ವಕೀಲನ ಮೇಲೆ ಪೊಲೀಸರ ಹಲ್ಲೆ ಪ್ರಕರಣ: ವಕೀಲರ ಮೇಲಿನ ಪ್ರಕರಣಗಳಿಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್

Update: 2023-12-04 17:33 GMT

ಚಿಕ್ಕಮಗಳೂರು: ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಗರ ಠಾಣೆಯ 6 ಮಂದಿ ಪೊಲೀಸರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ನಗರ ವ್ಯಾಪ್ತಿಯ 6 ಪೊಲೀಸ್ ಠಾಣೆಗಳ ಸಿಬ್ಬಂದಿ ಶನಿವಾರ ಇಡೀ ರಾತ್ರಿ ರಸ್ತೆ ತಡೆ ನಡೆಸಿ ಧರಣಿ ಮಾಡಿದ್ದ ಹಿನ್ನೆಲೆಯಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಸೇರಿದಂತೆ 9ಕ್ಕೂ ಹೆಚ್ಚು ಮಂದಿ ವಕೀಲರ ವಿರುದ್ಧವೂ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ವಕೀಲರ ಮೇಲಿನ ಈ ಪ್ರಕರಣಕ್ಕೆ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ಈ ಮಧ್ಯೆ ಪೊಲೀಸ್ ಸಿಬ್ಬಂದಿ ಪರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಲು ಬಂದಿದ್ದ ನಿವೃತ್ತ ಪೊಲೀಸರ ಸಂಘದ ರಾಜ್ಯ ಉಪಾಧ್ಯಕ್ಷರೊಬ್ಬರಿಗೆ ನಗರದ ಪೊಲೀಸರು ಸುದ್ದಿಗೋಷ್ಠಿ ನಡೆಸಲು ಅವಕಾಶ ನೀಡದ ಘಟನೆಯೂ ನಡೆಯಿತು.

ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕಳೆದ ಗುರುವಾರ ರಾತ್ರಿ ವಕೀಲರು ನಗರ ಠಾಣೆ ಎದುರು ಜಮಾಯಿಸಿ ಮಧ್ಯರಾತ್ರಿವರೆಗೂ ಧರಣಿ ನಡೆಸಿ ಹಲ್ಲೆ ಮಾಡಿದ ಆರೋಪಿಗಳನ್ನು ಅಮಾನತು ಮಾಡಿ ಬಂಧಿಸಬೇಕೆಂದು ಪಟ್ಟು ಹಿಡಿದಿದ್ದರು. ವಕೀಲರ ಧರಣಿ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ನಗರ ಠಾಣೆಯ ಪಿಎಸ್ಸೈ ಮಹೇಶ್  ಸೇರಿದಂತೆ 6 ಮಂದಿ ಪೊಲೀಸರನ್ನು ಅಮಾನತು ಮಾಡಿ ಎಸ್ಪಿ ಆದೇಶಿಸಿದ್ದರು. ಅಮಾನತಾದ ಪೊಲೀಸರ ವಿರುದ್ಧ ನಗರ ಠಾಣೆಯಲ್ಲಿ ವಕೀಲ ಪ್ರೀತಮ್ ನೀಡಿದ್ದ ದೂರಿನ ಮೇರೆಗೆ ಎಫ್‍ಐಆರ್ ದಾಖಲಾಗಿದ್ದು, ಅಮಾನತಾದ ಪೊಲೀಸರನ್ನು ಬಂದಿಸಬೇಕೆಂದು ಆಗ್ರಹಿಸಿ ಶುಕ್ರವಾರ ವಕೀಲರು ನಗರದಲ್ಲಿ ಪ್ರತಿಭಟನೆ ನಡೆಸಿದ್ದರು.

ವಕೀಲರ ಧರಣಿಗೆ ಪ್ರತಿಯಾಗಿ ಶುಕ್ರವಾರ ಸಂಜೆ ನಗರ ವ್ಯಾಪ್ತಿಯ 6 ಪೊಲೀಸ್ ಠಾಣಾ ವ್ಯಾಪ್ತಿಯ ಅಧಿಕಾರಿ, ಸಿಬ್ಬಂದಿ ತಮ್ಮ ಕೆಲಸ ಸ್ಥಗಿತಗೊಳಿಸಿ ನಗರದ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆಸಿ, ವಕೀಲರು ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಎಫ್‍ಐಆರ್ ಪ್ರತಿಯನ್ನು ಹರಿದು ಹಾಕಿದ್ದಾರೆ. ಎಸ್ಪಿ ಕಾರನ್ನು ಅಡ್ಡಗಟ್ಟಿದ್ದಾರೆ. ವಕೀಲ ಪ್ರೀತಮ್ ಪೊಲೀಸ್ ಪೇದೆ ಗುರುಪ್ರಸಾದ್ ಕಪಾಳಕ್ಕೆ ಬಾರಿಸಿದ್ದಾರೆ. ಠಾಣೆಯಲ್ಲಿ ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಿದ ಹಾಗೂ ಹಲ್ಲೆ ನಡೆಸಿದ ವಕೀಲರ ವಿರುದ್ಧ ದೂರು ದಾಖಲಿಸಬೇಕು. ಅಮಾನತಾಗಿರುವ ಪೊಲೀಸರ ಮೇಲಿನ ಪ್ರಕರಣವನ್ನು ಹಿಂಪಡೆಯಬೇಕು, ಆರೋಪಿ ಸ್ಥಾನದಲ್ಲಿರುವ ಪೊಲೀಸರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬಾರದು ಎಂದು ಆಗ್ರಹಿಸಿ ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆವರೆಗೂ ಧರಣಿ ನಡೆಸಿದ್ದರು.

