾಡಲು ನಾಚಿಕೆ ಆಗಬೇಕು. ನನ್ನ ಪ್ರಕಾರ ಅಶೋಕ್ ಅವರು ಹಿಂದು ವಿರೋಧಿ. ರಾಮನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದರು.

ಅಯೋಧ್ಯೆಗೆ ಬಿಜೆಪಿಯ ಬಹಳಷ್ಟು ಜನ ಇನ್ನೂ ಹೋಗಿಲ್ಲ. ಅಯೋಧ್ಯೆಗೆ ಹೋದವರಲ್ಲ ಪವಿತ್ರರೇ. ಹೋಗದವರು ಬಿಜೆಪಿಗೆ ದ್ರೋಹಿಗಳಾ. ಇವರಿಗೆ ನಾಚಿಕೆ ಆಗುವುದಿಲ್ಲವೇ. ಮಾತು ಎತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಾರೆ. ಅವರಿಗೆ ಬೇರೆ ಕೆಲಸವಿಲ್ಲ, ಪ್ರತಿಭಟನೆ ಮಾಡಲಿ, ಅದು ಅವರ ಹಕ್ಕು ಎಂದು ಹೇಳಿದರು.

ನಾವು ನಮ್ಮ ಗ್ಯಾರಂಟಿ ಮೂಲಕ ಜನರನ್ನು ತಲುಪುತ್ತೇವೆ. ಬಿಜೆಪಿಯವರು ಇಂತಹ ಒಂದು ಯೋಜನೆಯನ್ನು ಜಾರಿಗೊಳಿಸಿದ ಉದಾಹರಣೆ ಇಲ್ಲ ಎಂದರು

ಚಿತ್ರದುರ್ಗದಲ್ಲಿ ನಡೆದ ಅಹಿಂದ ಸಮಾವೇಶದಲ್ಲಿ ಕಾಂತರಾಜ ವರದಿ ಸ್ವೀಕಾರ ಕುರಿತ ಚರ್ಚೆಯಾಗಿದೆ. ಮುಖ್ಯಮಂತ್ರಿಯ ನಿರ್ಧಾರವೇ ನಮ್ಮ ನಿರ್ಧಾರ. ಈ ವಿಷಯದಲ್ಲಿ ಬೇರೆ ನಿಲುವೇ ಇಲ್ಲ ಎಂದರು.

ಸಿಎಂ ಪದ ಬಳಕೆ ಬಗ್ಗೆ ನಾನೇ ಕ್ಷಮೆ ಕೇಳುತ್ತೇನೆ

ಏಕವಚನದಲ್ಲಿ ಸಂಬೋಧಿಸಿದ ವಿಷಯವಾಗಿ ಪ್ರತಿಕ್ರಿಯಿಸಿ, ಸಿಎಂ ಸ್ವಾಭಾವಿಕವಾಗಿ ಈ ಪದ ಬಳಸಿದ್ದಾರೆ. ಹಿಂದೆ ನಮ್ಮ ಗ್ಯಾರೆಂಟಿಗಳ ಬಗ್ಗೆ ಪುಕ್ಸಟ್ಟೆ ಎಂಬ ಪದ ಬಳಸಿದ್ದರು. ಹಾಗೆಂದ ಮಾತ್ರಕ್ಕೆ ಅಗೌರವ ಎಂದು ಅರ್ಥ ಕಲ್ಪಿಸುವುದು ಬೇಡ. ನಾವು ಸಿಎಂ ಅವರ ಕಾಳಜಿಯನ್ನು ಗಮನಿಸಬೇಕು. ಹಾಗೇ ನೋಡಿದರೆ ಬಿಜೆಪಿಯವರೇ ರಾಷ್ಟ್ರಪತಿಯನ್ನು ಅವಮಾನಿಸಿದ್ದಾರೆ. ಅಯೋಧ್ಯೆಗೆ ರಾಷ್ಟ್ರಪತಿಯನ್ನೇ ಕರೆಯಲಿಲ್ಲ. ಸಿಎಂ ಪದ ಬಳಕೆ ಬಗ್ಗೆ ನಾನೇ ಕ್ಷಮೆ ಕೇಳುತ್ತೇನೆ ಎಂದರು.

ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಹಿರಿಯರಾಗಿ ಆಶೀರ್ವಾದ ಮಾಡುವುದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ಹಿಂದೆ ಯಡಿಯೂರಪ್ಪ ಸಹ ಎಂಬಿ ಪಾಟೀಲ್ ಅವರಿಗೆ ಆಶೀರ್ವಾದ ಮಾಡಿದ್ದರು. ಎಂ.ಬಿ ಪಾಟೀಲ್ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದರು. ದಿವಂಗತ ಎಂ.ಪಿ. ಪ್ರಕಾಶ್ ಸಹ ಹಿಂದೆ ನನ್ನನ್ನು ಅದೇ ರೀತಿ ಆಶೀರ್ವದಿಸಿದ್ದರು. ಹಾಗೆಂದ ಮಾತ್ರಕ್ಕೆ ನಾವು ಆ ಪಕ್ಷಕ್ಕೆ ಸೇರಿದ್ದೇವೆ ಎಂದು ಅರ್ಥ ಅಲ್ಲ. ಶಿವಮೊಗ್ಗ ರಾಜಕಾರಣಕ್ಕೂ ಅದಕ್ಕೂ ಸಂಬಂಧವಿಲ್ಲ. ಶಿವಮೊಗ್ಗ ಎಂಪಿ ಟಿಕೆಟ್ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News