ಶಿವಮೊಗ್ಗ: ಕೆಎಫ್‌ಡಿ ಸೋಂಕಿಗೆ ಬಲಿಯಾದ ಯುವತಿಯ ಪ್ರಕರಣವನ್ನು ತನಿಖೆಗೆ ಒಳಪಡಿಸಿ: ಜನಜಾಗೃತಿ ಒಕ್ಕೂಟ

Update: 2024-01-11 17:36 GMT

ಶಿವಮೊಗ್ಗ: ಮಂಗನ ಕಾಯಿಲೆ (ಕೆಎಫ್‌ಡಿ) ಸೋಂಕಿಗೆ ಬಲಿಯಾದ ಯುವತಿಯ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಕೆಎಫ್ ಡಿ ಜನಜಾಗೃತಿ ಒಕ್ಕೂಟದ ಸಂಚಾಲಕ ಕೆ.ಪಿ.ಶ್ರೀಪಾಲ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಬಪ್ಪನಮನೆ ಗ್ರಾಮದ 18 ವರ್ಷದ ಯುವತಿ ಜ.8 ರಂದು ಕೆಎಫ್ ಡಿಗೆ ಬಲಿಯಾಗಿದ್ದಾಳೆ. ಆದರೆ, ಯುವತಿಯ ಸಾವಿನ ವಿಷಯದಲ್ಲಿ ಆರೋಗ್ಯ ಇಲಾಖೆ ವಾಸ್ತವಾಂಶಗಳನ್ನು ಮರೆಮಾಚಿ ಆಕೆಯ ಸಾವಿಗೆ ಕಾರಣವಾಗಿರುವುದಲ್ಲದೆ, ಮಾಹಿತಿಯನ್ನು ತಿರುಚಿ ಸಾರ್ವಜನಿಕರನ್ನು ಮತ್ತು ಸರ್ಕಾರವನ್ನು ದಿಕ್ಕುತಪ್ಪಿಸಿರುವುದು ದಾಖಲೆಸಹಿತ ಬಹಿರಂಗವಾಗಿದೆ. ಕೆಎಫ್ ಡಿ ಸೋಂಕು ಇರುವುದು ಗೊತ್ತಾಗಿದ್ದರೂ ನೆಗೆಟಿವ್ ವರದಿಕೊಟ್ಟು, ಆಕೆಗೆ ಚಿಕಿತ್ಸೆಯ ದಿಕ್ಕುತಪ್ಪಿಸಿ ಯುವತಿಯ ಸಾವಿಗೆ ಕಾರಣ ಆಗಿರುವ ಡಿಎಚ್‌ಒ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಯುವತಿಯ ರಕ್ತದ ಮೊದಲ ವೈರಸ್ ಪತ್ತೆ ಪರೀಕ್ಷೆಯೇ ಲೋಪವಾಗಿದ್ದರೂ, ಮರು ಪರೀಕ್ಷೆ ನಡೆಸುವ ಬದಲು ಫಲಿತಾಂಶ ನೆಗೆಟಿವ್ ಎಂದು ಸುಳ್ಳು ಮಾಹಿತಿ ನೀಡಿ ಆಕೆಯ ಚಿಕಿತ್ಸೆಯ ದಿಕ್ಕು‌ ತಪ್ಪಿಸಿದ್ದಾರೆ. ಆಕೆಗೆ ಸಕಾಲದಲ್ಲಿ ಸೂಕ್ತ ಪರೀಕ್ಷೆ ನಡೆಸಿ, ಪ್ರಾಮಾಣಿಕ ಫಲಿತಾಂಶ ನೀಡಿದ್ದರೆ, ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಲಭಿಸಿ ಆಕೆ ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತು ಆದರೆ, ಜಿಲ್ಲಾ ಆರೋಗ್ಯಾಧಿಕಾರಿಗಳು ಸುಳ್ಳು ಫಲಿತಾಂಶ ನೀಡಿ ಆಕೆಯ ಜೀವ ಹಾನಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಅದಲ್ಲದೆ ಮೃತ ಯುವತಿಯ ಸಹೋದರಿಯ ರಕ್ತದ ಮಾದರಿಯ ಪರೀಕ್ಷೆಯ ಫಲಿತಾಂಶವನ್ನು ಕೂಡ ತಿರುಚಿ, ಸುಳ್ಳು ವರದಿ ನೀಡಿ ಚಿಕಿತ್ಸೆಯ ದಿಕ್ಕು ತಪ್ಪಿಸಿ ಆಕೆಯ ಜೀವಕ್ಕೆ ಅಪಾಯ ತಂದಿದ್ದಾರೆ ಎಂದು ದೂರಿದ್ದರು.

