ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಣಕ್ಕೆ ಸರಕಾರದಿಂದ ಕಠಿಣ ಕ್ರಮ : ಎಂ.ಬಿ.ಪಾಟೀಲ್

ಎಂ.ಬಿ.ಪಾಟೀಲ್
ಶಿವಮೊಗ್ಗ: ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಣಕ್ಕೆ ರಾಜ್ಯ ಸರಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಿಸಲು ಸರಕಾರ ಸುಗ್ರೀವಾಜ್ಞೆಯನ್ನು ನಿಶ್ಚಿತವಾಗಿ ಹೊರಡಿಸಲಿದೆ. ಇದಕ್ಕೆ ಕೇಂದ್ರ ಸರಕಾರವೂ ಸಹ ನೆರವು ನೀಡಬೇಕು. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ, ಆಗಲೂ ಸಹ ಐಎಂಎ ಹಗರಣ ಆಗಿತ್ತು. ಈಗ ಮೈಕ್ರೋ ಫೈನಾನ್ಸ್ ಹಾವಳಿ ಎಲ್ಲಾ ಕಡೆ ಇದೆ. ಇದಕ್ಕೆ ನಾವು ಅಂತ್ಯ ಹಾಡಬೇಕಿದೆʼ ಎಂದರು.
ʼಇನ್ನು ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನನ್ನು ತರಬೇಕಿದ್ದು, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಬೇಕಿದೆ. ದುಬಾರಿ ಬಡ್ಡಿಯಿಂದಾಗಿ ಜನರು ಅವಮಾನ ಸಹಿಸದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ಆಗಬಾರದು. ಹೀಗಾಗಿ ರಾಜ್ಯ ಸರಕಾರಕ್ಕೆ ಹೊಸ ಕಾನೂನು ತರಲು ಆರ್‌ಬಿಐ ಕೂಡ ಸಹಮತ ವ್ಯಕ್ತಪಡಿಸಬೇಕು. ಅವರು ಸಹ ಸೂಕ್ತ ಕಾನೂನು ತಂದು ಮೈಕ್ರೋ ಫೈನಾನ್ಸ್‌ನ ಹಾವಳಿಗೆ ಇತಿಶ್ರೀ ಹಾಡಬೇಕು. ಮೈಕ್ರೋ ಫೈನಾನ್ಸ್ ಹಾವಳಿಯಿಂದ ನೊಂದವರಿಗೆ ಸರಕಾರ ನಿಶ್ವಿತವಾಗಿ ನೆರವು ನೀಡಲಿದೆ ಎಂದರು.