ಈ ಧರಣಿ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಸುಧಾಕರ್ ಸೇರಿದಂತೆ 9ಕ್ಕೂ ಹೆಚ್ಚು ಮಂದಿ ವಕೀಲರ ವಿರುದ್ಧ ಆರೋಪಿ ಸ್ಥಾನದಲ್ಲಿರುವ ಪೊಲೀಸರು ನೀಡಿರುವ ದೂರಿನನ್ವಯ ನಗರ ಠಾಣೆಯಲ್ಲಿ 4 ಎಫ್‍ಐಆರ್ ದಾಖಲಿಸಿಕೊಳ್ಳಲಾಗಿತ್ತು. ಆದರೆ ಸೋಮವಾರ ವಕೀಲರ ಮೇಲೆ ನಗರ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ಗಳಿಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ತಡೆಯಾಜ್ಞೆ ಸುದ್ದಿ ಹೊರಬೀಳುತ್ತಿದ್ದಂತೆ ನಗರದ ಜಿಲ್ಲಾ ನ್ಯಾಯಾಲಯದ ಆವರಣದ ಎದುರು ಜಮಾಯಿಸಿದ ವಕೀಲರು ಸಂಭ್ರಮಾಚರಣೆ ನಡೆಸಿದ್ದು, ಚಿಕ್ಕಮಗಳೂರು ನಗರದ ವಕೀಲರಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಸೋಮವಾರ ಹಾಸನ, ಶಿವಮೊಗ್ಗ, ಮಂಗಳೂರು, ಉಡುಪಿ ಜಿಲ್ಲೆಗಳ ವಕೀಲರು ನಗರಕ್ಕಾಗಮಿಸಿದ್ದು, ಈ ವಕೀಲರೂ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ನಗರದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ವಕೀಲರು ಮತ್ತು ಪೊಲೀಸರ ನಡುವಿನ ಸಂಘರ್ಷದಲ್ಲಿ ಸದ್ಯ ವಕೀಲರು ಮೇಲುಗೈ ಸಾಧಿಸಿದಂತಾಗಿದೆ.

ಸುದ್ದಿಗೋಷ್ಠಿಗೆ ಅಡ್ಡಿ: ನಗರದಲ್ಲಿ ವಕೀಲರು ಮತ್ತು ಪೊಲೀಸರ ನಡುವಿನ ಸಂಘರ್ಷ ಸಂಬಂಧ ಸೋಮವಾರ ಮಡಿಕೇರಿಯಿಂದ ಆಗಮಿಸಿ ಅಮಾನತಾಗಿರುವ ಪೊಲೀಸರ ಪರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಲು ಮುಂದಾಗಿದ್ದ ನಿವೃತ್ತ ಪೊಲೀಸರ ಸಂಘದ ರಾಜ್ಯ ಉಪಾಧ್ಯಕ್ಷ ಅಣ್ಣಯ್ಯ ಅವರನ್ನು ತಡೆದ ಪೊಲೀಸರು ಸುದ್ದಿಗೋಷ್ಠಿ ನಡೆಸದಂತೆ ತಡೆದು ಎಸ್ಪಿ ಕಚೇರಿಗೆ ಕರೆದೊಯ್ದ ಘಟನೆ ನಡೆಯಿತು. ಅಣ್ಣಯ್ಯ ಅವರು ಪೊಲೀಸ್ ಇಲಾಖೆಯಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ್ವಯಂ ನಿವೃತ್ತಿ ಪಡೆದವರಾಗಿದ್ದು, ಪೊಲೀಸರನ್ನು ಅಮಾನತು ಮಾಡಿರುವ ಹಿರಿಯ ಪೊಲೀಸ್ ಅಧಿಕಾರಿಗಳ ಕ್ರಮದ ಬಗ್ಗೆ ಅಣ್ಣಯ್ಯ ಆಕ್ರೋಶ ವ್ಯಕ್ತಪಡಿಸಿ, ತಮ್ಮ ಕೈಕೆಳಗಿನ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪರ ನಿಲ್ಲದ ಅಧಿಕಾರಿಗಳು ನೊಂದ ಪೊಲೀಸರ ಪರ ಮಾತನಾಡಲೂ ಅಡ್ಡಿ ಪಡಿಸುತ್ತಿದ್ದಾರೆ. ಪೊಲೀಸರ ಪರನಾದ ಹೋರಾಟವನ್ನೂ ಹಿರಿಯ ಪೊಲೀಸ್ ಅಧಿಕಾರಿಗಳು ಹತ್ತಿಕ್ಕಿದ್ದಾರೆ. ಪೊಲೀಸರಿಗೆ ತೊಂದರೆಯಾದರೇ ಸಂಘದ ವತಿಯಿಂದ ಇಡೀ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವಕೀಲರ ಗುಂಪು ಎಸ್ಪಿ ಎದುರೇ ಎಫ್‍ಐಆರ್ ಪ್ರತಿಯನ್ನು ಹರಿದು ಹಾಕಿದ್ದಾರೆ. ವಕೀಲ ಪ್ರೀತಮ್ ಪೇದೆಯೊಬ್ಬರ ಕಪಾಳಕ್ಕೆ ಹೊಡೆದಿದ್ದಾರೆ. ಠಾಣೆಯಲ್ಲಿ ದಾಂಧಲೆ ನಡೆಸಿರುವ ವಕೀಲರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಬೇಕು ಎಂದು ಈ ವೇಳೆ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News