ತಂಗಿ ಸೋಲಿಗೆ ಕುಮಾರ್ ಬಂಗಾರಪ್ಪ ವ್ಯಂಗ್ಯ; ಸಹೋದರನ ವಿರುದ್ದ ಟೀಕೆ
ಶಿವಮೊಗ್ಗ: ನನ್ನ ತಂಗಿಯ ಗಂಡ, ನಟ ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ. ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು ಎಂದು ಕುಮಾರ್ ಬಂಗಾರಪ್ಪ ಸಹೋದರಿಯ ಸೋಲಿಗೆ ಅಪಹಾಸ್ಯ ಮಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವಕುಮಾರ್ ವಿರುದ್ಧ ಬಿ.ವೈ ರಾಘವೇಂದ್ರ ಗೆಲುವು ಸಾಧಿಸಿದಕ್ಕಾಗಿ ಅವರನ್ನು ಅಭಿನಂದಿಸುತ್ತಾ ಪೇಸ್ ಬುಕ್ ಪೇಜ್ ನಲ್ಲಿ ಕುಮಾರ್ ಬಂಗಾರಪ್ಪ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ತಮ್ಮ ಸಹೋದರ, ಸಚಿವ ಮಧು ಬಂಗಾರಪ್ಪ, ಸಹೋದರಿ ಗೀತಾ ಹಾಗೂ ಭಾವ ಶಿವರಾಜ್ ಕುಮಾರ್ ವಿರುದ್ದ ಹರಿಹಾಯ್ದಿದ್ದಾರೆ.
"ತಮ್ಮ ಮಧು ಬಂಗಾರಪ್ಪ ಮಾಧ್ಯಮದವರಿಗೂ ಶಾಪ ಹಾಕಿದ್ದ. ಈ ಕಾರಣದಿಂದಲೇ ತಾನೇ ಶಾಪಗ್ರಸ್ತನಾಗಿದ್ದಾನೆ" ಎಂದೂ ಕುಮರ್ ಬಂಗಾರಪ್ಪ ಟೀಕಿಸಿದ್ದಾರೆ. ಮುಂದುವರಿದು.. ಇನ್ನು ನನ್ನ ತಮ್ಮ ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಇಲ್ಲ ಸಿಎಂ ಅವನನ್ನು ಸಂಪುಟ ದಿಂದ ವಜಾ ಮಾಡಬೇಕು. ಕನ್ನಡಕ್ಕೆ, ಕನ್ನಡನಾಡಿಗೆ ಅವಮಾನಪಡಿಸಿದಾತ, ಟ್ರೊಲ್ ಮಾಡಿದವರಿಗೆ, ಮಾಧ್ಯಮದವರಿಗೆ ಶಾಪ ಹಾಕಿ ತಾನೇ ಶಾಪಗ್ರಸ್ತನಾಗಿದ್ದಾನೆ. ಅವನ ಭಾವ, ನನ್ನ ತಂಗಿಯ ಗಂಡ ನಟ ಡಾ.ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ತಂಗಿ (ಗೀತಾ ಶಿವರಾಜಕುಮಾರ್) ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ. ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ. ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ. ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು ಎಂದು ಕುಮಾರ್ ಬಂಗಾರಪ್ಪ ಬರೆದುಕೊಂಡಿದ್ದಾರೆ.