ಜಿಲ್ಲಾ ಅರೋಗ್ಯಾಧಿಕಾರಿಗಳು ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದಂತೆ ಮೃತ ಯುವತಿಯ ಮೊದಲ ಕೆಎಫ್‌ಡಿ ವೈರಸ್ ಪರೀಕ್ಷೆ ನೆಗಟಿವ್ ಆಗಿರಲಿಲ್ಲ. ವಿಡಿಎಲ್‌ನಲ್ಲಿ ನಡೆಸಿದ ರಕ್ತದ ಮಾದರಿ ಪರೀಕ್ಷೆಯ ದತ್ತಾಂಶ ಮತ್ತು ಲಾಗ್‌ವರಗಳನ್ನು ಮರು ಪರಿಶೀಲಿಸಿದಾಗ ಯುವತಿಯ ರಕ್ತದ ಮಾದರಿಯ ಮೊದಲ ಪರೀಕ್ಷೆಯು ಜ.3ರಂದು ನಡೆದಿರುತ್ತದೆ. ಯಂತ್ರದ ಲಾಗ್‌ವಿವರದ ಪ್ರಕಾರ ಅಂದು ಮಧ್ಯಾಹ್ನ 01.24ಕ್ಕೆ ನಡೆದ ಪರೀಕ್ಷೆಯು ವಿಫಲವಾಗಿದೆ. ಹೀಗೆ ಒಮ್ಮೆ ಪರೀಕ್ಷೆ ನಡೆಸಿದಾಗ ಯಾವುದೇ ಫಲಿತಾಂಶ ಬರದೆ. ಪರೀಕ್ಷೆ ವಿಫಲವಾದಾಗ ಮರು ಪರೀಕ್ಷೆ ಮಾಡುವುದು ಇಲಾಖೆಯ ನಿಯಮಾವಳಿ. ಆದರೆ, ಈ ಪ್ರಕರಣದಲ್ಲಿ ಹಾಗೆ ಮರು ಪರೀಕ್ಷೆ ಮಾಡುವ ಮುನ್ನವೇ. ನೆಗೆಟಿವ್‌ಎಂದು ತರಾತುರಿಯಲ್ಲಿ ಸುಳ್ಳು ವರದಿ ನೀಡಲಾಗಿದೆ ಎಂದು ದೂರಿದರು.

