ಲೋಕಸಭಾ ಚುನಾವಣೆ | ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ: ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಇಂದು (ಎ.12) ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಕೋಟೆ ಸೀತಾರಾಂಜನೇಯ ದೇವಸ್ಥಾನ ಹಾಗೂ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ತರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ರಾಮಣ್ಣಶ್ರೇಷ್ಠಿ ಪಾರ್ಕ್‌ನಲ್ಲಿ ಜಮಾಯಿಸಿದ ಕೆ.ಎಸ್.ಈಶ್ವರಪ್ಪ ಅಭಿಮಾನಿಗಳು, ಬೆಂಬಲಿಗರು ಬಾವುಟ ಹಿಡಿದು ಘೋಷಣೆ ಮೊಳಗಿಸಿದರು. ಈಶ್ವರಪ್ಪ ಅವರನ್ನು ಬೆಂಬಲಿಸಲು ನಗರದ ಪ್ರಮುಖ ಬೀದಿಗಳಲ್ಲಿ ಅಭಿಮಾನಿಗಳು , ಬೆಂಬಲಿಗರು ನೆರದಿದ್ದರು.
ಗಮನ ಸೆಳೆದ ಮೋದಿ :
ಈಶ್ವರಪ್ಪ ರೋಡ್ ಶೋ ವೇಳೆ ನರೇಂದ್ರ ಮೋದಿಯ ತದ್ರೂಪಿ ವ್ಯಕ್ತಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ರಾಷ್ಟ್ರಭಕ್ತರ ಬಳಗ ಹೆಸರಿನ ವಾಹನದಲ್ಲಿ ರಾಮ, ಹನುಮ ಮತ್ತು ಕಪಿ ಸೇನೆಯ ವೇಷಧಾರಿಗಳು, ಹಾಗೂ ವಿವಿಧ ವೇಷಧಾರಿಗಳು, ವಾದ್ಯಗಳೊಂದಿಗೆ ಈಶ್ವರಪ್ಪ ಅವರು ರೋಡ್ ಶೋ ನಡೆಸಿದರು. ವಾಹನದಲ್ಲಿ ಮೋದಿ ಹಾಗೂ ಈಶ್ವರಪ್ಪ ಅವರ ಫೊಟೋ ಇದ್ದ ಫ್ಲೆಕ್ಸ್ ಅನ್ನು ಅಳವಡಿಸಲಾಗಿತ್ತು.