ಪ್ರಧಾನಿ ಮೋದಿ ಮಾಂಗಲ್ಯವನ್ನು ಎಳತಂದು ಮತ ಕೇಳುತ್ತಿರುವುದು ಕೀಳು ಮಟ್ಟದ ರಾಜಕಾರಣ : ಮಧು ಬಂಗಾರಪ್ಪ
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರು ಮಾಂಗಲ್ಯವನ್ನು ಮಧ್ಯ ತಂದು ಮತ ಕೇಳುವ ಮಟ್ಟಕ್ಕೆ ಹೋಗಿರುವುದು ಅತ್ಯಂತ ಅಪಾಯಕಾರಿ ಮತ್ತು ಕೀಳು ಮಟ್ಟದ ರಾಜಕಾರಣ ಎಂದು ಸಚಿವ ಮಧು ಬಂಗಾರಪ್ಪ ಟೀಕಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮಹಿಳೆಯರಿಗೆ ಗೌರವ ಕೊಡುತ್ತದೆ ಎಂಬ ಮಾತು ಸುಳ್ಳಾಗಿದೆ. ಪ್ರಧಾನಿ ಮೋದಿ ನಾನು ಈ ದೇಶದ ಪ್ರಧಾನಿ ಎಂಬುವುದನ್ನು ಮರೆತು ಮಹಿಳೆಯರನ್ನು ಮಧ್ಯ ತಂದು ಮಾಂಗಲ್ಯದ ವಿಷಯ ಪ್ರಸ್ತಾಪಿಸುತ್ತಾರೆ. ತಾಳಿ ಎನ್ನುವುದು ತುಂಬ ಪವಿತ್ರವಾದದ್ದು, ತಾಳ್ಮೆ ಇಲ್ಲದೆ ಅವರು ಮಾತನಾಡಿರುವುದು ಖಂಡನೀಯ ಎಂದರು.
ಜಾತಿ, ಧರ್ಮ, ರಾಮ, ಹಣ ಮುಂತಾದ ಆಟಗಳೆಲ್ಲ ಈಗ ಮುಗಿದ ಅಧ್ಯಾಯ. ಬಿಜೆಪಿ ಆಡಳಿತದಲ್ಲಿಯೇ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗಿರುವುದನ್ನು ಅಂಕಿ ಅಂಶಗಳೇ ಹೇಳುತ್ತಿವೆ. ಅದರಲ್ಲೂ ಗುಜರಾತ್ ಮೊದಲ ಸ್ಥಾನದಲ್ಲಿದೆ. ಎಲ್ಲಾ ಸರ್ಕಾರ ಇರುವಾಗಲೂ ಅಪರಾಧ ಚಟುವಟಿಕೆಗಳು ಇದ್ದೇ ಇದೆ. ರಾಜ್ಯದಲ್ಲೂ ಕೂಡ ಬಿಜೆಪಿ ಸರ್ಕಾರವಿದ್ದಾಗ ಹೆಚ್ಚಿನ ಅಪರಾಧಗಳು ಆಗಿವೆ. ನಮ್ಮ ಸರ್ಕಾರ ಬಂದ ನಂತರ ನಾವು ಕಾನೂನನ್ನು ಬಿಗಿಯಾಗಿ ತೆಗೆದುಕೊಂಡಿದ್ದೇವೆ ಎಂದರು.
ಬರ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದನ್ನು ಎತ್ತಿಹಿಡಿದಿದೆ. ನಮಗೆ ಬರಬೇಕಾದ ಹಣವನ್ನು ಅವರು ಕೊಡಲಿಲ್ಲ. ಕರ್ನಾಟಕದ ಯಾವ ಸಂಸದರು ಬರದ ಬಗ್ಗೆ ಮಾತನಾಡಲಿಲ್ಲ. ಈಗ ಸುಪ್ರೀಂ ಕೋರ್ಟ್ ಹೇಳಿದ ಮೇಲೆ ತೆಪ್ಪಗಾಗಿದ್ದರೆ ಎಂದರು.
ರೋಡ್ ಶೋ: ಕಾಂಗ್ರೆಸ್ ಶಿವಮೊಗ್ಗ ಜಿಲ್ಲೆಯಲ್ಲಿ ತನ್ನ ಪ್ರಚಾರವನ್ನು ಚುರುಕುಗೊಳಿಸಿದೆ. ಗೀತಾ ಶಿವರಾಜ್ ಕುಮಾರ್ ಅವರಿಗೆ ಕ್ರಮ ಸಂಖ್ಯೆ 1 ಸಿಕ್ಕಿದೆ. ಈಗಾಗಲೇ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಗೀತಾ ಮತ್ತು ಶಿವರಾಜ್ ಕುಮಾರ್ ಅವರು ಈಗಾಗಲೇ ಪಂಚಾಯ್ತಿ ಮಟ್ಟಕ್ಕೆ ಹೋಗಿ 3.5 ಲಕ್ಷ ಜನ ರೊಂದಿಗೆ ಮುಖಾಮುಖಿ ಯಾಗಿದ್ದಾರೆ. ಮುಂದಿನ ದಿನಗಳಲ್ಲಿ ರೋಡ್ ಶೋ, ಸಭೆ ಹೀಗೆ ವಿವಿಧ ರೀತಿಯಲ್ಲಿ ಇನ್ನೂ 4 ಲಕ್ಷ ಜನರ ತಲುಪುತ್ತೇವೆ. ಕಾರ್ಯಕರ್ತರು ನೀಟಾಗಿ ಕೆಲಸ ಮಾಡುತ್ತಿದ್ದಾರೆ. ಬೈಂದೂರು ಭಾಗದಲ್ಲಿ ರೋಡ್ ಶೋಗಳು ಕೂಡ ನಡೆಯಲಿವೆ ಎಂದರು.
ಹಿರಿತನ ಅರಿತು ಮಾತಾಡಲಿ:
ಈಶ್ವರಪ್ಪ ಅವರು ಹಿರಿಯ ರಾಜಾಕಾರಣಿ ಒಂದು ಕಡೆ ಗೀತಾ ನನ್ನ ಸಹೋದರಿ ಎನ್ನುತ್ತಾರೆ. ಮತ್ತೊಂದು ಕಡೆ ಕೀಳಾಗಿ ಮಾತನಾಡುತ್ತಾರೆ. ಡಮ್ಮಿ ಅಭ್ಯರ್ಥಿ ಎನ್ನುತ್ತಾರೆ. ಈ ವಯಸ್ಸಿಗೆ ಈಶ್ವರಪ್ಪನವರು ಈ ರೀತಿ ಮಾತನಾಡುವುದು ಸರಿಯಲ್ಲ . ಪುತ್ರನಿಗೆ ಟಿಕೆಟ್ ಕೊಡಿಸಲಾಗದ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಲಘುವಾಗಿ ಮಾತಾಡುವುದನ್ನು ಅವರು ನಿಲ್ಲಿಸಬೇಕು ಎಂದರು.