ಹೀಗೆ ಸುಳ್ಳು ವರದಿ ನೀಡಿದ್ದರಿಂದ ಆಕೆಗೆ ಸಕಾಲದಲ್ಲಿ ಕೆಎಫ್‌ಡಿ ಸೋಂಕಿಗೆ ನೀಡಬೇಕಾದ ಚಿಕಿತ್ಸೆಯನ್ನು ನೀಡಲಾಗಲಿಲ್ಲ ವರದಿ ನೆಗೆಟಿವ್ ಎಂದು ಬಂದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡುವ ವೈದ್ಯರು ಸಹಜವಾಗೇ ಕೆಎಫ್‌ಡಿ ಹೊರತುಪಡಿಸಿ ಇತರೆ ಸಾಮಾನ್ಯ ಚಿಕಿತ್ಸೆ ನೀಡಿರುತ್ತಾರೆ. ಹಾಗಾಗಿ ಯುವತಿಯ ಆರೋಗ್ಯ ದಿಢೀರನೇ ಕ್ಷೀಣಿಸಿರುತ್ತದೆ. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ವೈದ್ಯರು ಮರು ಪರೀಕ್ಷೆಗೆ ರಕ್ತದ ಮಾದರಿ ಕಳಿಸಿಕೊಟ್ಟಿದ್ದರು. ಆಗ ಮತ್ತೊಮ್ಮೆ ಜ.4ರಂದು ಎರಡನೇ ಬಾರಿಗೆ ರಕ್ತದ ಮಾದರಿಯ ಪರೀಕ್ಷೆ ನಡೆಸಲಾಗಿತ್ತು. ಅಂದು ಬೆಳಿಗ್ಗೆ 11.17ಕ್ಕೆ ನಡೆಸಿದ ರಕ್ತದ ಮಾದರಿ  ಪರೀಕ್ಷೆಯಲ್ಲಿ ಕೆಎಫ್‌ಡಿ ವೈರಾಣು ಇರುವುದು ದೃಢಪಟ್ಟಿರುತ್ತದೆ. ಆಗಲೂ ಸಹ, ಸೋಂಕು ದೃಢಪಟ್ಟಿರುವ ವಿಚಾರವನ್ನು ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ತಿಳಿಸಿರುವುದಿಲ್ಲ. ಮತ್ತೊಮ್ಮೆ ಅದೇ ದಿನ ಮಧ್ಯಾಹ್ನ 1.53ಕ್ಕೆ ಮರು ಪರೀಕ್ಷೆ ನಡೆಸಿದಾಗಲೂ ಸೋಂಕು ಇರುವುದು ದೃಢಪಟ್ಟಿದೆ. ಆದರೂ ವೈದ್ಯರಿಗೆ ವಿಷಯ ತಿಳಿಸಿಲ್ಲ. ಮತ್ತೆ ಅಂದು ಸಂಜೆ 4.42ಕ್ಕೆ ಮತ್ತೊಮ್ಮೆ ಮರು ಪರೀಕ್ಷೆ ನಡೆಸಿದಾಗಲೂ ಸೋಂಕು ಇರುವುದು ಖಚಿತವಾಗಿದೆ ಎಂದು ತಿಳಿಸಿದರು.

ಮಲೆನಾಡಿನ ಜನರ ಪಾಲಿಗೆ ಭೀಕರ ದುಃಸ್ವಪ್ನವಾಗಿರುವ ಈ ಕೆಎಫ್‌ಡಿ ವಿಷಯದಲ್ಲಿ ಜೀವರಕ್ಷಕನಾಗಿ ಕೆಲಸ ಮಾಡಬೇಕಾದ ಡಿಎಚ್‌ಒ ಮತ್ತು ಆರೋಗ್ಯ ಇಲಾಖೆಯೇ ಜನರ ಜೀವಕಂಟಕವಾಗಿ ವರ್ತಿಸಿದೆ. ಅರಮನೆಕೊಪ್ಪ ಯುವತಿಯ ಪ್ರಕರಣದಲ್ಲಿ ಇದು ಸಾಕ್ಷಿಸಹಿತ ಸಾಬೀತಾಗಿದೆ. ಆಕೆಯ ಸಾವು ಸಹಜ ಸಾವಲ್ಲ. ಅದೊಂದು ವ್ಯವಸ್ಥಿತ ಕೊಲೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಸಂಬಂಧಪಟ್ಟ ಡಿಎಚ್ ಒ ಮತ್ತು ವಿಡಿಎಲ್‌ಲ್ಯಾಬ್‌ನ ಅಧಿಕಾರಿಗಳನ್ನು ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಜೊತೆಗೆ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇರುವುದರಿಂದ ಕೂಡಲೇ ವಿಡಿಎಲ್‌ಲ್ಯಾಬ್‌ಗೆ ಬೀಗಮುದ್ರೆ ಹಾಕಿ ಅಲ್ಲಿನ ದತ್ತಾಂಶ ಮತ್ತು ಇತರೆ ಸಾಕ್ಷ್ಯಗಳನ್ನು ರಕ್ಷಿಸಬೇಕಿದೆ. ಕೂಡಲೇ ಮೃತ ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಜೊತೆಗೆ ಆಕೆಯ ಸಹೋದರಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇಲಾಖೆ ಭರಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಂಜುನಾಥ್ ಗೌಡ, ಶಶಿ ಸಂಪಳ್ಳಿ, ಸುರೇಶ್ ಗೌಡ ಇದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News