ರಾಮ ಮಂದಿರ ಪ್ರತಿಷ್ಠಾಪನೆಯಿಂದ ಬಿಜೆಪಿಗೆ ಅನುಕೂಲವಾದೀತು ಎಂಬ ಭಯ ಕಾಂಗ್ರೆಸನ್ನು ಕಾಡುತ್ತಿದೆ: ಯಡಿಯೂರಪ್ಪ

Update: 2024-01-13 08:48 GMT

ಶಿವಮೊಗ್ಗ, ಜ.13: ರಾಮ ಮಂದಿರ ಪ್ರತಿಷ್ಠಾಪನೆ ಬಗ್ಗೆ ಕಾಂಗ್ರೆಸ್ ನವರಿಗೆ ಅಸಮಾಧಾನ, ಅತೃಪ್ತಿ ಇದೆ. ಬಿಜೆಪಿಯವರಿಗೆ ಅನುಕೂಲ ಆಗಬಹುದು ಅಂತಾ ಭಯ ಅವರಿಗೆ ಕಾಡುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಎಲ್ಲ ಪಕ್ಷದವರು ಬಂದು ಭಾಗವಹಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಾಗಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನಿ ಉಪವಾಸವಿದ್ದು ಸೇವೆ ಮಾಡುತ್ತಿದ್ದಾರೆ. ಇನ್ನಾದರೂ ಕಾಂಗ್ರೆಸ್ ನವರಿಗೆ ಸದ್ಬುದ್ಧಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿ. ಇಲ್ಲದಿದ್ದರೆ ಜನ ಈ ರೀತಿ ನಡವಳಿಕೆ ಸಹಿಸಲ್ಲ. ಇದರಿಂದ ಅವರಿಗೆ ತೊಂದರೆ ಆಗುತ್ತದೆ ಎಂದರು.

ಶಿವಮೊಗ್ಗದ ಫ್ರೀಡಂ ಪಾರ್ಕ್ ಗೆ ಅಲ್ಲಮ ಪ್ರಭು ಹೆಸರು ನಾಮಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ನಾನು ಅದರ ಬಗ್ಗೆ ಏನೇ ಟೀಕೆ ಟಿಪ್ಪಣಿ ಮಾಡಲ್ಲ. ಒಳ್ಳೆಯ ಕೆಲಸ ಯಾರು ಮಾಡಿದರೂ ಒಳ್ಳೆಯದು.ಎಲ್ಲರೂ ಸೇರಿ ಮಾಡಲಿ ಎಂದರು.

ಪೇಜಾವರ ಶ್ರೀ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಏನು ಹೇಳಿದರೋ ತಪ್ಪು ಕಲ್ಪನೆ ಬೇಡ, ಹಿಂದು ಮುಸ್ಲಿಮ್, ಕ್ರಿಶ್ಚಿಯನ್ ಅಂತಿಲ್ಲ. ಮುಸ್ಲಿಮರು ಪಾದಯಾತ್ರೆ ಮೂಲಕ ಹೋಗ್ತಿದ್ದಾರೆ. ಎಲ್ಲಾ ವರ್ಗದ ಜನ ಸಹಕಾರ ಕೊಡ್ತಿದ್ದಾರೆ. ರಾಮ ಎಲ್ಲರಿಗೂ ಬೇಕಾಗಿರುವಂತಹವನು. ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರಿಗೂ. ಈ ರೀತಿ ಭೇದಭಾವ ಮಾಡುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯ ಸರಕಾರದ ಗ್ಯಾರಂಟಿ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡುವುದಿಲ್ಲ. ಒಳ್ಳೆಯ ಕೆಲಸ ಮಾಡಿದ್ರೆ ಸ್ವಾಗತ ಎಂದರು.

ಲೋಕಸಭೆ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆ ದೃಷ್ಟಿಯಿಂದ ಪ್ರವಾಸ ಆರಂಭವಾಗಿದೆ. ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಎಲ್ಲಾ ಕಡೆ ಓಡಾಡಿ ಸಂಘಟನೆ ಮಾಡುತ್ತಿದ್ದಾರೆ. ರಾಜ್ಯಾದ್ಯಾಂತ ಒಳ್ಳೆಯ ಬೆಂಬಲ ಸಿಗುತ್ತಿದೆ. ಇನ್ನು 2-3 ದಿನ ಆದ ಮೇಲೆ ನಾನು ಸಹ ದಿನಕ್ಕೆ ಎರಡು ಜಿಲ್ಲೆಯಂತೆ ಪ್ರವಾಸ ಮಾಡುತ್ತೇನೆ. ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News