ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ತಾಳಗುಪ್ಪದಲ್ಲಿ ಜನಸ್ಪಂದನ ಸಭೆ

Update: 2024-10-03 16:36 GMT

ಶಿವಮೊಗ್ಗ: ಅರಣ್ಯ ಒತ್ತುವರಿ ತೆರವಿಗೆ ವಿರೋಧ, ಗ್ರಾಮೀಣ ರಸ್ತೆ ಸಂಪರ್ಕ, ಗೃಹಲಕ್ಷ್ಮಿ ಸೌಲಭ್ಯ, ವಿದ್ಯುತ್ ಸಂಪರ್ಕ, ನಿವೇಶನ ಹಕ್ಕುಪತ್ರ, ಇ-ಸ್ವತ್ತು ಕೊಡಿಸಿ, ಶಾಲಾ ಕಾಪೌಂಡ್, ನೂತನ ಕಟ್ಟಡ ಮುಂತಾದ 120ಕ್ಕೂ ಹೆಚ್ಚಿನ ಅಹವಾಲುಗಳು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಲ್ಲಿಕೆಯಾದವು.

ಸಾಗರ ಸಮೀಪದ ತಾಳಗುಪ್ಪದಲ್ಲಿ ಏರ್ಪಡಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪನವರು,ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು ನಗರ ಪ್ರದೇಶದ ಸಾರ್ವಜನಿಕರಿಗೆ ಅಧಿಕಾರಿಗಳು ಸಕಾಲದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸಮಾನ ದೃಷ್ಟಿಕೋನದಿಂದ ಗಮನಿಸುವುದಾಗಿ ತಿಳಿಸಿದ ಅವರು ತಾಳಗುಪ್ಪ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳ ಜನರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದರು. ಜನರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ಬದ್ದವಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಜನರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಅನುಸ್ತಾನಗೊಳಿಸುತ್ತಿದೆ ಎಂದರು.

ಜನಸಾಮಾನ್ಯರಿಗೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯ ನೀಡುವ ಸಂದರ್ಭಗಳಿದ್ದಲ್ಲಿ ಜನಪ್ರತಿನಿಧಿಗಳ ಸೂಚನೆಗಾಗಿ ಕಾಯದೆ ಸೌಲಭ್ಯ ಗಳನ್ನು ವಿತರಿಸುವಂತೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಇನ್ನಷ್ಟು ವೇಗ ಹೆಚ್ಚಿಸುವಂತೆ ಅವರು ಸೂಚಿಸಿದರು.

94ಸಿ ಯೋಜನೆ ಗ್ರಾಮೀಣ ಬಡ ಜನರಿಗೆ ಹಕ್ಕುಪತ್ರ ನೀಡಿ ಅವರ ನೆಮ್ಮದಿಯ ಬದುಕಿಗೆ ಆಸರೆಯಾಗುವ ಸರ್ಕಾರದ ಮಹತ್ವಕಾoಕ್ಷಿ ಯೋಜನೆಯಾಗಿದ್ದು, ಈ ಯೋಜನೆಯ ಅನುಷ್ಟಾನಕ್ಕಾಗಿ ಅಂದು ಹಗಲಿರುಳು ಶ್ರಮಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಅಭಿನಂದನಾರ್ಹರು ಎಂದರು.

ಈ ಜನಸ್ಪಂದನ ಕಾರ್ಯಕ್ರಮದಿಂದಾಗಿ ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗೆ ಪರಿಹಾರ ನೀಡುತ್ತಿದೆ. ಜನಸ್ಪಂದನದಲ್ಲಿ ಸ್ವೀಕರಿಸಲಾಗುವ ಅರ್ಜಿಗಳನ್ನು ವಿಲೇವಾರಿ ಹಾಗೂ ಪ್ರತಿ ಹಂತದ ಬೆಳವಣಿಗೆಯನ್ನು ಮಾನ್ಯ ಮುಖ್ಯ ಮಂತ್ರಿಗಳ ಕಚೇರಿಯಿಂದ ಗಮನಿಸಲಾಗುತ್ತಿದೆ ಎಂದ ಅವರು ವಯಸ್ಕರು, ವಿಕಲಾoಗರು, ಮಹಿಳೆಯರು ನಂತರ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದರು.

ಇದೆ ಸಂದರ್ಭದಲ್ಲಿ ಸಾಮಾಜಿಕ ಭದ್ರಾತಾ ಯೋಜನೆಯಡಿಯಲ್ಲಿ ಸೌಲಭ್ಯಕ್ಕೆ ಅರ್ಹರಾದ ಪಲಾನುಭವಿಗಳಿಗೆ, ನಿವೇಶನ ರಹಿತರಿಗೆ ಹಕ್ಕುಪತ್ರಗಳನ್ನು ಹಾಗೂ ಅತಿವೃಷ್ಟಿಯಿಂದ ಮನೆ ಹಾನಿಗೊಳಗಾದ ಸಂತ್ರಸ್ತರಿಗೆ ಚೆಕ್ಕನ್ನು ಸಚಿವರು ವಿತರಿಸಿದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಯತೀಶ್ ,ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತ, ತಹಶೀಲ್ದಾರ್ ಚಂದ್ರಶೇಖರನಾಯ್ಕ್, ಕಾರ್ಯ ನಿರ್ವಾಹಕ ಅಧಿಕಾರಿ ಗುರುಕೃಷ್ಣ ಶೆಣೈ, ಪಂಚಾಯಿತಿ ಅಧ್ಯಕ್ಷರಾದ ಶಾಂತಕುಮಾರ್, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


 






 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News