ವಿವಿಧ ಇಲಾಖೆಗಳ ಕಾಮಗಾರಿ ಪರಿಶೀಲನಾ ಸಭೆ | ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಮಧು ಬಂಗಾರಪ್ಪ

Update: 2024-11-27 16:55 GMT

ಶಿವಮೊಗ್ಗ: ಅಬ್ಬಲಗೆರೆ ಗ್ರಾಮದ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಹೂಳು ತೆಗೆದು ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಕಾಮಗಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಕ್ರಮವಾಗಿ ಹೂಳು ಸಾಗಿಸಿರುವ ಕುರಿತು ಜಿಪಂನ ಕಾರ್ಯಪಾಲಕ ಇಂಜಿನಿಯರ್ ನಡೆಸಿದ ತನಿಖೆಯಲ್ಲಿ ಸಾಬೀತಾಗಿದೆ. ಈವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರತಿಕ್ರಿಯಿಸಿ, ಕೆರೆಯ ಜಾಗವನ್ನು ತಪಾಸಣೆ ನಡೆಸಲಾಗಿದೆ.ಅಕ್ರಮ ನಡೆದಿರುವ ವರದಿ ತಲುಪಿದೆ. ಕ್ರಮ ಕೈಗೊಳ್ಳಲಾಗುವುದು ಎಂದು ಸಮಜಾಯಿಸಿ ನೀಡಲು ಪ್ರಯತ್ನಿಸಿದರು. ಇದಕ್ಕೆ ಗರಂ ಆದ ಸಚಿವರು, ನಾನು ಸಚಿವನಾಗಿ ಒಂದೂವರೆ ವರ್ಷ ಕಳೆದಿದೆ.ಇಲ್ಲಿಯವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ, ಮುಖ್ಯಮಂತ್ರಿಯವರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು ಶೀಘ್ರದಲ್ಲೇ ವರದಿ ನೀಡುವಂತೆ ಸೂಚನೆ ನೀಡಿದರು.

ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ವಸತಿ ಗೃಹವನ್ನು ನೀಡಲಾಗಿದೆ.ವಸತಿ ಗೃಹವನ್ನು 17 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಿದ್ದಾರೆ. ಆದರೆ ಈಗ ಅದರ ಖರ್ಚು 2 ಕೋಟಿ ರೂ. ಗೂ ಹೆಚ್ಚಾಗಿದೆ.ಝೆಡ್ ಪ್ಲಸ್ ಭದ್ರತೆಯ ಮಾದರಿಯಲ್ಲಿ ವಸತಿ ಗೃಹ ನಿರ್ಮಾಣ ಮಾಡಿಕೊಂಡಿದ್ದಾರೆ.ಬೇರೆಯವರಿಗೂ ಹಾಗೆ ಅವಕಾಶ ಕೊಡ್ತೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ವಸತಿ ಗೃಹ ನವೀಕರಣಕ್ಕೆ 17 ಲಕ್ಷ ರೂ. ಖರ್ಚಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ 2 ಕೋಟಿ ರೂ.ಗೂ ಹೆಚ್ಚಾಗಿದೆ. ನವೀಕರಣಕ್ಕೆ ಭ್ರಷ್ಟಾಚಾರದ ಹಣ ಬಳಕೆಯಾಗಿದೆ ಎಂಬ ಮಾಹಿತಿ ಬಂದಿದೆ. ಈ ಬಗ್ಗೆ ಅಧಿಕಾರಿಗಳು ತಪಾಸಣೆ ನಡೆಸಿ,ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದರು.

ಇಲ್ಲಿನ ಶಾಹೀ ಗಾರ್ಮೆಂಟ್ಸ್‌ನಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಜಿಲ್ಲಾಡಳಿತದ ಸೂಚನೆಯನ್ನು ನಿರ್ಲಕ್ಷಿಸಲಾಗಿದೆ. ಇಲ್ಲಿ ರೈತರ ಜಮೀನು ಒತ್ತುವರಿಗೆ ಕೂಡಲೇ ಕ್ರಮ ಜರುಗಿಸಲಾಗುತ್ತದೆ. ಇದೇ ಕ್ರಮ ಶಾಹೀ ಗಾರ್ಮೆಂಟ್ಸ್ ವಿರುದ್ಧ ಏಕೆ ಇಲ್ಲ ಎಂದು ಪ್ರಶ್ನಿಸಿದ ಸಚಿವರು, ಇಲ್ಲಿ 15,000 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ, ಕಾರ್ಖಾನೆಯನ್ನು ಮುಚ್ಚಲು ಆದೇಶಿಸುವುದಿಲ್ಲ. ಆದರೆ, ಕೂಡಲೇ ಶಿಸ್ತು ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಇದಕ್ಕೆ ಪರಿಸರ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ, ಕಾರ್ಖಾನೆಯ ಪಕ್ಕದಲ್ಲಿರುವ ಕೆರೆ ಕಲುಷಿತಗೊಳ್ಳದಂತೆ ಎಸ್‌ಇಟಿಪಿ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದಕ್ಕೆ ಗರಂ ಆದ ಸಚಿವರು, ವರದಿ ಬಂದಿದೆ, ಯಾಕೆ ಕ್ರಮ ಕೊಂಡಿಲ್ಲ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ನಾನು ಅಧಿಕಾರಿಯಾಗಿ ಬಂದು 6 ತಿಂಗಳಾಗಿದೆ ಎಂದು ಸಮಜಾಯಿಷಿ ಕೊಡಲು ಮುಂದಾದರು. ಗರಂ ಆದ ಸಚಿವ ಮಧು ಬಂಗಾರಪ್ಪ, ನಾನು ಸಚಿವನಾಗಿ ಬಂದು ಇಂದಿಗೆ ಒಂದೂವರೆ ವರ್ಷ ಆಗಿದೆ. ನಾನು ಸಂಬಂಧವಿಲ್ಲವೆಂದು ಕೈತೊಳೆದುಕೊಳ್ಳಬಹುದಾ? ಮೊದಲು ಕ್ರಮ ಜರುಗಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಎನ್.ಹೇಮಂತ್ ಇದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News